ವಿಜಯ ದರ್ಪಣ ನ್ಯೂಸ್….
ಸೆ.05 ರಂದು ಪ್ರಜಾ ಸೇವಾ ಆಂದೋಲನಕ್ಕೆ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ: ಸಾರ್ವಜನಿಕರು ಅಹವಾಲು ಸಲ್ಲಿಸ ಡಿಸಿ ಸೂಚನೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆ.02:
ಸೆಪ್ಟೆಂಬರ್ 05 ರಂದು ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮೊದಲ ಪ್ರಜಾ ಸೇವಾ ಆಂದೋಲನ ಸಭೆ ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಸ್ಥಳಕ್ಕೆ ಬಂದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ತಿಳಿಸಿದರು.
ದೇವನಹಳ್ಳಿ ಟೌನ್ ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ
ಪ್ರಜಾ ಸೇವಾ ಇಲಾಖೆಯು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ, ಸರ್ಕಾರದ ವಿನೂತನ ಕಾರ್ಯಕ್ರಮವಾದ ಪ್ರಜಾ ಸೇವಾ ಜನಾಂದೋಲನ ಸಭೆಯನ್ನು ಪ್ರತಿ ಶನಿವಾರ ಪ್ರತಿ ತಾಲ್ಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗುತ್ತಿದೆ. ಜೊತೆಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ನಡೆಸಲಾಗುವುದು.
ಇದರ ಭಾಗವಾಗಿ ಸೆಪ್ಟೆಂಬರ್ 05 ರಂದು ಶನಿವಾರ ಮೊದಲ ಪ್ರಜಾ ಸೇವಾ ಆಂದೋಲನ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12.30 ಗಂಟೆಗೆ ಆಯೋಜಿಸಲಾಗಿದೆ.
ಸಾರ್ವಜನಿಕರ ಮನೆಬಾಗಿಲಿಗೆ ಮುಖ್ಯಮಂತ್ರಿಗಳ ಸಂದೇಶ ಪತ್ರ, ಕುಂದುಕೊರತೆ ಅರ್ಜಿ ನಮೂನೆ ವಿತರಿಸಲು ಪಿಡಿಒ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಅರ್ಜಿ ನಮೂನೆ ಪಡೆದು ಯಾವ ಇಲಾಖೆಗೆ ಸಂಬಂಧಿಸಿದ ಸೌಲಭ್ಯ, ಅಹವಾಲು ಇದೆ ಎಂಬುದನ್ನು ಭರ್ತಿ ಮಾಡಿ ಕೌಂಟರ್ ಗಳಲ್ಲಿ ನೀಡಬೇಕು ಸ್ಥಳದಲ್ಲಿ ಪರಿಹರಿಸುವ ಅಹವಾಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಹರಿಸಲಾಗುವುದು, ಉಳಿದ ಅರ್ಜಿಗಳನ್ನು ಸ್ವೀಕರಿಸಿ, ಸ್ವೀಕೃತಿ ಕಾಪಿ ಅರ್ಜಿದಾರರಿಗೆ ನೀಡಲಾಗುವುದು.
ಪಿಂಚಣಿ ಸೇವೆ, ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನ, ವಿಶೇಷ ಚೇತನರ ಯೋಜನೆಗಳು,
ಕಂದಾಯ ಸಮಸ್ಯೆಗಳು, ಗ್ಯಾರಂಟಿ ಯೋಜನೆಗಳ ಸೌಲಭ್ಯ, ಹೊಸ ಪಡಿತರ ಚೀಟಿ, ರಸ್ತೆ, ಕುಡಿಯುವ ನೀರು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಅಭಿವೃದ್ಧಿ,,ಪೊಲೀಸ್ ಇಲಾಖೆ ಸೇವೆ, ನೀರಾವರಿ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳು ಹಾಗೂ ಸಮಸ್ಯೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪರಿಹಾರ ಒದಗಿಸಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಜನಸಾಮಾನ್ಯರ ಅಹಾವಾಲುಗಳನ್ನು ಆಲಿಸಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅರ್ಜಿ ಸ್ವೀಕೃತಿಗೆ ಕೌಂಟರಗಳನ್ನು ಸ್ಥಾಪಿಸಲು, ಸರ್ಕಾರದ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಆದೇಶ ಪತ್ರವನ್ನು ಸ್ಥಳದಲ್ಲಿ ವಿತರಿಸಲು, ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಆಗತ್ಯ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಸಿಇಒ ಡಾ.ವಾಸಂತಿ ಅಮರ್, ಎಸಿ ಮಂಜುನಾಥ್, ಸಿಪಿಒ ರಾಮಕೃಷ್ಣ, ದೇವನಹಳ್ಳಿ ಇಒ ಮುನಿರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.











