ವಿಜಯ ದರ್ಪಣ ನ್ಯೂಸ್….
ಕಾನೂನು ಬಾಹಿರವಾಗಿ ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ-ಡಿಹೆಚ್ಒ ಡಾ.ಮಂಜುನಾಥ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಅ.07 :
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕೆಲ ಆರೋಗ್ಯ ಸಂಸ್ಥೆಗಳು ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೋಂದಣಿಯನ್ನು ಹೊಂದದೇ ಅನಧಿಕೃತವಾಗಿ ಆರೋಗ್ಯ ಸಂಸ್ಥೆಯನ್ನು ನಡೆಸುತ್ತಿರುವುದು / ನಿರ್ವಹಿಸುತ್ತಿರುವುದು / ಸ್ಥಾಪಿಸಿರುವುದರ ಕುರಿತು ದೂರುಗಳನ್ನು ನೀಡುತ್ತಿದ್ದು ಅನಧಿಕೃತ ಆರೋಗ್ಯ ಸಂಸ್ಥೆಗಳ ವಿರುದ್ಧ ಕಾಯ್ದೆಗಳನ್ವಯ ಶಿಸ್ತು ಕ್ರಮ & ಶಾಸನ ಬದ್ಧ ಕ್ರಮಗಳನ್ನು ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್ ಆರ್ ಮಂಜುನಾಥ್ ತಿಳಿಸಿದ್ದಾರೆ.
ಕೆ.ಪಿ.ಎಂ.ಇ ಕಾಯ್ದೆ 2007 ಕಲಂ-03&07, ಅನ್ವಯ ನೋಂದಣಿಯನ್ನು ಹೊಂದದೇ ಅನಧಿಕೃತವಾಗಿ ಆರೋಗ್ಯ ಸಂಸ್ಥೆಯನ್ನು ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳು ಕೂಡಲೇ ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಸಂಸ್ಥೆಗಳ ಮೊಹರು ಬಂದ್ಗೊಳಿಸಿ, ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು.
ಈಗಾಗಲೇ ದೂರು ದಾಖಲಾದ ಆರೋಗ್ಯ ಸಂಸ್ಥೆಗಳ ಕುರಿತು ವಿಚಾರಣೆಗಳನ್ನು ನಡೆಸಿ, ತಪ್ಪಿತಸ್ಥ ಆರೋಗ್ಯ ಸಂಸ್ಥೆಗಳ ವಿರುದ್ಧ ಕಾನೂನು ರೀತ್ಯಾ ಜುಲ್ಮಾನೆಗಳನ್ನು ವಿಧಿಸಲಾಗಿ, ದಾವೆಗಳನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಹೂಡಲಾಗಿದೆ.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮ ಬಾಹಿರವಾಗಿ ಆರೋಗ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದರೆ ಜಿಲ್ಲಾ ಕೆ.ಪಿ.ಎಂ.ಇ ನೋಂದಣಿ ಮತ್ತು ಕುಂದುಕೊರತೆಗಳ ನಿವಾರಣ ಪ್ರಾಧಿಕಾರಕ್ಕೆ ಮಾಹಿತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ॥ ಎಸ್ ಆರ್ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










