--Ads--

ಶ್ರಮದಾನ – 4 *************

On: September 1, 2026 10:43 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರಮದಾನ – 4
*************

” ಸೌಲತ್ತು ಜಾಸ್ತಿಯಾದರೆ ದೌಲತ್ತು ಜಾಸ್ತಿಯಾಗುತ್ತದೆ ” ಎಂದು ಇತ್ತೀಚೆಗೆ ಭೇಟಿಯಾದ ಮೈಸೂರಿನ ಆತ್ಮೀಯ ಮಿತ್ರರು, ನಿವೃತ್ತ ಪ್ರಾಂಶುಪಾಲರಾದ ಶ್ರೀ ಬೈರೇಗೌಡರು ಲೋಕಾಭಿರಾಮವಾಗಿ ಹೇಳಿದರು. ಖಂಡಿತ ಇದು ಬಹುತೇಕ ವಾಸ್ತವವಾಗಿದೆ. ಮನುಷ್ಯ ಹೆಚ್ಚು ಹೆಚ್ಚು ಸೌಲಭ್ಯಗಳನ್ನು, ಅನುಕೂಲಗಳನ್ನು ಪಡೆದಂತೆ ಅದನ್ನು ಸದುಪಯೋಗಪಡಿಸಿಕೊಳ್ಳುವ ಹಂತವನ್ನು ಮೀರಿ ಈ ಸೌಲಭ್ಯಗಳನ್ನೇ ದೌಲತ್ತನ್ನಾಗಿ, ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ತನ್ನ ದೇಹ ಮತ್ತು ಮನಸ್ಸುಗಳನ್ನು ತಾನೇ ಸ್ವತಃ ವಂಚಿಸಿಕೊಳ್ಳುತ್ತಿದ್ದಾನೆ. ಹೆಚ್ಚು ಹೆಚ್ಚು ಸೌಕರ್ಯ ಸಿಕ್ಕಷ್ಟು ಆತನ ಅಹಂಕಾರ ಮಿತಿಮೀರಿ ಅದೇ ಅವನ ವಿನಾಶಕ್ಕೂ ಕಾರಣವಾಗುತ್ತಿದೆ.

ಒಂದು ವರ್ಷ ಅವಧಿಯ 52 ವಾರಗಳ ಶ್ರಮದಾನದ ನಾಲ್ಕನೆಯ ಉದ್ಯೋಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲ್ಲೂಕಿನ, ನಂದಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸಿಂಚನಾ ಪ್ಯಾಲೇಸ್ ಹೋಟೆಲ್ ನಲ್ಲಿ ಮೊನ್ನೆ ಅಂದರೆ ದಿನಾಂಕ 30/08/2026ರ ಭಾನುವಾರ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡಿದೆನು. ಮೊದಲೇ ನಿರ್ಧಾರವಾದಂತೆ ಬೆಳಗ್ಗೆ ಆತ್ಮೀಯ ಮಿತ್ರರಾದ ಶ್ರೀ ರೇವಣಪ್ಪ ಅವರ ಜೊತೆ ಬೆಳಗ್ಗೆ ಬೆಳಗ್ಗೆ 8 ಗಂಟೆಗೆ ಹೊರಟು, 9 ಗಂಟೆಯ ಹೊತ್ತಿಗೆ ಆ ಹೋಟೆಲ್ ತಲುಪಿದೆವು. ಅಲ್ಲಿಯೇ ಇಬ್ಬರೂ ಒಟ್ಟಿಗೆ ತಿಂಡಿ ತಿಂದು ನಂತರ ಕೆಲಸ ಪ್ರಾರಂಭಿಸಿದೆನು.

ಈ ಹೋಟೆಲ್ ಮಾಲೀಕರಾದ
ಶ್ರೀ ಹರಿದಾಸ್ ( ಮಣಿ ) ಅವರು ಅತಿಥಿಸತ್ಕಾರಕ್ಕೆ ಹೆಸರಾದವರು. ಈಗ ಮಾತ್ರವಲ್ಲ ಸಾಕಷ್ಟು ವರ್ಷಗಳಿಂದ ಅವರ ಆತಿಥ್ಯವನ್ನು ಸ್ವೀಕರಿಸಿದ್ದೇನೆ. ಅತಿ ಎನಿಸುವಷ್ಟು ಸತ್ಕಾರ ಮಾಡುತ್ತಾರೆ. ಇವರದು ಕೂಡ ಒಂದು ರೀತಿ ಹೋರಾಟದ ಬದುಕು. ಕೆಲವೇ ವಾಕ್ಯಗಳಲ್ಲಿ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮೂಲತಃ ಹಾಸನ ಜಿಲ್ಲೆಯವರಾದ ಹರಿದಾಸ್ ಅವರು 14ನೇ ವಯಸ್ಸಿಗೆ ಕೆಲಸ ಹುಡುಕಿಕೊಂಡು ನಂದಿ ಬೆಟ್ಟಕ್ಕೆ ಬಂದು ಅಲ್ಲಿನ ಅತಿಥಿ ಗೃಹದಲ್ಲಿ ಅಡುಗೆ ಕಾರ್ಮಿಕರಾಗಿ ಕೆಲಸ ಪ್ರಾರಂಭವಹಿಸುತ್ತಾರೆ. ಸುಮಾರು 14/15 ವರ್ಷಗಳು ಸತತವಾಗಿ ಅಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ.

