--Ads--

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕಾಂಗ್ರೆಸ್ ಪಕ್ಷದಿಂದ: ಅಣಕು ಪ್ರತಿಭಟನೆ

On: June 18, 2026 3:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕಾಂಗ್ರೆಸ್ ಪಕ್ಷದಿಂದ: ಅಣಕು ಪ್ರತಿಭಟನೆ

ತಾಂಡವಪುರ ಜೂನ್ 18: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಅಣಕು ಶವಯಾತ್ರೆಯ ಮೂಲಕ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಗುರುವಾರ ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ದೇಶಾದ್ಯಂತ ನೀಟ್ ಹಗರಣದಿಂದ ಬೇಸತ್ತು ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಕೇಂದ್ರ ಸರಕಾರವು ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ನೀಟ್ ಹಗರಣವನ್ನು ನಿರ್ಲಕ್ಷ್ಯ ಮಾಡಿ ಹಲವಾರು ವಿದ್ಯಾರ್ಥಿಗಳ ಸಾವಿಗೆ ಕಾರಣರಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಣಕು ಶವಯಾತ್ರೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, 22 ಲಕ್ಷ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳನ್ನು ನಂಬಿರುವ ಪೋಷಕರ ಕುಟುಂಬದ ಬದುಕಿನ ಭವಿಷ್ಯದ ಜೊತೆ ಕೇಂದ್ರ ಸರಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪರೀಕ್ಷೆಯ ಮರು ಪರೀಕ್ಷೆಯ ಬೇಸರದಿಂದ ಕೆಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಮಟ್ಟಕ್ಕೆ ಪೆಟ್ಟು ನೀಡುವಂತಹ ಕೆಟ್ಟ ಕೆಲಸ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ನಿರಂತರವಾಗಿ ನಡೆದಿದೆ. ಇಡೀ ದೇಶ ವ್ಯಾಪ್ತಿಯಲ್ಲಿ ನೀಟ್ ಮತ್ತು ಇನ್ನಿತರ ಪ್ರವೇಶ ಪರೀಕ್ಷೆಗಳಿಗೋಸ್ಕರ ಪೋಷಕರು, ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಮಕ್ಕಳ ಪರಿಶ್ರಮ ಮತ್ತು ಪೋಷಕರ ಹಣವನ್ನು ವ್ಯರ್ಥ ಮಾಡುತ್ತಿರುವ ಕೇಂದ್ರ ಸರಕಾರದ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ದೇಶದಲ್ಲಿ ಒಂದು ಪರೀಕ್ಷೆ ನಡೆಸಲು ಸೈನ್ಯವನ್ನು ನಿಯೋಜನೆ ಮಾಡುವಂತಹ ಅಭದ್ರತೆಯ ಕೇಂದ್ರ ಸರಕಾರ ನಮ್ಮ ದೇಶದಲ್ಲಿದೆ ಎಂದು ಹೇಳಲು ನಾಚಿಕೆ ಪಡುವಂತಾಗಿದೆ. ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳುವ ಮೋದಿ ಅವರು ದೇಶದ ಮಕ್ಕಳಿಗೆ ನೀಡಿರುವ ಅತೀ ದೊಡ್ಡ ಪೆಟ್ಟು ಇದಾಗಿದ್ದು, ದೇಶದ ಪರೀಕ್ಷೆ ಇತಿಹಾಸದಲ್ಲಿ ಕಪ್ಪು ಚುಕ್ಕೆ ತಂದ ಕೀರ್ತಿ ಇವರದಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮಾಜಿ ಮೇಯರ್​ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ, ಆರ್.ಎಚ್.ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆ.ವಿನಯ್ ಕುಮಾರ್, ಸದಸ್ಯ ಡೈರಿ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ರವಿಶಂಕರ್, ಜೋಗಿ ಮಹೇಶ್, ಅಶೋಕಪುರಂ ಮಂಜುನಾಥ್, ರಮೇಶ್, ಆಶ್ರಯ ಸಮಿತಿ ಸದಸ್ಯ ಗುಣಶೇಖರ್, ಸೋಮು ಕುರುಬಾರಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now