--Ads--

ಇತರರ ಗೆಲುವಿನಲ್ಲಿ ನನ್ನ ಗೆಲುವಿದೆ…!!

On: May 22, 2026 4:19 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಇತರರ ಗೆಲುವಿನಲ್ಲಿ ನನ್ನ ಗೆಲುವಿದೆ…!!

ಬದುಕಿನ ಗೆಲುವು ನಿಂತಿರುವುದೇ ನಮ್ಮ ಆಯ್ಕೆಗಳ ಮೇಲೆ ಎಂಬುದಂತೂ ಸತ್ಯದ ಮಾತು. ಬದುಕು ಆಯ್ಕೆಗಳ ಆಗರ. ನಾವು ಮಾಡುವ ಪ್ರತಿ ಆಯ್ಕೆಯೂ ಸುಲಭದ್ದಾಗಿರುವುದಿಲ್ಲ. ಕೆಲವೊಮ್ಮೆ ಎಂಥ ಇಕ್ಕಟ್ಟಿಗೆ ಸಿಲುಕಿಕೊಂಡು ಬಿಡುತ್ತೇವೆ  ಎಂದರೆ ಯಾವುದನ್ನು ಆಯ್ಕೆ  ಮಾಡಿಕೊಳ್ಳಬೇಕೆಂಬುದು ಜಟಿಲ ಸವಾಲೆನಿಸಿ ಬಿಡುತ್ತದೆ. ಬಾಯಲ್ಲಿ ಬಿಸಿ ತುಪ್ಪ ಹಾಕಿಕೊಂಡ ಸ್ಥಿತಿ ಉಗುಳಿದರೆ ಬೆಲೆ ಬಾಳುವ ತುಪ್ಪ ಹಾಳಾಗುತ್ತದೆ. ನುಂಗಿದರೆ ಕರುಳು ಸುಡುತ್ತದೆ. ಅಂಥ ಪರಿಸ್ಥಿತಿಯಲ್ಲೂ ಹೃದಯವಂತಿಕೆಯಿಂದ ಆಯ್ಕೆ ಮಾಡಿಕೊಂಡರೆ ಎಂಥ ಸೊಗಸು ಬದುಕು ಎನಿಸುವುದು. ಇಂಥದ್ದೇ ಒಂದು ಕಥೆ ಓದಿದ ನೆನಪಾಗುತ್ತಿದೆ. ತಾವೂ ಓದಿ.

1968ರ ವಿಶೇಷ ಓಲಿಂಪಿಕ್ ಅಂಗವಿಕಲರ ಓಟದ ಸ್ಪರ್ಧೆಯಲ್ಲಿ  ಮೂವರು ಗಾಲಿ ಕುರ್ಚಿಯಲ್ಲಿ ಪಾಲ್ಗೊಂಡರು. ಎಲ್ಲ ಓಟದ ಸ್ಪರ್ಧೆಯಲ್ಲಿರುವಂತೆ ಅಂಪೈರ್ ಸೀಟಿ ಊದಿದ. ತಕ್ಷಣ ಆ ಮೂವರು ತಮ್ಮ ಗಾಲಿ ಕುರ್ಚಿಯಲ್ಲಿ ವೇಗವಾಗಿ ಹೋಗಲು ಶುರು ಮಾಡಿದರು. ಅದರಲ್ಲಿ ಕಿಮ್ ಎಂಬ ಹುಡುಗನು ಇನ್ನೇನು ಗೆಲ್ಲುವನು ಎಂದು ಎಲ್ಲರೂ ಕಣ್ಣು ಬಿಟ್ಟು ನೋಡುವ ಸಮಯದಲ್ಲಿ ಒಂದು ಅನೂಹ್ಯ ಘಟನೆ ನಡೆಯಿತು. ಒಮ್ಮಿಂದೊಮ್ಮೆಲೇ ಹಿಂದೆ ಬರುತ್ತಿದ್ದ ಎರಡು: ಗಾಲಿ ಕುರ್ಚಿಗಳು ಗುದ್ದಿಕೊಂಡು ನಿಂತು ಬಿಟ್ಟವು. ಅದನ್ನು ನೋಡಿದ  ಕಿಮ್ ಹಿಂದೆ ಬಂದು ಆ ಗಾಲಿ ಕುರ್ಚಿಗಳನ್ನು ಬೇರ್ಪಡಿಸಿ.ಎರಡನ್ನೂ ಒಂದರ ಹಿಂದೆ ಒಂದನ್ನು ಬಲವಾಗಿ ಮುಂದಕ್ಕೆ ತಳ್ಳಿದ  ಅವು ಹಾಗೆ ಮುಂದಕ್ಕೆ ಓಡತೊಡಗಿದವು. ತತ್ಪರಿಣಾಮವಾಗಿ ಆ ಇಬ್ಬರೂ ಪ್ರಥಮ ದ್ವಿತೀಯ ಸ್ಥಾನದಲ್ಲಿ ನಿಂತರು.

