--Ads--

ಪ್ರಾಮಾಣಿಕ ಅಧ್ಯಯನ ಮತ್ತು ಸಂಶೋಧನೆ ನಡೆಸಿದಾಗ ಮಾತ್ರ ಕಾಲದಲ್ಲಿ ಹುದುಗಿರುವ ವಾಸ್ತವವನ್ನು ಹೆಕ್ಕಲು ಸಾಧ್ಯ : ಬೈರಮಂಗಲ ರಾಮೇಗೌಡ

On: August 14, 2026 5:10 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರಾಮಾಣಿಕ ಅಧ್ಯಯನ ಮತ್ತು ಸಂಶೋಧನೆ ನಡೆಸಿದಾಗ ಮಾತ್ರ ಕಾಲದಲ್ಲಿ ಹುದುಗಿರುವ ವಾಸ್ತವವನ್ನು ಹೆಕ್ಕಲು ಸಾಧ್ಯ : ಬೈರಮಂಗಲ ರಾಮೇಗೌಡ

ರಾಮನಗರ: ‘ಸಂಶೋಧನೆ ಎಂಬುದು ಸತ್ವಶಾಲಿ ಆಗಿದ್ದರೆ ಅದು ಸಾರ್ವಕಾಲಿಕವಾಗಿರುತ್ತದೆ. ವಿಷಯವೊಂದರ ಕುರಿತು ಪೂರ್ವಾಗ್ರಹವಿಲ್ಲದೆ ಪ್ರಾಮಾಣಿಕ ಅಧ್ಯಯನ ಮತ್ತು ಸಂಶೋಧನೆ ನಡೆಸಿದಾಗ ಮಾತ್ರ ಕಾಲದಲ್ಲಿ ಹುದುಗಿರುವ ಸತ್ಯ ಮತ್ತು ವಾಸ್ತವವನ್ನು ಹೆಕ್ಕಲು ಸಾಧ್ಯವಾಗುತ್ತದೆ. ಅಷ್ಟು ಮಾತ್ರವಲ್ಲ ಅದು ತನ್ನ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ’ ಎಂದು ಸಾಹಿತಿ ಹಾಗೂ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಕನ್ನಡ ವಿಭಾಗದ ಐ.ಕ್ಯು.ಎ.ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ವಿದ್ವಾಂಸ ಎಂ. ಬೈರೇಗೌಡ ಅವರ ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ‘ಇಲ್ಲಿಗರು ಕಂಡ ದೇವರು’ ಎಂಬ ಸಂಶೋಧನಾ ಲೇಖನಗಳ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯಾವುದೇ ಒಂದು ವಿಷಯದ ಒಳಗೆ ನಾವು ಸಂಪೂರ್ಣವಾಗಿ ಮುಳಗದ ಹೊರತು ಅಲ್ಲಿನ ಒಳ-ಹೊರಗು ಗೊತ್ತಾಗದು. ಆದರೆ, ಬೈರೇಗೌಡರು ಇರುಳಿಗರು ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳ ಕುರಿತು ಮಾಡಿರುವ ಸಂಶೋಧನೆಯಲ್ಲಿ ಪೂರ್ಣ ಮುಳುಗಿ ಅಲ್ಲಿನ ಒಳ-ಹೊರಗನ್ನು ಗ್ರಹಿಸಿ ಅದನ್ನು ಅಕ್ಷರ ರೂಪದಲ್ಲಿ ನಾಡಿಗೆ ಕಟ್ಟಿ ಕೊಟ್ಟಿದ್ದಾರೆ. ಆ ಮೂಲಕ ನಿರಂತರವಾಗಿ ತಮ್ಮ ಶೋಧಕಾರ್ಯವನ್ನು ಮುಂದುವರಿಸಿದ್ದಾರೆ’ ಎಂದು ಹೇಳಿದರು.

‘ಬುಡಕಟ್ಟು ಸಮುದಾಯವಾದ ಇರುಳಿಗರು ಕುರಿತ ಬೈರೇಗೌಡರ ಸಂಶೋಧನೆ ಕೇವಲ ಪಿಎಚ್.ಡಿ ಪದವಿಗೆ ಮಾತ್ರ ಸೀಮಿತವಾಗಲಿಲ್ಲ. ಇಪ್ಪತ್ತು ವರ್ಷಗಳ ನಂತರವೂ ನಿರಂತವಾಗಿ ನಡೆಯುತ್ತಿದೆ. ಆಧುನಿಕತೆಗೆ ಸಿಲುಕಿರುವ ಆ ಸಮುದಾಯದಲ್ಲಾಗಿರುವ ಸಾಂಸ್ಕೃತಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಬೈರೇಗೌಡ ಅವರು ಚನ್ನಾಗಿ ಹಿಡಿದಿಟ್ಟಿದ್ದಾರೆ’ ಎಂದರು.

