ವಿಜಯ ದರ್ಪಣ ನ್ಯೂಸ್….
ನಿನ್ನ ಜೊತೆಗಿದ್ದು…..

ನಿನ್ನ ಜೊತೆಗಿದ್ದು….
ನಿನ್ನೊಂದಿಗೆ ಇರುವಾಗ,
ನನಗನಿಸಿದ್ದಿದೆ—
ದಿಕ್ಕುಗಳು ಹತ್ತಿರವಾಗಿವೆ,
ಪ್ರತಿಯೊಂದು ದಾರಿಯೂ ಚಿಕ್ಕದಾಗಿದೆ,
ಮತ್ತು ಈ ಜಗತ್ತು ಕುಗ್ಗದೆ
ಒಂದು ಅಂಗಳದಷ್ಟೇ ಆಗಿದೆ—
ಅದು ಜನಜಂಗುಳಿಯಿಂದ ತುಂಬಿಹೋಗಿದೆ;
ಎಲ್ಲಿಯೂ ಏಕಾಂತವಿಲ್ಲ,
ಹೊರಗೂ ಇಲ್ಲ, ಒಳಗೂ ಇಲ್ಲ.
ಎಲ್ಲವೂ ಗಾತ್ರದಲ್ಲಿ ಚಿಕ್ಕದಾಗಿವೆ;
ಮರಗಳು ಎಷ್ಟು ಚಿಕ್ಕವಾಗಿವೆಯೆಂದರೆ
ನಾನು ಅವುಗಳ ತುದಿಯ ಮೇಲೆ ಕೈಯಿಟ್ಟು
ಆಶೀರ್ವದಿಸಬಲ್ಲೆ,
ಆಕಾಶವು ನನ್ನ ಎದೆಗೆ ತಾಗುತ್ತಿದೆ,
ಮತ್ತು ನಾನು ಬಯಸಿದಾಗಲೆಲ್ಲಾ,
ಮೋಡಗಳಲ್ಲಿ ನನ್ನ ಮುಖವನ್ನು ಅಡಗಿಸಿಕೊಳ್ಳಬಲ್ಲೆ.
ನಿನ್ನ ಸಾನ್ನಿಧ್ಯದಲ್ಲಿ, ನನಗನಿಸಿದ್ದಿದೆ—
ಪ್ರತಿಯೊಂದಕ್ಕೂ ಒಂದು ಅರ್ಥವಿದೆ ಎಂದು;
ಗಾಳಿಗೆ ತೂಗಾಡುವ ಹುಲ್ಲುಗರಿಗಳಿಗೂ,
ಕಿಟಕಿಯ ಮೂಲಕ ತೇಲಿಬರುವ ಮಂದಮಾರುತಕ್ಕೂ,
ಗೋಡೆಯ ಮೇಲೆ ಹರಿದಾಡಿ ಮುಂದೆ ಸಾಗುವ
ಸೂರ್ಯನ ಬೆಳಕಿಗೂ.
ನಿನ್ನ ಸಾನ್ನಿಧ್ಯದಲ್ಲಿ,
ನನಗನಿಸಿದ್ದಿದೆ—
ನಾವಿರುವುದು ಮಿತಿಗಳ ನಡುವಲ್ಲ,
ಬದಲಾಗಿ ಸಾಧ್ಯತೆಗಳ ನಡುವೆ ಎಂದು;
ಯಾವುದೇ ಗೋಡೆಯಲ್ಲೂ ಒಂದು ದ್ವಾರ ತೆರೆದುಕೊಳ್ಳಬಹುದು,
ಮತ್ತು ಆ ದ್ವಾರದ ಮೂಲಕವೇ,
ಒಂದು ಇಡೀ ಪರ್ವತವೇ ಸಾಗಿ ಹೋಗಬಹುದು.
ಶಕ್ತಿ ಸೀಮಿತವಾಗಿದ್ದರೆ
ಎಲ್ಲವೂ ನಿಷ್ಪ್ರಭಾವವಾಗುತ್ತದೆ;
ಬಾಹುಗಳು ಚಿಕ್ಕದಾಗಿದ್ದರೆ,
ಸಾಗರವೂ ಕೂಡ ಸೀಮಿತವೆನಿಸುತ್ತದೆ;
ಸಾಮರ್ಥ್ಯವೆಂಬುದು ಇಚ್ಛಾಶಕ್ತಿಯ ಇನ್ನೊಂದು ಹೆಸರು—
ಬದುಕು ಮತ್ತು ಸಾವಿನ ನಡುವಿನ ಆಯಾಮವು
ವಿಧಿಗೆ ಸೇರಿದ್ದಲ್ಲ, ಅದು ನನ್ನದು
ಮೂಲ ಹಿಂದಿ: ಸರ್ವೇಶ್ವರ ದಯಾಲ ಸಕ್ಸೇನಾ

ಕನ್ನಡಕ್ಕೆ: ಜಯಶ್ರೀ.ಜೆ. ಅಬ್ಬಿಗೇರಿ.
#####₹#₹₹₹₹₹₹₹₹################
ಶೈಕ್ಷಣಿಕ ಶುಲ್ಕ ಮರುಪಾವತಿ ಮತ್ತು ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜುಲೈ.28:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡುವ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಅಗಸ್ಟ್
31 ರವರೆಗೆ ವಿಸ್ತರಿಸಿದೆ.
2025-26 ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ 2026-27 ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಕೆಗೆ ಈ ಹಿಂದೆ ಜುಲೈ 31 ಕೊನೆಯ ದಿನವಾಗಿತ್ತು ಈಗ ಅವಧಿಯನ್ನು ಅಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ಕೋರಿದ್ದಾರೆ.