ಅದನ್ನು ಕಂಡ ಕಿಮ್ ಅವರಿಬ್ಬರನ್ನು ಗೆಲ್ಲಿಸಿದ್ದಕ್ಕೆ ಸಂತೋಷದಿಂದ ಚಪ್ಪಾಳೆ ತಟ್ಟುತ್ತ ಅರಚಿದ. ಅವರಿಗೆ ಗೆಲುವು ಉಂಟಾಗಿಸಿದ್ದಕ್ಕೆ ಸಂಭ್ರಮಿಸುವುದರಲ್ಲಿ ಮಗ್ನನಾಗಿದ್ದ ಆತ ತಾನು ಸೋತಿರುವುದನ್ನು ಮರೆತು ಅವರ ಗೆಲುವಿಗೆ ಖುಷಿ ಪಡುತ್ತಿದ್ದ. ಅದನ್ನು ಕಂಡು ನೆರೆದಿದ್ದ ಪ್ರೇಕ್ಷಕರು ಬೆರಗಾದರು. ಪ್ರೇಕ್ಷಕರೆಲ್ಲರೂ ಆನಂದ ತುಂದಿಲರಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ ಆತನಿಗೆ ಮೆಚ್ಚುಗೆ ಸೂಚಿಸಿದರು.ಆತ ಗೆಲ್ಲದಿದ್ದರೂ ಪತ್ರಿಕೆಯವರು ಕಿರ್ವನನ್ನು ನಿಜವಾದ : ವಿಜೇತನೆಂದು ವರ್ಣಿಸಿದವು. ನೆರೆದ ಪ್ರೇಕ್ಷಕರೆಲ್ಲ ಆತನನ್ನು ರಿಯಲ್ : ಹೀರೋ ಎಂದು ಹಾಡಿ ಹೊಗಳಿದರು.

ಓಲಿಂಪಿಕ್ ಆಟದಲ್ಲಿ ಭಾಗವಹಿಸಿ ಗೆಲ್ಲಬೇಕೆನ್ನುವ ಮಹದಾಸೆ ಪ್ರತಿ ಆಟಗಾರನಲ್ಲೂ ಇದ್ದೇ ಇರುತ್ತದೆ. ಆದರೆ ತಾನು ಗೆಲ್ಲುವ  ಅವಕಾಶವಿದ್ದರೂ ಅದನ್ನು ತಳ್ಳಿ ಇತರೆ ಸ್ಪರ್ಧಿಗಳನ್ನು ಗೆಲ್ಲಿಸಿ ದಿವ್ಯಾನಂದ ಹೊಂದಿದ ಮಂದಹಾಸ ಬೀರಿದ ಕಿಮ್ ಆದರ್ಶ ಎನಿಸುತ್ತಾನೆ. ಅವನ ಉದಾರ ಗುಣ ಎಲ್ಲರೂ ಹೆಮ್ಮೆಯಿಂದ ಭುಜ ತಟ್ಟುವಂತೆ ಮಾಡಿತು. ತುಳಿಯಲ್ಪಟ್ಟಿರುವ ದಾರಿಗಳು ಸೋತವರಿಗೆ ಮಾತ್ರ ಎಂಬ ಮಾತು ಗೆಲುವಿನ ಸರದಾರರಿಗೆ ಚೆನ್ನಾಗಿ ಗೊತ್ತಿರುತ್ತದೆ.  ಆದ್ದರಿಂದಲೇ ಯಶಸ್ವಿ ವ್ಯಕ್ತಿಗಳು ಯಾವಾಗಲೂ ಕಠಿಣವೆನಿಸಿದರೂ ಸರಿ ವಿಭಿನ್ನ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗೆಲುವನ್ನು ರೂಪಿಸುವಲ್ಲಿ ಆಯ್ಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಬುದ್ಧಿಮತ್ತೆಯ ಮೂಲಕ ಒಳ್ಳೆಯದನ್ನು ಆರಿಸಿಕೊಳ್ಳುವ ಸಾಮರ್ಥ್ಯ ಮನುಷ್ಯನಿಗೆ ಒಲಿದಿದೆ. ಹೆಜ್ಜೆ ಹೆಜ್ಜೆಗೂ ಕಾಡುವ ಆಯ್ಕೆಗಳಲ್ಲಿ ನಕಾರಾತ್ಮಕತೆಯನ್ನು ತುಂಬುತ್ತ ಹೋದರೆ ಉದಾರ ಗುಣದ ಗೆಲುವಿನ ಪ್ರಚಂಡ ಬಲ ದಕ್ಕುವುದೇ ಇಲ್ಲ. ಯಾವಾಗಲೂ ನನ್ನ ಗೆಲುವೇ ಗೆಲುವು ಎಂದುಕೊಳ್ಳುವುದು ಇತರರ ನೆದರಿನಲ್ಲಿ ನಮ್ಮನ್ನು ಕೆಳಕ್ಕೆ ತಳ್ಳುತ್ತದೆ.

