ವಿಜಯ ದರ್ಪಣ ನ್ಯೂಸ್….
ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ

ಲೇಖನ: ಜಯಶ್ರೀ.ಜೆ. ಅಬ್ಬಿಗೇರಿ
9449234142
ಏನೋ ಹೊಸದೊಂದನ್ನು ಖರೀದಿಸಬೇಕೆಂದು ತುಂಬಾ ಹಂಬಲಿಸುತ್ತೇವೆ. ಕೈಯಲ್ಲಿ ಕಾಸಿಲ್ಲದೇ ಒದ್ದಾಡುತ್ತೇವೆ. ನಾನೊಬ್ಬ ದುರದೃಷ್ಟ ಜೀವಿ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ದುಡ್ಡಿದ್ದವರೆಲ್ಲ ಮೋಜು ಮಸ್ತಿ ಮಾಡುವುದನ್ನು ಕಂಡು ಒಳಗೊಳಗೆ ನೊಂದುಕೊಳ್ಳುತ್ತೇವೆ. ನನ್ನಪ್ಪ ನನಗಾಗಿ ಹಣ ಮಾಡಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವುದೂ ಇದೆ. ಕೆಲವೊಮ್ಮೆ ಕಣ್ಣೀರು ಸುರಿಸುವುದೂ ಇದೆ. ಮನದಲ್ಲಿ ಉದಯಿಸುವ ವಿಚಾರಗಳನ್ನು ಹೀಗೆ ಪಟ್ಟಿ ಮಾಡುತ್ತ ಹೋದರೆ ಹನುವiನ ಬಾಲದಂತಾಗುತ್ತದೆ. ಒಂದಂತೂ ನಿಜ ಇವೆಲ್ಲ ಏನೂ ಮಾಡಲಾಗದಂಥ ಮನಸ್ಥಿತಿಯಲ್ಲಿರುವ ವಿಚಾರಗಳು. ಬಲ್ಲವರು ಹೇಳುವಂತೆ ‘ಜಾಣತನ ಎಲ್ಲರ ಆಸ್ತಿ.’ ಅದನ್ನು ಜಾಸ್ತಿ ಬಳಸಿಕೊಳ್ಳದಿರುವುದೇ ಬಹುತೇಕ ಸಮಸ್ಯೆಗಳ ಮೂಲ. ನಾನು ನನ್ನದೆಂಬ ಸ್ವಾರ್ಥ ಪರ ದುರ್ವಿಚಾರಗಳ ನಿಯಂತ್ರಿಸಿದರೆ ಭಾವನೆಗಳು ಉದ್ವೇಗಗಳು ನಿಯಂತ್ರಣದಲ್ಲಿರುತ್ತವೆ. ಸನ್ನಿವೇಶಗಳು ನಮ್ಮ ಕೈಯಲ್ಲಿಲ್ಲ ನಿಜ. ಆದರೆ ಅವುಗಳಿಗೆ ಪ್ರತಿಸ್ಪಂದಿಸುವುದು ನಮ್ಮ ಕೈಯಲ್ಲಿದೆ. ಪ್ರತಿಸ್ಪಂದನ ನಮ್ಮ ಮನದ ಬಿಂಬ.
