ವಿಜಯ ದರ್ಪಣ ನ್ಯೂಸ್…..
ಮಳೆಗಾಗಿ ಪೂಜೆಯೂ ಇದೆ
ಮೋಡ ಬಿತ್ತನೆಯ ಮಾತೂ ಇದೆ ಕೊಡಗಿನ ಧ್ವನಿಯೂ ಕೇಳಿಸಲಿ

ಇತ್ತೀಚಿನ ದಿನಗಳಲ್ಲಿ ಕೊಡಗಿನ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ ಮಳೆಯ ಕೊರತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ ಒಂದು ಕಡೆ ಮಳೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಪ್ರಾರ್ಥನೆಗಳು ನಡೆಯುತ್ತಿವೆ. ಮತ್ತೊಂದು ಕಡೆ ಮೋಡ ಬಿತ್ತನೆ ಕುರಿತು ಚರ್ಚೆಗಳು ಕೇಳಿಬರುತ್ತಿವೆ ನಂಬಿಕೆ ಮತ್ತು ವಿಜ್ಞಾನ ಎರಡಕ್ಕೂ ಸಮಾಜದಲ್ಲಿ ತಮ್ಮದೇ ಆದ ಸ್ಥಾನವಿದೆ ಆದರೆ ಇವೆಲ್ಲದರ ನಡುವೆ ಒಂದು ಮಹತ್ವದ ಪ್ರಶ್ನೆ ಎದ್ದುಕಾಣುತ್ತಿದೆ ಕೊಡಗಿನ ಭವಿಷ್ಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೊಡಗಿನ ಜನರ ಧ್ವನಿಗೆ ಎಷ್ಟು ಮಹತ್ವ ಸಿಗುತ್ತಿದೆ?
ಕಾವೇರಿಯ ಉಗಮ ಸ್ಥಾನವಾದ ಕೊಡಗು ಪ್ರಕೃತಿ ಪರಿಸರ ಮತ್ತು ಜಲಸಂಪತ್ತಿನ ದೃಷ್ಟಿಯಿಂದ ಅತ್ಯಂತ ಮಹತ್ವದ ನೆಲ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ನೆಲೆಸಿರುವ ಈ ಪ್ರದೇಶವು ಅರಣ್ಯ ಸಂಪತ್ತು ಜೀವ ವೈವಿಧ್ಯತೆ ಕೃಷಿ ಸಂಸ್ಕೃತಿ ಮತ್ತು ಜಲಮೂಲಗಳಿಗಾಗಿ ಪ್ರಸಿದ್ಧವಾಗಿದೆ ಕಾವೇರಿ ನದಿಯ ಜನ್ಮಭೂಮಿಯಾಗಿ ಕೊಡಗು ಕೇವಲ ಒಂದು ಜಿಲ್ಲೆಯಷ್ಟೇ ಅಲ್ಲ ಲಕ್ಷಾಂತರ ಜನರ ಬದುಕಿಗೆ ಜೀವನಾಡಿಯಾಗಿರುವ ಪ್ರದೇಶವಾಗಿದೆ
ಮಳೆಗಾಗಿ ಪ್ರಾರ್ಥನೆ ಮಾಡುವುದು ನಮ್ಮ ಸಂಸ್ಕೃತಿ ಪ್ರಕೃತಿಯನ್ನು ಆರಾಧಿಸುವುದು ನಮ್ಮ ಪರಂಪರೆ ಅದೇ ರೀತಿ ವಿಜ್ಞಾನ ಮತ್ತು ಸಂಶೋಧನೆಗಳಿಗೂ ಗೌರವ ನೀಡಬೇಕು ಆದರೆ ಯಾವುದೇ ಯೋಜನೆ ಯಾವುದೇ ಪ್ರಯೋಗ ಅಥವಾ ಯಾವುದೇ ಹೊಸ ಚಿಂತನೆಯಾಗಲಿ ಅದು ಜನರ ವಿಶ್ವಾಸ ಪರಿಸರದ ಹಿತಾಸಕ್ತಿ ಮತ್ತು ಸಮಗ್ರ ಅಧ್ಯಯನದ ಆಧಾರದ ಮೇಲೆ ಸಾಗಬೇಕು
ಜನರು ಪ್ರಶ್ನೆ ಕೇಳಿದರೆ ಅದನ್ನು ವಿರೋಧ ಎಂದು ಅರ್ಥೈಸಬಾರದು ಜನರು ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ರಾಜಕೀಯ ಬಣ್ಣದಲ್ಲಿ ನೋಡುವ ಅಗತ್ಯವಿಲ್ಲ ತಮ್ಮ ನೆಲ ನೀರು ಪರಿಸರ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಯನ್ನು ಕೇಳುವುದು ಆಡಳಿತದ ಜವಾಬ್ದಾರಿ