ಬದುಕಿನ ವಿಶೇಷತೆಯೆಂದರೆ, ಸ್ವಾರಸ್ಯವೆಂದರೆ ಜೀವನಕ್ಕೆ ಸಿಗುವ ಬಹುದೊಡ್ಡ ತಿರುವುಗಳು. ಯುವಕರಾದ ಶ್ರೀ ಹರಿದಾಸ್ ಅವರು ಅಲ್ಲಿಯ ಯೋಗ ನಂದೀಶ್ವರ ದೇವಸ್ಥಾನದ ಅರ್ಚಕರ ಮಗಳನ್ನು ಪ್ರೀತಿಸುತ್ತಾರೆ. ಮುಂದೆ ಅಂತರ್ಜಾತಿಯ ವಿವಾಹವನ್ನು ಆಗುತ್ತಾರೆ. ತದನಂತರ ನಂದಿಬೆಟ್ಟದ ಕೆಳಗೆ ಬಂದು ಸ್ವಂತದ ಈಗಿನ ಸಿಂಚನಾ ಪ್ಯಾಲೇಸ್ ಹೋಟೆಲ್ ಹಾಗು ಮತ್ತೊಂದು ಅಲ್ಲಿಗೆ ಸಮೀಪದಲ್ಲಿ ಅಭಿನಂದನಾ ರೆಸ್ಟೋರೆಂಟ್ ಪ್ರಾರಂಭಿಸುತ್ತಾರೆ. ಜೊತೆಗೆ ಅವರೇ ಹೇಳಿದಂತೆ ತುಮಕೂರಿನ ಸಿದ್ದಗಂಗೆಯ ಮಠದಲ್ಲೂ ಸಹ ಅಡುಗೆ ಕಾರ್ಯದಲ್ಲಿ ಸಾಕಷ್ಟು ವರ್ಷ ತೊಡಗಿಸಿಕೊಂಡಿದ್ದರು. ಕಾರ್ಮಿಕರಾಗಿದ್ದು ಈಗ ಮಾಲೀಕರಾಗಿ ಹೋಟೆಲ್ ಉದ್ಯಮದಲ್ಲಿ ಒಂದಷ್ಟು ಯಶಸ್ಸು ಪಡೆದಿದ್ದಾರೆ. ಇದೀಗ ಪಿಯುಸಿ ಓದುತ್ತಿರುವ ಮಗಳೊಂದಿಗೆ ಬದುಕಿನಲ್ಲಿ ನೆಲೆ ಕಂಡುಕೊಂಡು, ತುಂಬಾ ಸಾಧು ಸಜ್ಜನರ ರೀತಿ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾ, ಆಗಾಗ ಬಡವರಿಗೆ ಆರ್ಥಿಕ ನೆರವು ನೀಡುತ್ತಾ, ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಎಂದಿನಂತೆ ಹೋಟೆಲ್ ಉದ್ಯಮದ ಸವಾಲುಗಳು, ವ್ಯಾವಹಾರಿಕ ಏರಿಳಿತಗಳು ಅವರಿಗೂ ಇದೆ.

