--Ads--

ಮಡಿಕೇರಿ ದುರಂತ: ಮತ್ತೊಂದು ಜೀವ ಕಳೆದುಹೋಯಿತು… ಹೊಣೆ ಯಾರು?

On: August 22, 2026 5:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಡಿಕೇರಿ ದುರಂತ: ಮತ್ತೊಂದು ಜೀವ ಕಳೆದುಹೋಯಿತು…      ಹೊಣೆ ಯಾರು?

ಮಡಿಕೇರಿಯ ತಿಮ್ಮಯ್ಯ ಸರ್ಕಲ್‌ನಲ್ಲಿ ಇಂದು ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ 24 ವರ್ಷದ ಯುವ ಟ್ಯಾಕ್ಸಿ ಚಾಲಕ ಸಾಹಿಲ್ ಮೃತಪಟ್ಟಿರುವ ಘಟನೆ ಇಡೀ ಕೊಡಗನ್ನು ಬೆಚ್ಚಿಬೀಳಿಸಿದೆ ಗಣಪತಿ ಬೀದಿ ನಿವಾಸಿಯಾಗಿದ್ದ ಸಾಹಿಲ್ ಅವರ ಅಕಾಲಿಕ ನಿಧನ ಕುಟುಂಬಸ್ಥರು ಸ್ನೇಹಿತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ

ಮಂಗಳೂರು ರಸ್ತೆಯಿಂದ ಬಂದ ಗ್ಯಾಸ್ ಟ್ಯಾಂಕರ್ ತಿಮ್ಮಯ್ಯ ಸರ್ಕಲ್ ಸಮೀಪ ನೂತನ ಪ್ರಯಾಣಿಕರ ತಂಗುದಾಣದ ಮುಂದೆ ನಿಂತಿದ್ದ ಸಾಹಿಲ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಸಮರ್ಪಕ ಬೆಳಕಿನ ಕೊರತೆ ಹಾಗೂ ರಸ್ತೆ ಸುರಕ್ಷತಾ ವ್ಯವಸ್ಥೆಯ ಅಭಾವ ಅಪಘಾತಕ್ಕೆ ಕಾರಣವಾಗಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ.

ಒಬ್ಬ ಯುವಕನ ಜೀವ ಹೋದ ನಂತರ ಯಾರನ್ನು ದೂರಿದರೂ ಆ ಜೀವ ಮರಳಿ ಬರುವುದಿಲ್ಲ ಆದರೆ ಈ ದುರ್ಘಟನೆಯ ಹಿಂದೆ ಆಡಳಿತದ ನಿರ್ಲಕ್ಷ್ಯವಿದೆಯೇ ಎಂಬ ಪ್ರಶ್ನೆ ಇಂದು ಸಾರ್ವಜನಿಕರನ್ನು ಕಾಡುತ್ತಿದೆ ಒಬ್ಬ ತಾಯಿಯ ಕಣ್ಣೀರು ತಂದೆಯ ನೋವು ಸಹೋದರ-ಸಹೋದರಿಯರ ದುಃಖ ಹಾಗೂ ಸ್ನೇಹಿತರ ವೇದನೆಗೆ ಉತ್ತರ ಕೊಡುವವರು ಯಾರು?

ಕೊಡಗು ಜನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿನೋದ್ ಅವರು ನೀಡಿರುವ ಮಾಹಿತಿಯ ಪ್ರಕಾರ ಅಪಘಾತ ನಡೆದ ನಂತರವೂ ತುರ್ತು ಸ್ಪಂದನೆಯಲ್ಲಿ ವಿಳಂಬವಾಗಿದೆ ಎಂಬ ಬೇಸರ ವ್ಯಕ್ತವಾಗಿದೆ 112ಕ್ಕೆ ಕರೆ ಮಾಡಿದ ಸಂದರ್ಭದಲ್ಲಿ ಖಾಸಗಿ ಆಂಬುಲೆನ್ಸ್ ಕಳುಹಿಸಲಾಗಿದ್ದು ಪೊಲೀಸ್ ಅಧಿಕಾರಿಗಳ ಆಗಮನ ತಡವಾಗಿತ್ತು ಎಂಬ ಆರೋಪ ಕೇಳಿಬಂದಿದೆ ಇಂತಹ ಸಂದರ್ಭಗಳಲ್ಲಿ ತುರ್ತು ಸೇವೆಗಳು ಇನ್ನಷ್ಟು ವೇಗವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಸ್ಪಷ್ಟವಾಗಿದೆ

