ವಿಜಯ ದರ್ಪಣ ನ್ಯೂಸ್….
ವಿಶ್ವ ಜಾನಪದ ದಿನದ ಹಾರ್ದಿಕ ಶುಭಾಶಯಗಳು
ಮಣ್ಣು ಮಾತಾಡಿದಾಗ ಹುಟ್ಟಿದ್ದು ಜಾನಪದ

ಮನಸು ಹಾಡಿದಾಗ ಅರಳಿದ್ದು ಜಾನಪದ
ಜನರ ಬದುಕಿನ ಉಸಿರಾಗಿ ಉಳಿದಿರುವ
ಭಾರತದ ಸಂಸ್ಕೃತಿಯ ಆತ್ಮವೇ ಜಾನಪದ
ಅರಮನೆಯ ಗೋಡೆಗಳ ನಡುವೆ ಹುಟ್ಟಿದುದಲ್ಲ
ಆಸ್ಥಾನದ ಪಂಡಿತರ ಕಲಮಿನಲ್ಲಿ ಬೆಳೆದದ್ದಲ್ಲ
ಹಲಗೆಯ ಸದ್ದಿನಲ್ಲಿ ಹೊಲದ ಹಾದಿಯಲ್ಲಿ
ತಾಯಿಯ ಜೋಗುಳದಲ್ಲಿ ಅಜ್ಜಿಯ ಕಥೆಯಲ್ಲಿ
ಕುರುಬನ ಕೊಳಲಿನಲ್ಲಿ ಗೋಪಾಲನ ಕೂಗಿನಲ್ಲಿ
ಬೆಟ್ಟ-ಕಾಡು-ನಾಡಿನ ಜೀವನಾಡಿಯಾಗಿ
ಹುಟ್ಟಿದ ಅಮರ ಸಾಹಿತ್ಯವೇ ಜಾನಪದ
ಯಾವ ಕವಿಯ ಹೆಸರಿಲ್ಲದ ಕಾವ್ಯ ಇದು
ಯಾವ ರಾಜನ ಆಶ್ರಯವಿಲ್ಲದ ಸಾಹಿತ್ಯ ಇದು
ಜನರ ನಗು ಜನರ ಅಳು
ಜನರ ಪ್ರೀತಿ ಜನರ ಹೋರಾಟ
ಜನರ ಕನಸು ಜನರ ಬದುಕಿನ
ಸಮಗ್ರ ಇತಿಹಾಸವೇ ಜಾನಪದ
ಬರಹವಿಲ್ಲದ ಕಾಲವೊಂದು ಇತ್ತು_
ಕಾಗದವಿಲ್ಲದ ಕಾಲವೊಂದು ಇತ್ತು_
ಆಗ ಮಾತೇ ಸಾಹಿತ್ಯವಾಗಿತ್ತು
ನೆನಪೇ ಗ್ರಂಥವಾಗಿತ್ತು
ಅಮ್ಮನ ಜೋಗುಳದಲಿ ಮಮತೆಯಿತ್ತು
ಅಜ್ಜಿಯ ಕಥೆಯಲಿ ಜ್ಞಾನವಿತ್ತು
ರೈತನ ಹಾಡಿನಲಿ ಬದುಕಿತ್ತು
ಕುರುಬನ ಕೊಳಲಲಿ ಭಾವವಿತ್ತು
ಯಜನರಿಂದ ಜನರಿಗಾಗಿ
ಜನರ ಬದುಕಿನಿಂದ ಜನ್ಮ ತಾಳಿದ
ಜೀವಂತ ಸಂಸ್ಕೃತಿಯ ಮಹಾನದಿಯೇ ಜಾನಪದ
ಮಲ್ಲಿಗೆ ಮುಡಿದ ಮುಗ್ಧೆಯ ನಗುವಲಿ
ಮುಗಿಲು ತಾಕಿದ ಸಂಜೆಯ ಬಣ್ಣದಲಿ
ಕೆರೆಯ ದಂಡೆಯಲಿ ಕಾಯುವ ಕಣ್ಣಲಿ
ಪ್ರಿಯನ ಹೆಜ್ಜೆಯ ನಿರೀಕ್ಷೆಯಲಿ
