--Ads--

ಶಿಡ್ಲಘಟ್ಟ ಕೆರೆಗಳಿಗೆ ನೀರು ಹರಿಸಲು 15 ದಿನಗಳ ಅಧಿಕಾರಿಗಳಿಗೆ ಕಾಲಾವಕಾಶದ ಬಳಿಕ ರೈತರ ಮುಂದಿನ ನಡೆ.

On: September 2, 2026 5:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶಿಡ್ಲಘಟ್ಟ ಕೆರೆಗಳಿಗೆ ನೀರು ಹರಿಸಲು 15 ದಿನಗಳ ಅಧಿಕಾರಿಗಳಿಗೆ ಕಾಲಾವಕಾಶದ ಬಳಿಕ ರೈತರ ಮುಂದಿನ ನಡೆ

ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿ ಮುಂದುವರಿದಿದ್ದು, ಕೆರೆಗಳಿಗೆ ಎಚ್.ಎನ್.ವ್ಯಾಲಿ ನೀರು ಸಮರ್ಪಕವಾಗಿ ಹರಿದರೆ ಅಂತರ್ಜಲ ಮಟ್ಟ ಸುಧಾರಿಸುವುದರ ಜೊತೆಗೆ ಕೃಷಿ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ದೊಡ್ಡತೇಕಹಳ್ಳಿ, ಪಲಿಚೆರ್ಲು ಹಾಗೂ ಅಬ್ಲೂಡು ಪಂಚಾಯಿತಿ ವ್ಯಾಪ್ತಿಯ ರೈತರು ಬಂಡೆಮ್ಮನ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿಯದಿರುವ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದರು.

ತಾಲ್ಲೂಕಿನ ಕೆರೆಗಳಿಗೆ ಎಚ್.ಎನ್.ವ್ಯಾಲಿ ನೀರನ್ನು ಸಮರ್ಪಕವಾಗಿ ಹರಿಸಿ ಕೆರೆಗಳನ್ನು ತುಂಬಿಸಬೇಕು ಎಂಬುದು ರೈತ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದ್ದು ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ,ರೈತರ ಆಹ್ವಾನದ ಮೇರೆಗೆ ಸಂಘಟನೆಯ ಮುಖಂಡರು ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಆಲಿಸಿದ್ದು, ನೀರಿನ ಸಮಸ್ಯೆ ಎಲ್ಲರಿಗೂ ಸಂಬಂಧಿಸಿರುವುದರಿಂದ ವಿವಿಧ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿ ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಒತ್ತಾಯಿಸಲಾಗಿದೆ ಎಂದರು.