ಕೊಡಗು ಜನ ಅಭಿವೃದ್ಧಿ ಸಮಿತಿಯು ಹಲವು ಬಾರಿ ಮಡಿಕೇರಿ ನಗರದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಮಂಗಳೂರು ರಸ್ತೆ, ಬಿಗ್ ಕಪ್ ಪ್ರದೇಶ ಟೋಲ್ ಗೇಟ್ ಸುತ್ತಮುತ್ತ ಹಾಗೂ ಹೆಬ್ಬಾಗಿಲು ಪೆಟ್ರೋಲ್ ಬಂಕ್ ಭಾಗಗಳಲ್ಲಿ ಸ್ಟ್ರೀಟ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಡಿಯೋ ಹಾಗೂ ಮನವಿಗಳ ಮೂಲಕ ಅಧಿಕಾರಿಗಳ ಗಮನ ಸೆಳೆದಿತ್ತು ಆದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕದಿರುವುದು ಇಂದು ಮತ್ತೊಮ್ಮೆ ಪ್ರಶ್ನೆಗೆ ಕಾರಣವಾಗಿದೆ

ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ದೃಶ್ಯತೆ ಕಡಿಮೆ ಇರುವುದು ಸಾಮಾನ್ಯ ಇಂತಹ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ದೀಪಗಳು ಪ್ರತಿಫಲಕ ಫಲಕಗಳು ಎಚ್ಚರಿಕೆ ಸೂಚನೆಗಳು ಸಿಗ್ನಲ್ ಲೈಟ್‌ಗಳು ಹಾಗೂ ಪಾದಚಾರಿ ಸುರಕ್ಷತಾ ವ್ಯವಸ್ಥೆಗಳು ಅತ್ಯಗತ್ಯ ಆದರೆ ಹಲವು ಸ್ಥಳಗಳಲ್ಲಿ ಇವುಗಳ ಕೊರತೆ ಕಂಡುಬರುತ್ತಿದೆ ಇದರ ಪರಿಣಾಮವಾಗಿ ವಾಹನ ಚಾಲಕರು ಆಟೋ ಚಾಲಕರು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ

ಇಂದು ಸಾಹಿಲ್ ಹೋದನು ನಾಳೆ ಮತ್ತೊಬ್ಬ ಸಾಹಿಲ್ ಆಗಬಾರದು ಅಪಘಾತ ನಡೆದ ಸ್ಥಳದಲ್ಲಿ ಸರಿಯಾದ ಬೆಳಕು ಎಚ್ಚರಿಕೆ ಸೂಚನಾ ಫಲಕಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳು ಇದ್ದಿದ್ದರೆ ಈ ಯುವ ಜೀವ ಉಳಿಯುತ್ತಿತ್ತೇ ಎಂಬ ಪ್ರಶ್ನೆಗೆ ಸಂಬಂಧಿಸಿದ ಇಲಾಖೆಗಳು ಉತ್ತರಿಸಬೇಕಾಗಿದೆ.