ಜಾನಪದ ಪ್ರೇಮಗೀತೆ ಅರಳಿತು
ಮಾತಿಲ್ಲದ ಕಣ್ಣಿನ ಭಾಷೆಯಲಿ
ಸಂಕೋಚದ ನಗುವಿನ ಸೊಬಗಿನಲಿ
ಹೃದಯ ಹೃದಯಗಳ ಸಂಗಮವಾಗಿ
ಶಾಶ್ವತ ಶೃಂಗಾರವಾಯಿತು
ಕಿತ್ತೂರಿನ ಚೆನ್ನಮ್ಮನ ಧೈರ್ಯದಲಿ
ರಾಯಣ್ಣನ ರಣಘೋಷದ ನಾದದಲಿ
ಒನಕೆ ಓಬವ್ವಳ ಸಾಹಸದಲಿ
ನಾಡು ಕಾಪಾಡಿದ ವೀರರ ರಕ್ತದಲಿ
ಜಾನಪದ ವೀರಗಾಥೆ ಮೊಳಗಿತು
ಸಾವಿನೆದುರು ನಿಂತ ಶೂರರ ಕಥೆ
ಅನ್ಯಾಯದ ವಿರುದ್ಧ ಎದ್ದ ಹೋರಾಟದ ಗಾಥೆ
ಇತಿಹಾಸದ ಪುಟಗಳು ಮಸುಕಾದರೂ
ಜಾನಪದದ ನೆನಪು ಎಂದಿಗೂ ಅಳಿಯದು
ಬರಗಾಲದಿಂದ ಒಣಗಿದ ಹೊಲವೊಂದು
ಬೆಳೆ ಕಳೆದುಕೊಂಡ ರೈತನ ಕಣ್ಣೊಂದು
ಮಗನ ದಾರಿಯನ್ನೇ ಕಾಯುವ ತಾಯಿಯೊಂದು
ಬಾಳ ಭಾರ ಹೊತ್ತ ವೃದ್ಧನ ಉಸಿರೊಂದು
ಇವೆಲ್ಲವೂ ಜಾನಪದದ ಕಣ್ಣೀರಿನ ಅಕ್ಷರಗಳು.
ದುಃಖ ಹಾಡಾದಾಗ ಗೀತೆಯಾಯಿತು
ವೇದನೆ ಪದವಾದಾಗ ಕಾವ್ಯವಾಯಿತು
ಮಾನವ ಹೃದಯದ ಮೌನದ ನೋವು
ಜಾನಪದದ ನಾದವಾಯಿತು
ಚಾವಡಿಯ ಮಾತಿನ ಚಾತುರ್ಯದಲ್ಲಿ
ಒಗಟಿನ ಒಳಗಿರುವ ಜಾಣತನದಲ್ಲಿ
ಬಯಲಾಟದ ಕುಹಕ ನಗುವಿನಲ್ಲಿ
ಗ್ರಾಮೀಣ ಬದುಕಿನ ಸರಳತೆಯಲ್ಲಿ
ನಗುವಿನೊಳಗೆ ಬುದ್ಧಿ ಹೇಳಿತು
ತಮಾಷೆಯೊಳಗೆ ತತ್ವ ಬೋಧಿಸಿತು
ಇದೇ ಜಾನಪದದ ವೈಶಿಷ್ಟ್ಯ
ಇಂದಿನ ನೋವು
ಜಾನಪದ ದಿನವಿಂದು ಕೇಳುತಿಹೆನು
ಎಲ್ಲಿ ಆ ಗಿಲ್ಲಿದಾಂಡು?
ಎಲ್ಲಿ ಆ ಚಿನ್ನಿದಾಂಡು?
ಎಲ್ಲಿ ಆ ಲಗೋರಿ ಕುಂಟೆಬಿಲ್ಲೆ?
ಒಮ್ಮೆ ಊರನ್ನೆಲ್ಲಾ ನಗಿಸಿದ ಆಟಗಳು
ಇಂದು ನೆನಪಿನ ಪುಟಗಳಾಗಿವೆ
ಏನನುಲಿಯಲಿ ನಾನು ಇಂದು?
