--Ads--

ಕೊಡಗಿನ ಅಕ್ಷರ ಸಾಮ್ರಾಟ ದಿವಂಗತ ಬಿ.ಎಸ್. ಗೋಪಾಲಕೃಷ್ಣರಿಗೆ ಶತಶತ ನಮನ

On: August 24, 2026 11:24 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೊಡಗಿನ ಅಕ್ಷರ ಸಾಮ್ರಾಟ ದಿವಂಗತ ಬಿ.ಎಸ್. ಗೋಪಾಲಕೃಷ್ಣರಿಗೆ ಶತಶತ ನಮನ

ಮಡಿಕೇರಿ: ಒಬ್ಬ ವ್ಯಕ್ತಿಯ ಬದುಕನ್ನು ವರ್ಷಗಳಿಂದ ಅಳೆಯಬಹುದು ಆದರೆ ಒಬ್ಬ ಮಹನೀಯರ ವ್ಯಕ್ತಿತ್ವವನ್ನು ಅವರು ಸಮಾಜಕ್ಕೆ ನೀಡಿದ ಬೆಳಕಿನಿಂದ ಮಾತ್ರ ಅಳೆಯಬಹುದು. ಕೊಡಗಿನ ಅಕ್ಷರ ಲೋಕಕ್ಕೆ ದೀಪವಾಗಿ ಹೊತ್ತಿ ಉರಿದ ಪತ್ರಿಕೋದ್ಯಮಕ್ಕೆ ಜೀವ ತುಂಬಿದ ನಾಡು ನುಡಿಯ ಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡ ದಿವಂಗತ ಬಿ.ಎಸ್. ಗೋಪಾಲಕೃಷ್ಣ ಅಂತಹ ಅಪರೂಪದ ವ್ಯಕ್ತಿತ್ವ.

ಕೊಡಗಿನ ಇತಿಹಾಸವನ್ನು ಬರೆಯುವಾಗ ಕೆಲವು ಹೆಸರುಗಳನ್ನು ಕೇವಲ ಉಲ್ಲೇಖಿಸಲಾಗುವುದಿಲ್ಲ ಗೌರವದಿಂದ ತಲೆಬಾಗಿ ಸ್ಮರಿಸಬೇಕು ಅಂತಹ ಹೆಸರುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಬಿ.ಎಸ್. ಗೋಪಾಲಕೃಷ್ಣರವರದು ಅವರು ಕಟ್ಟಿದ್ದು ಒಂದು ಪತ್ರಿಕೆಯಲ್ಲ ಒಂದು ಪರಂಪರೆ ಅವರು ಬರೆದದ್ದು ಕೇವಲ ಸುದ್ದಿ ಅಲ್ಲ ಒಂದು ಜಿಲ್ಲೆಯ ಸಾಮಾಜಿಕ ಇತಿಹಾಸ.

ಇಂದು ಕೊಡಗಿನ ಮನೆಮನೆಗಳಲ್ಲಿ ಗೌರವದಿಂದ ಉಚ್ಚರಿಸಲ್ಪಡುವ ಶಕ್ತಿ ಎಂಬ ಹೆಸರು ಒಬ್ಬ ವ್ಯಕ್ತಿಯ ಕನಸು ತ್ಯಾಗ ಪರಿಶ್ರಮ ಮತ್ತು ನಂಬಿಕೆಯ ಪ್ರತೀಕ 1957ರಲ್ಲಿ ಅವರು ನೆಟ್ಟ ಆ ಪುಟ್ಟ ಅಕ್ಷರದ ಗಿಡ ಇಂದು ಬೃಹತ್ ಆಲದ ಮರವಾಗಿ ಬೆಳೆದಿದೆ ಅದರ ನೆರಳಿನಲ್ಲಿ ತಲೆಮಾರುಗಳು ಸುದ್ದಿ ಓದಿವೆ ಅಭಿಪ್ರಾಯ ರೂಪಿಸಿಕೊಂಡಿವೆ ಸಮಾಜದ ಬೆಳವಣಿಗೆಯನ್ನು ಕಂಡಿವೆ.