ರೈತ ಮುಖಂಡರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದು, ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು 15 ದಿನಗಳ ಕಾಲಾವಕಾಶ ಕೇಳಿದ್ದಾರೆ ,ಹೀಗಾಗಿ ತಕ್ಷಣವೇ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳದೆ, ಈ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಗಮನಿಸಲಾಗುವುದು, ಸಮಸ್ಯೆ ಬಗೆಹರಿಸಿದರೆ ಸ್ವಾಗತಿಸಲಾಗುವುದು ಇಲ್ಲದಿದ್ದರೆ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಎಚ್.ಎನ್. ವ್ಯಾಲಿ ನೀರು ಹರಿಯುವ ಮಾರ್ಗದಲ್ಲಿ ಕೆಲವರು ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ನೀರು ಎತ್ತಿಕೊಳ್ಳುತ್ತಿರುವುದರಿಂದ ಕೆಳಭಾಗದ ಕೆರೆಗಳಿಗೆ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ ,ಕೋಲಾರ ಭಾಗದಲ್ಲಿ ಅಕ್ರಮ ನೀರೆತ್ತುವಿಕೆಯನ್ನು ನಿಯಂತ್ರಿಸಲು ಟಾಸ್ಕ್‌ಫೋರ್ಸ್ ಮಾದರಿಯ ವ್ಯವಸ್ಥೆ ಮಾಡುವಂತೆ ಶಿಡ್ಲಘಟ್ಟದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಅಧಿಕಾರಿಗಳೊಂದಿಗೆ ತೆರಳಿ ಅಕ್ರಮ ಮೋಟಾರ್‌ಗಳನ್ನು ತೆರವುಗೊಳಿಸಿರುವ ಸಂದರ್ಭಗಳಿದ್ದು, ಕೆಲವು ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಗೊಂದಲವೂ ಉಂಟಾಗಿದೆ ಇಂತಹ ಪರಿಸ್ಥಿತಿ ಮರುಕಳಿಸದಂತೆ ನಿಯಮಬಾಹಿರವಾಗಿ ನೀರು ಎತ್ತುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ಸೋಮವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಕೆಲವರು ನಮ್ಮ ರೈತ ಸಂಘಟನೆ, ರಾಜ್ಯ ಕಾರ್ಯಾಧ್ಯಕ್ಷ ಬೈರೇಗೌಡ ಹಾಗೂ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಮಂಜುನಾಥ್, ಸಭೆ ಮುಂದೂಡುವ ವಿಚಾರವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ,ತಮ್ಮ ಉದ್ದೇಶ ಯಾವುದೇ ಸಭೆಯನ್ನು ತಡೆಯುವುದು ಅಥವಾ ಯಾರನ್ನೂ ವಿರೋಧಿಸುವುದಲ್ಲ ,ರೈತರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡುವುದು ಕೂಡ ಹೋರಾಟದ ಭಾಗವೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಸೆಪ್ಟೆಂಬರ್-7ರಂದು ಕೆಲ ರೈತ ಸಂಘಟನೆಗಳು ನೀರಿಗಾಗಿ ಹೋರಾಟ ಮಾಡಲು ನಿರ್ಧರಿಸಿವೆ, ಇದಕ್ಕೆ ನಿಮ್ಮ ಸಂಘಟನೆ ಬೆಂಬಲ ಇದೆಯೇ ಎಂಬ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ್, ಈಗಾಗಲೇ ಜಿಲ್ಲಾಧಿಕಾರಿಗಳು ಕೇಳಿರುವ 15 ದಿನಗಳ ಕಾಲಾವಕಾಶವನ್ನು ಮೊದಲು ನೀಡಲಾಗುವುದು ,ಈ ಅವಧಿಯಲ್ಲಿ ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮವನ್ನು ಗಮನಿಸಿ, ಬಳಿಕ ರೈತ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ವೈಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಆರೋಪ ಪ್ರತ್ಯಾರೋಪಗಳನ್ನು ಬದಿಗಿಟ್ಟು ತಾಲ್ಲೂಕಿನ ಕೆರೆಗಳು ತುಂಬಬೇಕು, ರೈತರಿಗೆ ನೀರು ದೊರೆಯಬೇಕು ಎಂಬ ಒಂದೇ ಉದ್ದೇಶದಿಂದ ಎಲ್ಲರೂ ಒಗ್ಗೂಡಬೇಕು ಎಂದರು.

ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೆರೆಗಳಿಗೆ ಸಮರ್ಪಕವಾಗಿ ಎಚ್.ಎನ್.ವ್ಯಾಲಿ ನೀರು ಹರಿಸಬೇಕು ಎಂದು ತಾದೂರು ಮಂಜುನಾಥ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ,ಕಾರ್ಯದರ್ಶಿ ವೇಣು, ಬಸವರಾಜ,ಜಿ.ಕೆಂಪಣ್ಣ,ಸಾದಲಿ ನಾರಾಯಣಸ್ವಾಮಿ,
ಗಂಗಪ್ಪ, ಕೆಂಪರೆಡ್ಡಿ,ಮಂಜುನಾಥ್, ವಾಸು, ಮಂಜುನಾಥ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now