ವಿಜಯ ದರ್ಪಣ ನ್ಯೂಸ್……
ಹೊಸಕೋಟೆ ತಾಲೂಕು ವಕೀಲರ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಧರ್ಮ, ನ್ಯಾಯ ಮತ್ತು ಕರ್ತವ್ಯನಿಷ್ಠೆಗೆ ಶ್ರೀಕೃಷ್ಣನ ಜೀವನವೇ ಪ್ರೇರಣೆ: ವೈ.ವಿ. ರಾಧಾಕೃಷ್ಣ

ತಾವರೆಕೆರೆ : ಹೊಸಕೋಟೆ ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕು ವಕೀಲರ ಸಂಘದ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ವೈ.ವಿ. ರಾಧಾಕೃಷ್ಣ ಅವರು ವಹಿಸಿದ್ದರು. ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೈ.ವಿ. ರಾಧಾಕೃಷ್ಣ ಅವರು, ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಶ್ರೀಕೃಷ್ಣನು ಧರ್ಮದ ಪರವಾಗಿ ನಿಂತು, ಅನ್ಯಾಯದ ವಿರುದ್ಧ ಹೋರಾಡುವ ಮೂಲಕ ಸತ್ಯ ಮತ್ತು ನ್ಯಾಯದ ಮಹತ್ವವನ್ನು ಜಗತ್ತಿಗೆ ಸಾರಿದ್ದಾನೆ ಎಂದು ಹೇಳಿದರು.
ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶವನ್ನು ಶ್ರೀಕೃಷ್ಣ ನೀಡಿದ್ದಾನೆ. ನ್ಯಾಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.
ವಕೀಲರು ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು, ಸಮಾಜದಲ್ಲಿ ನ್ಯಾಯ ಮತ್ತು ಸತ್ಯವನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದಾರೆ. ಅದೇ ರೀತಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಭದ್ರತೆಯನ್ನು ಸ್ಥಾಪಿಸುವ ಮಹತ್ವದ ಕರ್ತವ್ಯ ನಿರ್ವಹಿಸುತ್ತಾರೆ. ಶ್ರೀಕೃಷ್ಣನು ಧರ್ಮರಕ್ಷಣೆಗೆ ಮಾರ್ಗದರ್ಶನ ನೀಡಿದ ರೀತಿಯಲ್ಲೇ ವಕೀಲರು ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಕುರುಕ್ಷೇತ್ರದ ಯುದ್ಧವು ಕೇವಲ ಯುದ್ಧವಲ್ಲ; ಅದು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದ ಸಂಕೇತವಾಗಿದೆ. ನ್ಯಾಯದ ಪರವಾಗಿ ನಿಲ್ಲುವುದು ಮತ್ತು ಅನ್ಯಾಯವನ್ನು ವಿರೋಧಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಶ್ರೀಕೃಷ್ಣನ ಆದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಅವರ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಧರ್ಮ, ಕರ್ತವ್ಯನಿಷ್ಠೆ, ಮಾನವೀಯತೆ ಹಾಗೂ ನ್ಯಾಯದ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ಆರೀಫ್ ಉಲ್ಲಾ, ಪ್ರಧಾನ ಸಿವಿಲ್ ನ್ಯಾಯಾಧೀಶರು ಸತೀಶ್ ಬಿ, ಅಪರ ಸಿವಿಲ್ ನ್ಯಾಯಾಧೀಶರು ಶಿಲ್ಪ ಶ್ರೀ ಎನ್ ಎಸ್, ಸಹಾಯಕ ಸರಕಾರಿ ಅಭಿಯೋಜಕರು ನಿರ್ಮಲ ಕುಮಾರಿ, ಸಹಾಯಕ ಸರ್ಕಾರಿ ಅಭಿಯೋಜಕರು ನಾಗಭೂಷಣ್, ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಸನ್ನ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷರಾದ ಹನುಮಂತ ರಾವ್, ಪ್ರಧಾನ ಕಾರ್ಯದರ್ಶಿ ರಾಜಪ್ಪ, ಜಂಟಿ ಕಾರ್ಯದರ್ಶಿ ಮುನಿರಾಜು, ಖಜೆನ್ಸಿ ನಾಗ ಜ್ಯೋತಿ, ನಿರ್ದೇಶಕರಾದ ವೆಂಕಟೇಶ್, ಪ್ರಕಾಶ್ ಮೂರ್ತಿ, ಗಣೇಶ್, ಅಮರ್, ಅಭಿಷೇಕ್, ನಯನ, ವಿದ್ಯಾ ಹಾಗೂ ಹಿರಿಯ ವಕೀಲರು ಕಕ್ಷಿದಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.