ಕೇಳುವ ವಿಚಾರಗಳಿರಲಿ
ದುರ್ವಿಚಾರಗಳಿಗೆ ಬೀಳುವುದು ಎಂದರೆ ಅಮೂಲ್ಯವಾದ ಬದುಕನ್ನು ಭ್ರಮೆಯ ಕೈಗೆ ನೀಡಿದಂತೆಯೇ ಸರಿ. ಇಂಥ ದೋಷಪೂರಿತ ಭ್ರಮೆಗಳಿಂದ ಹೊರಬಂದು ಬದುಕನ್ನು ಹೊಳೆಯುವಂತೆ ಮಾಡುವುದು ನಮ್ಮ ಬುದ್ಧಿವಂತಿಕೆಯಲ್ಲೇ ಇದೆ. ಪ್ರಬುದ್ಧ ವಿಚಾರಗಳಲ್ಲಿದೆ. ನಾವು ಮಾಡುವ ವಿಚಾರಗಳಿಂದ, ಕೇಳುವ ವಿಚಾರಗಳಿಂದ ಪ್ರಭಾವಿತರಾಗುತ್ತೇವೆ. ‘ನಮ್ಮ ಕಕ್ಷೆಯೊಳಗೆ ಬರುವ ಪ್ರತಿಯೊಬ್ಬ ಸಹಯೋಗಿಯು
ತಮ್ಮೊಂದಿಗೆ ನಾವು ಕಲ್ಪಿಸಿಕೊಳ್ಳಲಾಗದ, ವಿಚಿತ್ರ ಹಾಗೂ ಸಂಕೀರ್ಣ ವಿಶ್ವವನ್ನು ಹೊತ್ತು ತರುತ್ತಾರೆ. ಅವರ ಅಗತ್ಯಗಳು ಆಕಾಂಕ್ಷೆಗಳು ಆಸೆಗಳು ವಿವರಗಳು ಮತ್ತು ಸೂಕ್ಷ್ಮತೆಗಳನ್ನು ಕೇಳಿಸಿಕೊಂಡು ನಾವು ಅವರ ವಿಶ್ವವನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಆಗ ನಾವಿಬ್ಬರೂ ಹಿಂದಿನಂತಿರುವುದಿಲ್ಲ.’ ಎಂದಿದ್ದಾನೆ ವಿಖ್ಯಾತ ಡಿಸೈನರ್ ಬ್ರೂಸ್ ಮಾವ್. ನಾವು ಭೇಟಿಯಾಗುವ ಪ್ರತಿ ವ್ಯಕ್ತಿಯಲ್ಲೂ ನಮಗೆ ಗೊತ್ತಿರದ ಕನಿಷ್ಟ ಪಕ್ಷ ಒಂದು ಹೊಸ ವಿಚಾರ ಇದ್ದೇ ಇರುತ್ತದೆ. ಅದನ್ನು ತಿಳಿದು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು.ತನ್ಮೂಲಕ ಪ್ರಗತಿಯ ಹಾದಿಯಲ್ಲಿ ನಡೆಯಬೇಕು.
ವಿಚಾರ ಭೇದಗಳನ್ನು ಮೆಟ್ಟಿ
ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಹರಿಯುತ್ತವೆ ಎಂಬುದನ್ನು ಮರೆಯುವಂತಿಲ್ಲ. ಎತ್ತೆತ್ತಲೋ ವಿಚಾರಗಳನ್ನು ಹರಿಯಲು ಬಿಡದೆ, ಸುಲಭವಾದ ದಿಕ್ಕಿನಲ್ಲಿ ಸಲೀಸಾಗಿ ವಿಚಾರಗಳನ್ನು ಹರಿಸದೇ ಸೃಜನಶೀಲತೆಯಿಂದ ಸ್ವಲ್ಪ ದಿಕ್ಕು ಬದಲಿಸಿದರೆ ಹೊಳೆಯುವ ವಿಚಾರಗಳು ಅತ್ಯದ್ಭುತ ಎನ್ನುವುದೂ ಅಪ್ಪಟ ಸತ್ಯ. .ಶರಶ್ಚಂದ್ರರು ಹೇಳಿದಂತೆ ಕಮಲವನ್ನು ಕೊಯ್ದುಕೊಳ್ಳಲು ಹೋದರೆ ಕೆಸರು ಹತ್ತುವುದು ಸಹಜ. ಅಂತೆಯೇ ಅನ್ಯರಲ್ಲಿರುವ ವಿಚಾರಗಳು ವಿಭಿನ್ನ.ವಿಭಿನ್ನ ಸ್ವರದಲ್ಲಿ ಸುಸ್ವರವನ್ನು ನಿರ್ಮಿಸಿ ಏಕಸ್ವರವನ್ನು ನುಡಿಸುವುದು ಒಲುಮೆಯ ಶ್ರದ್ಧೆಯಿಂದ ಶ್ರಮವಹಿಸಿದರೆ ಖಂಡಿತ ಸಾಧ್ಯ. ಸಂಬಂಧಗಳಲ್ಲಿರುವ ವಿಚಾರ ಭೇದಗಳನ್ನು ಮೆಟ್ಟಿ ನಿಲ್ಲಬೇಕು. ನೆಮ್ಮದಿಯ, ಒಗ್ಗಟ್ಟಾದ ಸೌಹಾರ್ದಯುತ ಬದುಕು ಕಟ್ಟಿಕೊಳ್ಳುವುದು ಸುಲಲಿತವಾದ ವಿಚಾರದ ಹದಗಳಲ್ಲಿದೆ.