ಶ್ರೀ ಮಣಿ ಅವರು ನನಗೆ ಗ್ರಾಹಕರ ಆರ್ಡರ್ ಮಾತ್ರ ತೆಗೆದುಕೊಳ್ಳಿ. ತಟ್ಟೆ, ಲೋಟ ಎತ್ತುವುದು ಬೇಡ. ಅದು ನನ್ನಿಂದ ನೋಡಲು ಸಾಧ್ಯವಿಲ್ಲ ಎಂದರು. ಅವರ ಪ್ರೀತಿಯ ಅಭಿಮಾನಕ್ಕೆ ಋಣಿ. ಆದರೆ ನಾನು ಮಾಡಲು ಬಂದಿರುವುದೇ, ನನ್ನ ಪರಿಕಲ್ಪನೆಯೇ ಸಮಾಜ ಕೆಳಹಂತ ಎಂದು ಪರಿಗಣಿಸಲಾದ ಕೆಲಸಗಳ ಅನುಭವ ಪಡೆಯುವುದು. ಏಕೆಂದರೆ ಬಹುತೇಕ ಇಲ್ಲಿಯವರೆಗೆ ನಾನು ಆ ರೀತಿಯ ಕೆಲಸಗಳನ್ನು ಮಾಡಿಲ್ಲ. ನಾನೊಬ್ಬ ಶಿಕ್ಷಕರ ಮಗನಾಗಿದ್ದು ಹೆಚ್ಚು ಕಡಿಮೆ ಓದು, ಬರಹಗಳಲ್ಲೇ ಹೆಚ್ಚು ಕಾಲ ಕಳೆದವನು. ಜೊತೆಗೆ ಸ್ವಂತ ಕೆಲಸಗಳಲ್ಲೇ ನನ್ನನ್ನು ತೊಡಗಿಸಿಕೊಂಡು ಬದುಕು ಕಟ್ಟಿಕೊಂಡವನು ಹಾಗೂ ನಾಶ ಮಾಡಿಕೊಂಡವನು. ಆದ್ದರಿಂದ ಹೆಚ್ಚು ಈ ರೀತಿಯ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ. ಆ ಕಾರಣಕ್ಕಾಗಿಯೇ ಇರುವ ಒಂದು ಬದುಕಿನಲ್ಲಿ ಇದನ್ನೂ ಮಾಡುವ ಇಚ್ಛೆಯೊಂದಿಗೆ ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದೇನೆ.

ಎಷ್ಟೋ ಜನ ಇದಕ್ಕಿಂತ ಕಷ್ಟದ ಎಂತೆಂಥಹುದೋ ಕೆಲಸ ಮಾಡುವಾಗ ಇದೇನು ದೊಡ್ಡದಲ್ಲ. ನಾನು ಮಾನಸಿಕವಾಗಿ ಸಿದ್ದನಾಗಿದ್ದೆ. ಜೊತೆಗೆ ಆರ್ಡರ್ ತೆಗೆದುಕೊಳ್ಳುವ ಕೆಲಸ ನಿಜಕ್ಕೂ ಕೌಶಲ್ಯವನ್ನು, ನೆನಪಿನ ಶಕ್ತಿಯನ್ನು ಬಯಸುತ್ತದೆ. ಅಷ್ಟು ಕೌಶಲ್ಯ ಮತ್ತು ನೆನಪಿನ ಶಕ್ತಿ, ಜಾಣತನ ನನ್ನಲ್ಲಿ ಇಲ್ಲದೇ ಇರುವುದರಿಂದ ತಟ್ಟೆ, ಲೋಟ ತೆಗೆಯುವುದು ಸ್ವಲ್ಪ ಆರಾಮ ಎನಿಸಿ ಅದನ್ನೇ ಮಾಡತೊಡಗಿದೆ. ಆಗಾಗ ಬರುತ್ತಿದ್ದ ಗ್ರಾಹಕರಲ್ಲಿ ಮಕ್ಕಳು, ಹಿರಿಯರು, ಯುವಕರು, ಕುಟುಂಬಸ್ಥರು, ಸ್ನೇಹಿತರ ಗುಂಪುಗಳು, ಅವರ ಬೇಡಿಕೆಗಳು, ಊಟ ತಿಂಡಿಯ ಬಗ್ಗೆ ಪ್ರಶಂಸೆಗಳು ಹೀಗೆ ಬೆಳಗಿನಿಂದ ಸತತವಾಗಿ ಎಂಟು ಗಂಟೆಗಳ ಕಾಲ ಅಲ್ಲಿ ಕೆಲಸ ಮಾಡಿದೆ.

ಮಧ್ಯೆ ಸುಮಾರು ಅರ್ಧ/ಮುಕ್ಕಾಲು ಗಂಟೆಯ ಊಟದ ವಿರಾಮ. ಆ ಸಮಯದಲ್ಲಿ ಶ್ರೀ ಹರಿದಾಸ್ ಅವರು ನನಗಾಗಿ ತಯಾರಿಸಿದ ವಿವಿಧ ತರಕಾರಿಗಳ ಸಲಾಡ್ ಅದ್ಭುತವಾಗಿತ್ತು. ಇದನ್ನು ನಂದಿ ಬೆಟ್ಟದಲ್ಲಿ ಅಡುಗೆ ಕೆಲಸ ಮಾಡುವಾಗ ವಿವಿಐಪಿಗಳಿಗೆ ಸದಾ ಸಿದ್ಧಪಡಿಸುತ್ತಿದೆ. ಅದೇ ರೀತಿ ನಿಮಗೂ ಸಿದ್ಧಪಡಿಸಿದ್ದೇನೆ ಎಂದು ಹೇಳಿದರು.