ಗೋಪಾಲಕೃಷ್ಣರವರ ಮಹತ್ವ ಕೇವಲ ಪತ್ರಿಕೆ ಸ್ಥಾಪಕರಾಗಿರುವುದರಲ್ಲಿ ಇರಲಿಲ್ಲ ಅವರ ವ್ಯಕ್ತಿತ್ವವೇ ಒಂದು ಪಾಠಶಾಲೆ ಅವರ ಸರಳತೆ ಒಂದು ಮೌಲ್ಯ ಅವರ ನಿಷ್ಠೆ ಒಂದು ಆದರ್ಶ.

ಅಧಿಕಾರದ ಅಂಗಳದಲ್ಲಿ ತಲೆಬಾಗದ ದೃಢತೆ ಅವರಲ್ಲಿತ್ತು ಸಾಮಾನ್ಯ ಜನರ ನೋವಿಗೆ ಮಿಡಿಯುವ ಮೃದು ಹೃದಯವೂ ಅವರಲ್ಲಿತ್ತು ಸಮಾಜದ ಪರವಾಗಿ ಮಾತನಾಡುವ ಧೈರ್ಯವಿತ್ತು ಸತ್ಯದ ಪರವಾಗಿ ನಿಲ್ಲುವ ನೈತಿಕತೆ ಇತ್ತು ಅದಕ್ಕಾಗಿಯೇ ಅವರು ಪತ್ರಕರ್ತರಾಗಿರಲಿಲ್ಲ ಜನಮನದ ವಿಶ್ವಾಸದ ಪ್ರತಿನಿಧಿಯಾಗಿದ್ದರು.

ಅವರ ಜೀವನವನ್ನು ಹತ್ತಿರದಿಂದ ಕಂಡವರಿಗೆ ಗೊತ್ತು ಅವರು ದೊಡ್ಡ ವ್ಯಕ್ತಿಯಾಗಿದ್ದರು ಆದರೆ ದೊಡ್ಡತನವನ್ನು ಎಂದಿಗೂ ಪ್ರದರ್ಶಿಸಲಿಲ್ಲ ಹೆಸರು ಬೆಳೆದಂತೆ ಅಹಂಕಾರ ಬೆಳೆಯುವ ಕಾಲದಲ್ಲಿಯೂ ಅವರು ವಿನಯದ ಪ್ರತಿರೂಪವಾಗಿದ್ದರು ಅವರ ಬಳಿಗೆ ಹೋದವರು ಪತ್ರಿಕೆಯ ಮಾಲೀಕರನ್ನು ನೋಡುತ್ತಿರಲಿಲ್ಲ ಮನುಷ್ಯತ್ವದಿಂದ ತುಂಬಿದ ಒಬ್ಬ ಆತ್ಮೀಯರನ್ನು ಕಾಣುತ್ತಿದ್ದರು.

ನನ್ನ ಪಾಲಿಗೆ ಅವರು ಕೇವಲ ಪತ್ರಿಕೆಯ ಸ್ಥಾಪಕರಲ್ಲ ನನ್ನ ಬಾಲ್ಯದ ನೆನಪುಗಳಲ್ಲಿ ಬೆರೆತುಹೋದ ಆತ್ಮೀಯ ವ್ಯಕ್ತಿ ಮಡಿಕೇರಿಯ ಆ ದಿನಗಳಲ್ಲಿ ಅವರು ನನ್ನ ತಂದೆಯವರ ಆಪ್ತ ಸ್ನೇಹಿತರಾಗಿದ್ದರು. ನಾನು ಅವರ ಬಳಿ ಹೋದಾಗ ಅವರು ನನ್ನನ್ನು ಹೊರಗಿನ ಮಗುವೆಂದು ನೋಡಲಿಲ್ಲ ತಮ್ಮ ಮಡಿಲಲ್ಲಿ ಕೂರಿಸಿಕೊಂಡು ಮಾತನಾಡುತ್ತಿದ್ದರು ಪ್ರೀತಿಯಿಂದ ವಿಚಾರಿಸುತ್ತಿದ್ದರು ಆ ಮಮತೆ ಆ ಆತ್ಮೀಯತೆ ಆ ನಗುವಿನ ಉಷ್ಣತೆ ಇಂದಿಗೂ ಮನಸ್ಸಿನ ಮೂಲೆಯಲ್ಲಿ ಅಚ್ಚಳಿಯದೆ ಉಳಿದಿದೆ

