--Ads--

ಶರಣಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ, ಉಚಿತ ನೋಟ್‌ಬುಕ್ ವಿತರಣೆ

On: September 2, 2026 5:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಶರಣಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ, ಉಚಿತ ನೋಟ್‌ಬುಕ್ ವಿತರಣೆ

 

ವಿಜಯಪುರ: ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಹಾಗೂ ಸಾಕ್ಷಿಮುರುಘ ಸೇವಾ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶರಣಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ಮೈಸೂರಿನ ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಸಮಾರಂಭವನ್ನು ಮಹಾತ್ಮ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ ಉಪನ್ಯಾಸ ನೀಡಿ, ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರು ನಾಡಿನ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಅಕ್ಷರ ದಾಸೋಹ ಹಾಗೂ ಅನ್ನ ದಾಸೋಹ ನೀಡುವ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ಸ್ಥಾಪಿಸಿದ ಜೆಎಸ್‌ಎಸ್‌ ವಿದ್ಯಾಪೀಠವು ಇಂದು ಬೃಹತ್‌ಮರದಂತೆ ಬೆಳೆದು ಜಗತ್ತಿನಾದ್ಯಂತ ಸಂಸ್ಥೆಗಳನ್ನು ಸ್ಥಾಪಿಸಿ ವಸತಿ, ಶಿಕ್ಷಣವನ್ನು ನೀಡುತ್ತಿದೆ. ಅವರ ತ್ಯಾಗ ಮತ್ತು ಕರುಣೆಯ ಹಾದಿ ನಮ್ಮೆಲ್ಲರಿಗೂ ಸಾರ್ವಕಾಲಿಕ ಅನುಕರಣೀಯ ಎಂದರು.

ಶರಣತತ್ವ ಪ್ರಚಾರ ನಿರಂತರ: ಶರಣಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದಲೂ ೧೨ನೇ ಶತಮಾನದ ಶರಣರ ತತ್ತ್ವಗಳು, ವಚನ ಸಾಹಿತ್ಯ ಮತ್ತು ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕಿನಾದ್ಯಂತ ಯುವ ಪೀಳಿಗೆಯಲ್ಲಿ ವಚನ ಸಾಹಿತ್ಯದ ಜಾಗೃತಿ ಮೂಡಿಸಲು ಪರಿಷತ್ತು ವಿವಿಧ ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರಹಡಪದ್‌ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಆದ್ಯತೆ ನೀಡದೆ, ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದರು.

ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ಮಾತನಾಡಿ, ಸತ್ಯ, ಪ್ರಾಮಾಣಿಕತೆ, ಗುರು-ಹಿರಿಯರಲ್ಲಿ ಗೌರವ ಹಾಗೂ ನೈತಿಕತೆಯನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಕದಳಿವೇದಿಕೆ ಅಧ್ಯಕ್ಷೆ ಬಿ.ಸ್ವರ್ಣಗೌರಿ ಮಾತನಾಡಿ, ಸಮಾಜದ ಶೋಷಿತ, ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರೀ ರಾಜೇಂದ್ರಸ್ವಾಮೀಜಿ ಕೊಡುಗೆ ಅಪಾರವಾದುದು. ಸಂಘಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಉನ್ನತಿಗೆ ಪೂರಕವಾದ ಹಲವು ಸಮಾಜಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮಾದರಿಯಾಗಿದ್ದಾರೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಸಾಕ್ಷಿಮುರುಘ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಕದಳಿವೇದಿಕೆಯ ಕಾರ್ಯದರ್ಶಿ ದೀಪಾ, ವಿಜಯಪುರ ಎಜುಕೇಶನ್‌ಸೊಸೈಟಿಯ ಕಾರ್ಯದರ್ಶಿ ಪವನ್‌, ಮಹಾತ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ, ಶಿಕ್ಷಕ ರವಿ, ದೇವಪ್ಪ, ಮತ್ತಿತರರು ಇದ್ದರು. ಶಾಲಾ ಮಕ್ಕಳಿಂದ ವಚನಗಾಯನ ನಡೆಯಿತು.

ಉಚಿತ ನೋಟ್‌ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಎಚ್‌.ಎಸ್‌.ರುದ್ರೇಶಮೂರ್ತಿ, ಚಂದ್ರಶೇಖರ ಹಡಪದ್‌, ಮ.ಸುರೇಶ್‌ಬಾಬು, ಸ್ವರ್ಣಗೌರಿ, ಮತ್ತಿತರರು ಇದ್ದರು.

WhatsApp

Join Now

Telegram

Join Now

Instagram

Join Now