ಶ್ರೀ ಮಣಿಯವರನ್ನು ನನಗೆ ಪರಿಚಯಿಸಿದ್ದ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೂ, ನನ್ನ ಹಿತೈಷಿಗಳೂ ಆದ ಶ್ರೀ ಗೋಪಾಲ್ ಅವರು ಸಂಜೆ ನನ್ನೊಂದಿಗೆ ಜೊತೆಯಾಗಿ ಒಂದರ್ಧ ಗಂಟೆ ಅವರೂ ಕೆಲಸ ಮಾಡಿದರು. ಅವರು ಕೆಲವು ವರ್ಷಗಳ ಹಿಂದೆ ಇದೇ ನಂದಿ ಬೆಟ್ಟದ ತೋಟಗಾರಿಕೆ ಇಲಾಖೆಯ ಮೇಲ್ವಿಚಾರಕರು ಆಗಿದ್ದರು.

ಮಣಿಯವರು ಸಂಜೆ ನನಗೆ ಗೊತ್ತಿಲ್ಲದಂತೆ ನನ್ನನ್ನು ಸನ್ಮಾನಿಸಲು ಹಾರ, ಪೇಟ, ಶಾಲು ಎಲ್ಲವನ್ನು ತಂದಿದ್ದರು. ಅವರ ಪ್ರೀತಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಅದು ನಾನು ಸ್ವೀಕರಿಸುವುದು ಉಚಿತವಲ್ಲ, ನಾನು ಬಂದಿರುವುದು ಶ್ರಮದಾನಕ್ಕೆ. ದಯವಿಟ್ಟು ಈಗ ಬೇಡ, ಮುಂದೆ ಬೇರೆ ಸಂದರ್ಭದಲ್ಲಿ ನೋಡೋಣ ಎಂದು ಅವರನ್ನು ನಾನು ಮತ್ತು ಗೋಪಾಲ್ ಅವರು ಒಪ್ಪಿಸಲು ತುಂಬಾ ಕಷ್ಟವಾಯಿತು. ಕೊನೆಗೂ ಆ ಸನ್ಮಾನದ ವಸ್ತುಗಳನ್ನು ಪ್ರೀತಿಯಿಂದ ನಿರಾಕರಿಸಿ ಅಲ್ಲಿಂದ ಬೀಳ್ಕೊಟ್ಟೆನು. ಆ ಸನ್ಮಾನದ ವಸ್ತುಗಳನ್ನು ಹಾಗೆ ಇಟ್ಟಿರುತ್ತಾರೆ. ಮುಂದೆ ಭೇಟಿಯಾದಾಗ ನಾನು ಖಂಡಿತ ಸ್ವೀಕರಿಸುತ್ತೇನೆ ಎಂದು ಅವರಿಗೆ ಭರವಸೆ ನೀಡುತ್ತಾ. ರಾತ್ರಿ ದೇವನಹಳ್ಳಿಯ ನನ್ನ ಬಾಲ್ಯ ಗೆಳೆಯರಾದ ಶ್ರೀ ಉಮೇಶ್ ಅವರ ಮನೆಯಲ್ಲಿ ಊಟ ಮಾಡಿ ಮನೆಗೆ ಮರಳಿದೆನು.

