ವಿಜಯ ದರ್ಪಣ ನ್ಯೂಸ್….
ಮನೆಯಲ್ಲಿ ಸಾಕಿದ್ದ “ಸೀತೆ” ಎಂಬ ಹಸುವಿಗೆ ಅದ್ದೂರಿಯ ‘ಸೀಮಂತ’ ಪೂಜಾ ಕಾರ್ಯ

ಶಿಡ್ಲಘಟ್ಟ : ಮನೆಯಲ್ಲಿ ಸಾಕಿದ್ದ ‘ಸೀತೆ’ ಹಸು ಹಲವು ವರ್ಷಗಳಿಂದ ಗರ್ಭಧರಿಸಿರಲಿಲ್ಲ ಇದರಿಂದ ಬೇಸರಗೊಂಡಿದ್ದ ಮನೆಯ ತರುಣ್ ಎಂಬ ಯುವಕ, ಹಸು ಗರ್ಭ ಧರಿಸಿದರೆ ಗ್ರಾಮದ ದೇವತೆಗೆ ಹರಕೆ ತೀರಿಸುವುದರ ಜೊತೆಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಸಾರ್ವಜನಿಕರಿಗೆ ಊಟ ಹಾಕಿಸುವುದಾಗಿ ಪ್ರಾರ್ಥಿಸಿದ್ದರು ಹರಕೆ ಈಡೇರಿದ ಹಿನ್ನೆಲೆಯಲ್ಲಿ ಕುಟುಂಬದವರು ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು.
ಇದೀಗ ಸೀತೆ ಹಸು ಕರು ಹಾಕಿದ್ದು, ಕರುವನ್ನು ಕಂಡು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ ಹಲವು ವರ್ಷಗಳ ಬಳಿಕ ಹಸು ಗರ್ಭ ಧರಿಸಿ ಕರು ಹಾಕಿರುವುದು ಕುಟುಂಬದ ಪಾಲಿಗೆ ವಿಶೇಷ ಸಂತಸದ ಕ್ಷಣವಾಗಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.
ತಾಲ್ಲೂಕಿನ ಅಂಬಿಗಾನಹಳ್ಳಿ ಗ್ರಾಮದ ಮನೆಯಲ್ಲಿ
ಹೆರಿಗೆ ಮಾಡಿಸಿಕೊಳ್ಳುವ ಮಹಿಳೆಯರಂತೆ ಸೀರೆ ಉಟ್ಟು, ಹೂವಿನಿಂದ ಅಲಂಕಾರಗೊಂಡು, 5 ರಿಂದ 6 ಲಕ್ಷ ರೂ.ಗಳ ವೆಚ್ಚದಲ್ಲಿ ಅದ್ದೂರಿ ಸೀಮಂತ ಕಾರ್ಯಕ್ರಮ ಮಾಡಿಸಿಕೊಂಡಿದ್ದ “ಸೀತೆ” ಎಂಬ ಹಸು ಈಗ ನಿಜಕ್ಕೂ ಕರು ಹಾಕಿದೆ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

“ಸೀಮಂತ” ಕಾರ್ಯಕ್ರಮದಂದು ಹಸುವಿಗೆ ಸೀರೆ ಉಡಿಸಿ, ಹೂವು ಹಾಗೂ ಹಾರಗಳಿಂದ ಅಲಂಕರಿಸಲಾಗಿತ್ತು, ಹಸುವಿಗೆ ಇಷ್ಟವಾಗುವ ವಿವಿಧ ಬಗೆಯ ಹಣ್ಣುಗಳು, ತಿಂಡಿ-ತಿನಿಸುಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಇಟ್ಟು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಾಗಿತ್ತು.
ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಬಂಧು-ಬಳಗ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರನ್ನು ಆಹ್ವಾನಿಸಲಾಗಿತ್ತು ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಲಾಗಿತ್ತು ಬಂದಿದ್ದ ಸಾರ್ವಜನಿಕರಿಗೆ ಹೋಳಿಗೆ ಊಟ ಸೇರಿದಂತೆ ವಿವಿಧ ಸಿಹಿ-ತಿನಿಸುಗಳೊಂದಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.