ಗೋಣನೊಲಿಯರು ಚಿಣ್ಣರಾರೂ
ಬಯಲೊಳಾಡುವ ಬಾಲಕರಾರೂ
ಮೌನದಲಿ ಚರವಾಣಿಯೊಡನೆ
ಬೆರಳನುಜ್ಜುತ ಕಾಲ ಕಳೆಯುವರು
ಕೋಲಾಟದ ಕೇಕೆಯಿಲ್ಲ
ಜಾನಪದ ಗೀತೆಯ ನಾದವಿಲ್ಲ
ಪರದೆಯ ಬೆಳಕಿನಲ್ಲಿ ಕಣ್ಣುಗಳು ಜಾಗೃತ
ಆದರೆ ಸಂಸ್ಕೃತಿಯ ದೀಪಗಳು ಕ್ಷೀಣಿಸುತ್ತಿವೆ
ಜಾನಪದವೆಂದರೆ ಕೇವಲ ಹಾಡಲ್ಲ
ಅದು ಬದುಕಿನ ವಿಶ್ವವಿದ್ಯಾಲಯ
ಅದರೊಳಗೆ ಕೃಷಿಯಿದೆ
ಅದರೊಳಗೆ ಸಂಸ್ಕೃತಿಯಿದೆ
ಅದರೊಳಗೆ ನೀತಿಯಿದೆ
ಅದರೊಳಗೆ ಜೀವನದ ತತ್ವವಿದೆ
ಜಾನಪದ ಉಳಿದರೆ ಭಾಷೆ ಉಳಿಯುತ್ತದೆ
ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ
ಸಂಸ್ಕೃತಿ ಉಳಿದರೆ ಸಮಾಜ ಉಳಿಯುತ್ತದೆ
ಬನ್ನಿ
ಮತ್ತೆ ಜೋಗುಳ ಹಾಡೋಣ
ಮತ್ತೆ ಒಗಟು ಕೇಳೋಣ
ಮತ್ತೆ ಕೋಲಾಟ ಕುಣಿಯೋಣ
ಮತ್ತೆ ಜಾನಪದ ಗೀತೆ ಹಾಡೋಣ
ಮಣ್ಣಿನ ಪರಿಮಳ ಮರೆತ ಜನಾಂಗ
ಬೇರು ಕಳೆದುಕೊಂಡ ಮರದಂತೆ
ಜಾನಪದವನು ಕಳೆದುಕೊಂಡ ಸಮಾಜ
ತನ್ನ ಆತ್ಮವನ್ನೇ ಕಳೆದುಕೊಂಡಂತೆ
ಜನರ ನುಡಿಯಲಿ ಜಾನಪದವಿದೆ
ಜನರ ಉಸಿರಲಿ ಜಾನಪದವಿದೆ
ಕನ್ನಡದ ಹೃದಯದ ಬಡಿತದೊಳಗೆ
ಶಾಶ್ವತವಾಗಿ ಜಾನಪದವಿದೆ
ಮಣ್ಣು ಇರುವವರೆಗೂ ಜಾನಪದವಿದೆ
ಮಾನವ ಇರುವವರೆಗೂ ಜಾನಪದವಿದೆ
ಸಂಸ್ಕೃತಿ ಇರುವವರೆಗೂ
ಈ ಭೂಮಿಯ ಮೇಲೆ
ಜಾನಪದದ ಅಮರಗೀತೆ ಮೊಳಗುತ್ತಲೇ ಇರುತ್ತದೆ
ವಿಶ್ವ ಜಾನಪದ ದಿನದ ಹಾರ್ದಿಕ ಶುಭಾಶಯಗಳು
ಜಾನಪದವು ಕೇವಲ ಸಾಹಿತ್ಯವಲ್ಲ
ಅದು ಜನರ ಜೀವನ ಜನರ ಸಂಸ್ಕೃತಿ ಜನರ ಆತ್
✍️ ಎಂ ಎಂ ದಾವುದ್
9945375180