ಮಣಿಯವರು ಆ ಹೋಟೆಲ್ ಮಾಲೀಕರಾದರು ಈಗಲೂ ಮುಖ್ಯ ಅಡಿಗೆಯನ್ನು ಅವರೇ ಸ್ವತಃ ತಯಾರಿಸುತ್ತಾರೆ. ಅದರ ಅರ್ಥ ಮಾಲೀಕ ಕಾರ್ಮಿಕನಾಗಿರುವವರೆಗೂ ಅಥವಾ ಕಾರ್ಮಿಕರಂತೆ ಕೆಲಸ ಮಾಡುವವರೆಗೂ ಯಾವುದೇ ಉದ್ಯಮ ನಷ್ಟಕ್ಕೆ ಗುರಿಯಾಗುವುದು ಕಡಿಮೆಯಾಗುತ್ತದೆ. ಮಣಿಯವರಲ್ಲಿರುವ ಈ ಗುಣ ಸೌಲತ್ತು ಜಾಸ್ತಿಯಾದರೆ ದೌಲತ್ತು ಜಾಸ್ತಿ ಮಾಡಿಕೊಳ್ಳುತ್ತಿರುವ ನಮ್ಮಂತವರಿಗೆ ಒಂದು ಪಾಠವಾಗಲಿ. ನನ್ನ ಶ್ರಮದಾನ ನನ್ನ ಅರಿವಿನ ಸಾಧ್ಯತೆಯನ್ನು ಇನ್ನಷ್ಟು ವಿಸ್ತಾರಗೊಳ್ಳುವಂತೆ ಮಾಡಲಿ, ಮುಂದಿನ ಶ್ರಮದಾನ ಇದೇ ಸೆಪ್ಟೆಂಬರ್ 5ರ ಶನಿವಾರ, ಶಿಕ್ಷಕರ ದಿನಾಚರಣೆಯಂದು ರಾಯಚೂರು ಜಿಲ್ಲೆಯ, ದೇವದುರ್ಗ ತಾಲ್ಲೂಕಿನ, ಗಬ್ಬೂರಿನ ಶ್ರೀ ವಿದ್ಯಾ ಜ್ಯೋತಿ ಶಾಲೆಯಲ್ಲಿ. ಅದಕ್ಕಾಗಿ ಎದುರು ನೋಡುತ್ತಿದ್ದೇನೆ.

ಹೋಟೆಲ್ ಕಾರ್ಮಿಕನಾಗಿ ಇತರ ಸಹೋದ್ಯೋಗಿಗಳೊಂದಿಗೆ ಸಾಕಷ್ಟು ಮಾತನಾಡುತ್ತಾ, ಅವರ ಬದುಕಿನ ಘಟನೆಗಳನ್ನು ಕೇಳಿಸಿಕೊಳ್ಳುತ್ತಾ, ಅವರ ಕೌಟುಂಬಿಕ, ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಳ್ಳುತ್ತಾ, ಸ್ಥಳೀಯ ಕೆಲಸಗಾರರು ಮತ್ತು ಹೊರಗಿನಿಂದ ಬಂದ ಅಂದರೆ ಬಹುತೇಕ ಬಿಹಾರ, ನೇಪಾಳದ ಇತರ ಕೆಲಸಗಾರರ ನಡುವಿನ ಕೆಲಸದ ಶ್ರದ್ದೆಯ, ದಕ್ಷತೆಯ ಭಿನ್ನತೆಯನ್ನು ಗುರುತಿಸುತ್ತಾ, ಕಾರ್ಮಿಕರ ಮಾನಸಿಕ ತೊಳಲಾಟ, ಆ ದಿನದ ಕೆಲಸ ಮುಗಿಸಲು ಹಾತೊರೆಯುವ ಮನಸ್ಥಿತಿ, ಗ್ರಾಹಕರು ಇಲ್ಲದಿದ್ದಾಗ ಅವರು ಕುಳಿತಲ್ಲೇ ಚಡಪಡಿಸುವ ರೀತಿ, ತೂಕಡಿಸುವ ರೀತಿ, ಚಿಂತಿಸುವ ರೀತಿ ಅಥವಾ ಧ್ಯಾನಸ್ಥ ಮನಸ್ಥಿತಿ ತಲುಪುವ ರೀತಿ, ಅವರುಗಳ ನಡುವಿನ ಪ್ರೀತಿ, ಜಗಳ, ಇನ್ನೊಬ್ಬರ ಮೇಲೆ ಸವಾರಿ ಮಾಡುವುದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ವಿವರವಾಗಿ ಬರೆಯುತ್ತೇನೆ.

ಸೌಲತ್ತು ಜಾಸ್ತಿ ಆಗುತ್ತಿದ್ದರೂ ದೌಲತ್ತು ಜಾಸ್ತಿ ಮಾಡಿಕೊಳ್ಳದೆ, ಮಾನವೀಯವಾಗಿ ಎಲ್ಲವನ್ನು ಸಹಜವಾಗಿಯೇ ಸ್ವೀಕರಿಸುತ್ತಾ, ನಮ್ಮೊಳಗಿನ ಅಹಂ ಕಡಿಮೆ ಮಾಡಿಕೊಳ್ಳುತ್ತಾ ಬೆಳೆಯೋಣ ಎಂದು ಮನವಿ ಮಾಡಿಕೊಳ್ಳುತ್ತಾ,

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now