ಒಂದು ಕುಟುಂಬದ ಕನಸುಗಳು ಕ್ಷಣಾರ್ಧದಲ್ಲಿ ಚೂರಾಗಿವೆ ದುಡಿದು ಕುಟುಂಬವನ್ನು ಸಾಗಿಸುತ್ತಿದ್ದ ಯುವಕನ ಬದುಕು ರಸ್ತೆ ಮೇಲೆಯೇ ಅಂತ್ಯಗೊಂಡಿದೆ ಇದು ಕೇವಲ ಒಂದು ಕುಟುಂಬದ ನೋವಲ್ಲ ಇಡೀ ಸಮಾಜದ ನೋವು ಪ್ರತಿಯೊಂದು ಅಪಘಾತದ ನಂತರ ಸಂತಾಪ ಸೂಚಿಸುವುದಕ್ಕಿಂತ ಅಪಘಾತಗಳು ನಡೆಯದಂತೆ ತಡೆಯುವ ವ್ಯವಸ್ಥೆ ನಿರ್ಮಿಸುವುದು ಆಡಳಿತದ ಜವಾಬ್ದಾರಿಯಾಗಿದೆ.

ಈ ದುರಂತವನ್ನು ಕೇವಲ ಒಂದು ಅಪಘಾತ ಎಂದು ನೋಡದೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಜಿಲ್ಲಾಡಳಿತ ನಗರಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ನಗರ ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸದ ಸ್ಟ್ರೀಟ್ ಲೈಟ್‌ಗಳನ್ನು ದುರಸ್ತಿಗೊಳಿಸಬೇಕು ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆ ಸೂಚಕಗಳು ಸಿಗ್ನಲ್ ಲೈಟ್‌ಗಳು ಹಾಗೂ ಪ್ರತಿಫಲಕ ಫಲಕಗಳನ್ನು ಅಳವಡಿಸಬೇಕು ಪಾದಚಾರಿಗಳ ಸುರಕ್ಷತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು

ಕೊಡಗು ಜನ ಅಭಿವೃದ್ಧಿ ಸಮಿತಿಯು ಜಿಲ್ಲಾಡಳಿತ ನಗರಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುವುದೇನೆಂದರೆ ಮಡಿಕೇರಿ ನಗರದ ಸುತ್ತಮುತ್ತ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ತಕ್ಷಣ ರಸ್ತೆ ಸುರಕ್ಷತಾ ಪರಿಶೀಲನೆ ನಡೆಸಿ ಕಾರ್ಯನಿರ್ವಹಿಸದ ಸ್ಟ್ರೀಟ್ ಲೈಟ್‌ಗಳನ್ನು ಸರಿಪಡಿಸಿ ಅಗತ್ಯ ಸಿಗ್ನಲ್‌ಗಳು ಪ್ರತಿಫಲಕ ಫಲಕಗಳು ಹಾಗೂ ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕು

ಒಂದು ಜೀವ ಕಳೆದುಹೋದ ನಂತರ ಕ್ರಮ ಕೈಗೊಳ್ಳುವುದಲ್ಲ ಮತ್ತೊಂದು ಜೀವ ಕಳೆದುಹೋಗದಂತೆ ಮುನ್ನೆಚ್ಚರಿಕೆ ವಹಿಸುವುದೇ ನಿಜವಾದ ಆಡಳಿತ.

ಇಂದು ಸಾಹಿಲ್ ಅವರ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ನಾಳೆ ಮತ್ತೊಂದು ಕುಟುಂಬ ಇದೇ ನೋವನ್ನು ಅನುಭವಿಸಬಾರದು, ಜನರ ಸುರಕ್ಷತೆಯೇ ಯಾವುದೇ ಆಡಳಿತದ ಮೊದಲ ಆದ್ಯತೆ ಆಗಬೇಕು ಮತ್ತೊಂದು ಅಮೂಲ್ಯ ಜೀವ ಬಲಿಯಾಗುವ ಮುನ್ನ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಂಡು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು.

ಸಾಹಿಲ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅವರ ಕುಟುಂಬದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ

ಜನರ ಸುರಕ್ಷತೆಗಾಗಿ ಧ್ವನಿ ಎತ್ತೋಣ ಮತ್ತೊಂದು ಜೀವ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

✍️ ಎಂಎಂ ದಾವುದ್, ಕೊಡಗು ಜನ ಅಭಿವೃದ್ಧಿ ಸಮಿತಿ

WhatsApp

Join Now

Telegram

Join Now

Instagram

Join Now