ಇತರರ ಗೆಲುವಿನಲ್ಲಿ ನಮ್ಮ ಗೆಲುವನ್ನು ಕಾಣುವ ಗುಣ ಜೀವನಕ್ಕೆ ಹೊಸ ಹುರುಪು ತುಂಬುವುದು. ಸೋಲಿನಲ್ಲೂ ಉತ್ಸಾಹ ಹರ್ಷ ಹೆಚ್ಚುವುದು. ಒಲವಿನ ಬಂಧನದ ಬೆಸುಗೆಯನ್ನು ಗಟ್ಟಿಗೊಳಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ನಾನು ಸೋತು ನನ್ನ ನಂಬಿದವರನ್ನು, ಕುಟುಂಬವನ್ನು, ಗೆಳೆಯರನ್ನು ಗೆಲ್ಲಿಸುತ್ತೇನೆ ಎಂಬುದು ಆತ್ಮ ಸಂತೃಪ್ತಿ ನೀಡುತ್ತದೆ.

ತಪ್ಪು ಯಾರದೇ ಇರಲಿ ಸರಿ ಹೆಜ್ಜೆ ನನ್ನದಾಗಿರಲಿ ಎನ್ನುವ ಮನೋಭಾವ ನಮ್ಮನ್ನು ಇತರರ ಮನದ ಮನೆಯಲ್ಲಿ ಮನೆ ಮಾಡುವಂತೆ ಮಾಡುತ್ತದೆ. ಬದುಕು ಎನ್ನುವುದು ನಾಲ್ಕು ಗೋಡೆಗಳ ಜಾಗವಿದ್ದಂತೆ. ಅದರಲ್ಲಿ ಎಲ್ಲೆಲ್ಲೂ ಖಾಲಿತನವೇ ತುಂಬಿರುತ್ತದೆ. ಅದನ್ನು ಆಪ್ತ ನಗುವಿನಿಂದ ತುಂಬುವ ಕಲೆ ಒಲಿಸಿಕೊಳ್ಳಬೇಕು. ಆಗ ಜೀವನ ನಸು ನಗುತ್ತದೆ. ಮನದ ಮುಂಗುರುಳು ಮೃದು ಹೃದಯದ ಮೇಲೆ ಲಾಸ್ಯವಾಡುತ್ತದೆ.

ಜಯಶ್ರೀ ಜೆ. ಅಬ್ಬಿಗೇರಿ, ಇಂಗ್ಲಿಷ್ ಉಪನ್ಯಾಸಕರು ಬೆಳಗಾವಿ 9449234142

 

WhatsApp

Join Now

Telegram

Join Now

Instagram

Join Now