‘ಬಿ.ಕಾಂ ಓದಿ ಖಜಾನೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಬೈರೇಗೌಡ ಅವರು ತಮಗಿದ್ದ ಬುಡಕಟ್ಟ ಸಮುದಾಯಗಳು ಹಾಗೂ ಜಾನಪದ ಕ್ಷೇತ್ರದ ಸೆಳೆತದಿಂದಾಗಿ ಮುಂದೆ ಇರುಳಿಗರ ಕುರಿತು ಪಿಎಚ್.ಡಿ ಮಾಡಿದರು. ನಂತರ 18 ವರ್ಷಗಳ ಸರಕಾರಿ ಉದ್ಯೋಗ ತೊರೆದು ತಮಗಿಷ್ಟವಾದ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಹಾಗೂ ಕಲೆಯನ್ನು ರಂಗಭೂಮಿಗೆ ಅಳವಡಿಸಿ ನಾಡಿಗೆ ಪರಿಚಯಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕ ಎಂ. ಬೈರೇಗೌಡ ಮಾತನಾಡಿ, ‘ನಾನು ಬೆಳೆದ ಕೃಷ್ಣಾಪುರದೊಡ್ಡಿಯ ಪರಿಸರ ಹಾಗೂ ತಂದೆ ಕೆ.ಎಸ್. ಮುದ್ದಪ್ಪ ಅವರ ಪ್ರೇರಣೆಯ ಮಾತುಗಳು ನನ್ನನ್ನು ಸಮುದಾಯಗಳ ಜಾನಪದೀಯ ನೆಲೆಯ ಸಂಶೋಧನೆ, ಸಾಹಿತ್ಯ ಹಾಗೂ ರಂಭೂಮಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಇರುಳಿಗ ಬುಡಕಟ್ಟಿನ ಜನಾಂಗೀಯ ಅಧ್ಯಯನ ಮಾಡಿ, ಅಲ್ಲಿನ ಉಪ ಉತ್ಪನ್ನಗಳನ್ನು ಇಟ್ಟುಕೊಂಡು ಹಲವು ವರ್ಷಗಳ ಕಾಲ ಕೆಲಸ ಮಾಡಲು ಸಾಧ್ಯವಾಗುವಷ್ಟು ಸರಕು ತುಂಬಿದೆ’ ಎಂದು ಹೇಳಿದರು.

ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಓದೇಶ ಸಕಲೇಶಪುರ, ‘ಪುಸ್ತದಲ್ಲಿರುವ ಇರುಳಿಗರು ಕಂಡ ದೇವರು, ಬುಡಕಟ್ಟು ರಂಗಭೂಮಿ, ಸಮಾಜಮುಖಿ ನಾಡಪ್ರಭು ಕೆಂಪೇಗೌಡರ ಹೆಜ್ಜೆ ಗುರುತುಗಳು, ಕ್ಷೇತ್ರಕಾರ್ಯ ಒಂದು ಅನುಭೂತಿ, ಕನ್ನಡ ಜನಪದ ಗೀತೆಗಳು, ನಂಬಿಕೆ: ಮದ್ದು, ಮಾಟ, ದೈವ, ದೆವ್ವ ಸೇರಿದಂತೆ ಒಟ್ಟು 6 ಲೇಖನಗಳು ಲೇಖಕರ ವೈವಿಧ್ಯಮಯ ವಾಸ್ತವಾಂಶಗಳನ್ನು, ಲೇಖಕರ ಅಮೂಲ್ಯ ಅನುಭವಗಳನ್ನು ಒಳಗೊಂಡಿವೆ. ಈ ಪುಸ್ತಕದ ಓದು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಂತಿದೆ. ಮುಂದಿನ ಸಂಶೋಧಕರ ಕೈ ದೀವಿಗೆಯಂತೆ ಈ ಕೃತಿ ತನ್ನತನವನ್ನು ಮೆರೆದಿದೆ. ಬೈರೇಗೌಡರ ಸುತ್ತಾಟ, ಇರುಳಿಗ ಬುಡಕಟ್ಟು ಜನರೊಡನೆ ಬೆರೆಯುವ ರೀತಿ, ಮಾಹಿತಿಗಳನ್ನು ಸಂಗ್ರಹಿಸುವ ವಿಧಾನ ಅನುಕರಣೀಯ. ಈ ಕೃತಿ ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕವಾದರೆ ಸಂಶೋಧನಾ ಕ್ಷೇತ್ರದಲ್ಲಿ ತೊಡಗುವವರಿಗೆ ಮಾರ್ಗದರ್ಶಿಯಾಗಬಲ್ಲದು’ ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಮ್ಮ ಎ.ಎಸ್ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಸಾಗರ್ ಕುರಿಬಾಂಡ್, ವಕೀಲ ನಂಜಪ್ಪ ಕಾಳೇಗೌಡ, ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಡಿ. ಉಮಾಶಂಕರ್ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಶಿವಲಿಂಗೇಗೌಡ ನಿರೂಪಣೆ ಮಾಡಿದರು.

ಕಾರ್ಯಕ್ರಮ ಆರಂಭಕ್ಕೆ ಮುಂಚೆ ‘ಇರುಳಿಗರು’ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಸಾಪ ತಾಲ್ಲೂಕು ಅಧ್ಯಕ್ಷ ದಿನೇಶ್ ಬಿಳಗುಂಬ ವಂದಿಸಿದರು. ಕೆಂಗಲ್ ವಿನಯಕುಮಾರ್ ಮತ್ತು ಎಚ್.ವಿ. ಮೂರ್ತಿ ಗೀತ ಗಾಯನ ನಡೆಸಿಕೊಟ್ಟರು.

ಚಿತ್ರ ಮಾಹಿತಿರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಾನಪದ ವಿದ್ವಾಂಸ ಎಂ. ಬೈರೇಗೌಡ ಅವರ ‘ಇಲ್ಲಿಗರು ಕಂಡ ದೇವರು’ ಪುಸ್ತಕವನ್ನು ಸಾಹಿತಿ ಬೈರಮಂಗಲ ರಾಮೇಗೌಡ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಮ್ಮ ಎ.ಎಸ್, ರಂಗಕರ್ಮಿ ಸಾಗರ್ ಕುರಿಬಾಂಡ್, ವಕೀಲ ನಂಜಪ್ಪ ಕಾಳೇಗೌಡ, ದೀಪಾ ಹೆಬ್ಬಾರ್, ಎಚ್.ಡಿ. ಉಮಾಶಂಕರ್, ಶಿವಲಿಂಗೇಗೌಡ, ದಿನೇಶ್ ಬಿಳಗುಂಬ ಇದ್ದಾರೆ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