ಇಂದು ಹಲವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡುತ್ತಾರೆ ಗೋಪಾಲಕೃಷ್ಣರವರು ಪತ್ರಿಕೋದ್ಯಮವನ್ನು ಸೇವೆಯಾಗಿ ಬದುಕಿದರು. ಸಮಾಜದ ಕಣ್ಣಾಗಿ ಕಿವಿಯಾಗಿ ಧ್ವನಿಯಾಗಿ ಪತ್ರಿಕೆ ಕೆಲಸ ಮಾಡಬೇಕು ಎಂಬ ನಂಬಿಕೆಯನ್ನು ಅವರು ತಮ್ಮ ಬದುಕಿನಿಂದ ಸಾಬೀತುಪಡಿಸಿದರು.

ಅವರ ಬರಹಗಳಲ್ಲಿ ಕೊಡಗಿನ ಮಣ್ಣಿನ ಪರಿಮಳವಿತ್ತು ಅವರ ಚಿಂತನೆಗಳಲ್ಲಿ ಕನ್ನಡದ ಆತ್ಮವಿತ್ತು ಅವರ ಕಾರ್ಯಗಳಲ್ಲಿ ಜನಪರ ಕಾಳಜಿಯಿತ್ತು ಅವರ ವ್ಯಕ್ತಿತ್ವದಲ್ಲಿ ಸಜ್ಜನಿಕೆಯ ಸೌಂದರ್ಯವಿತ್ತು.

ಕೆಲವರು ಅಗಲಿದಾಗ ಒಂದು ಕುಟುಂಬ ದುಃಖಿಸುತ್ತದೆ ಕೆಲವರು ಅಗಲಿದಾಗ ಒಂದು ಊರು ದುಃಖಿಸುತ್ತದೆ ಆದರೆ ಕೆಲವರು ಅಗಲಿದಾಗ ಒಂದು ಯುಗವೇ ಮೌನವಾಗುತ್ತದೆ ದಿವಂಗತ ಬಿ.ಎಸ್ ಗೋಪಾಲಕೃಷ್ಣರವರು ಅಂತಹ ಅಪರೂಪದ ಯುಗಪುರುಷರು.

ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ಬಿತ್ತಿದ ಅಕ್ಷರಗಳು ಇವೆ ಅವರು ಕಟ್ಟಿದ ಮೌಲ್ಯಗಳು ಇವೆ ಅವರು ಬೆಳೆಸಿದ ಪತ್ರಿಕೋದ್ಯಮದ ಸಂಸ್ಕೃತಿ ಇದೆ ಅವರು ತೋರಿದ ನಿಷ್ಠೆಯ ದಾರಿ ಇದೆ. ಇವೆಲ್ಲವೂ ಅವರನ್ನು ಚಿರಂಜೀವಿಯನ್ನಾಗಿಸಿವೆ.

ಕೊಡಗಿನ ಮಣ್ಣಿನಲ್ಲಿ ಹುಟ್ಟಿ, ಕೊಡಗಿನ ಜನರ ಮನಸ್ಸಿನಲ್ಲಿ ನೆಲೆಸಿ ಕೊಡಗಿನ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಜರಾಮರರಾಗಿ ಉಳಿದಿರುವ ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು.

ಶಕ್ತಿ ಪತ್ರಿಕೆಯ ಸ್ಥಾಪಕರು ಎಂಬುದು ಅವರ ಪರಿಚಯ ಮಾತ್ರ.
ಕೊಡಗಿನ ಜನರ ವಿಶ್ವಾಸವನ್ನು ಅಕ್ಷರಗಳಲ್ಲಿ ಕಟ್ಟಿದ ಮಹಾನ್ ವ್ಯಕ್ತಿತ್ವ ಎಂಬುದು ಅವರ ನಿಜವಾದ ಗುರುತು

ಅವರ ಜನ್ಮದಿನದ ಸ್ಮರಣೆಯಲ್ಲಿ ಕೃತಜ್ಞತೆಯ ನಮನಗಳು

✍️ ಎಂಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ

WhatsApp

Join Now

Telegram

Join Now

Instagram

Join Now