ಇಂದು ಕೊಡಗಿನ ಜನರು ಕೇಳುತ್ತಿರುವುದು ವಿಶೇಷ ಸೌಲಭ್ಯಗಳಲ್ಲ ಅವರು ಕೇಳುತ್ತಿರುವುದು ಗೌರವ ತಮ್ಮ ಜಿಲ್ಲೆಯ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ತಮ್ಮ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ತಮ್ಮ ಅಭಿಪ್ರಾಯಕ್ಕೂ ಸ್ಥಾನ ಸಿಗಬೇಕು ಎಂಬ ಸರಳ ನಿರೀಕ್ಷೆ
ಅಭಿವೃದ್ಧಿ ಆಗಬೇಕು ಹೊಸ ಯೋಜನೆಗಳು ಬರಬೇಕು ಯುವಕರಿಗೆ ಅವಕಾಶಗಳು ಸಿಗಬೇಕು ಕೃಷಿ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳು ಬೆಳೆಯಬೇಕು ಆದರೆ ಅದೇ ಸಮಯದಲ್ಲಿ ಕೊಡಗಿನ ಪರಿಸರವೂ ಉಳಿಯಬೇಕು ಪ್ರಕೃತಿಯೂ ಉಳಿಯಬೇಕು ಜನರ ವಿಶ್ವಾಸವೂ ಉಳಿಯಬೇಕು ಏಕೆಂದರೆ ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ; ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಚಿಂತನೆಯೇ ನಿಜವಾದ ಅಭಿವೃದ್ಧಿ
ಮಳೆಗಾಗಿ ಪೂಜೆಯೂ ಇರಲಿ ವಿಜ್ಞಾನದ ಚರ್ಚೆಯೂ ಇರಲಿ ಆದರೆ ಅದರ ಜೊತೆಗೆ ಕೊಡಗಿನ ಜನರ ಧ್ವನಿಯೂ ಕೇಳಿಸಲಿ ಏಕೆಂದರೆ ಈ ನೆಲದ ಬಗ್ಗೆ ಮಾತನಾಡುವ ಹಕ್ಕು ಮೊದಲಿಗೆ ಈ ಮಣ್ಣಿನ ಜನರಿಗೇ ಸೇರಿದೆ
ಇದು ಯಾರ ವಿರುದ್ಧದ ಬರಹವಲ್ಲ ಇದು ಕೊಡಗಿನ ಪರವಾದ ಚಿಂತನೆ ಇದು ವಿರೋಧದ ಧ್ವನಿಯಲ್ಲ ಭಾಗವಹಿಸುವಿಕೆಯ ಧ್ವನಿ ಇದು ರಾಜಕೀಯ ಆರೋಪವಲ್ಲ ಜನರ ಅಭಿಪ್ರಾಯಕ್ಕೂ ಸ್ಥಾನ ಸಿಗಬೇಕು ಎಂಬ ಪ್ರಜಾಪ್ರಭುತ್ವದ ಆಶಯ
ಕೊಡಗಿನ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ರಾಜಕೀಯಕ್ಕಿಂತ ಜನರ ಹಿತಾಸಕ್ತಿ ದೊಡ್ಡದಾಗಲಿ ಅಧಿಕಾರಕ್ಕಿಂತ ಪರಿಸರ ಮುಖ್ಯವಾಗಲಿ ಆದೇಶಕ್ಕಿಂತ ಸಂವಾದ ಮುಖ್ಯವಾಗಲಿ ಯಾಕೆಂದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆಡಳಿತವೇ ಬಲಿಷ್ಠ ಆಡಳಿತ
ಕೊಡಗನ್ನು ಪ್ರೀತಿಸುವ ಪ್ರತಿಯೊಬ್ಬರ ಆಶಯ ಒಂದೇ ಅಭಿವೃದ್ಧಿಯೂ ಆಗಲಿ ಪ್ರಕೃತಿಯೂ ಉಳಿಯಲಿ ಜನರ ಧ್ವನಿಗೂ ಗೌರವ ಸಿಗಲಿ
✍️ ಎಂಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ









