ವಿಜಯ ದರ್ಪಣ ನ್ಯೂಸ್.....
ಪ್ರತಿಭಾವಂತ ನಟ ನಾನಾ ಪಾಟೇಕರ್; ಯುವ ಜನಾಂಗಕ್ಕೆ ಸ್ಫೂರ್ತಿ!

ಲೇಖನ : ಅಂಕ್ನಳ್ಳಿ ಜಯರಾಂ, ಮುಂಬಯಿ
ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ, ವಿಶಿಷ್ಟ ಹಾಗೂ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ನಾನಾ ಪಾಟೇಕರ್ (ವಿಶ್ವನಾಥ್ ಪಾಟೇಕರ್) ಅವರು ತಮ್ಮ ಅಪ್ರತಿಮ ನಟನೆ, ವಿಶಿಷ್ಟ ಸಂಭಾಷಣೆಯ ಶೈಲಿ ಮತ್ತು ಸರಳ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ‘ನಾನಾ’ ಎಂದೇ ಖ್ಯಾತನಾಮರಾಗಿ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಬಹು ಕಾಲ ಆಳಿದ ಅವರು, ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ ತೀರ್ಪುಗಾರ, ನಿರ್ದೇಶಕ ಮತ್ತು ಸಮಾಜ ಸೇವಕರಾಗಿಯೂ ಜನಮನ ಗೆದ್ದಿದ್ದರು.
ನಾನು 2010ಕ್ಕೂ ಮುಂಚೆ ಗೋವಾ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೀರಾಮಾರ್ – ಡೋನೋಪೋಲಾ ರಸ್ತೆಯಲ್ಲಿದ್ದ ನಮ್ಮ ಕೇಂದ್ರದ ಮುಂಭಾಗದ ಪುಟ್ ಪಾತ್ ನಲ್ಲಿ ಮಾರ್ನಿಂಗ್ ವಾಕ್ ಸಮಯದಲ್ಲಿ ಸಾಕಷ್ಟು ಬಾರಿ ಭೇಟಿಯಾಗಿದ್ದಾರೆ. ಅವರ ಸರಳ ಉಡುಗೆ-ತೊಡುಗೆ, ಖಡಕ್ ಮುಖದಲ್ಲೂ ಮಿನುಗುವ ಅವರ ನಗು, ನೇರ ನುಡಿ ಎಲ್ಲವನ್ನೂ ಕಂಡಿದ್ದೇನೆ. ದೊಡ್ಡ ನಟ ಎನ್ನುವ ಯಾವುದೇ ಹಮ್ಮು – ಬಿಮ್ಮಿಲ್ಲದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು.
ನಾನಾ ಪಾಟೇಕರ್ ಅವರು ಜನವರಿ 1, 1951 ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುದ್ ಜಂಜಿರಾದಲ್ಲಿ ಜನಿಸಿದವರು. ಇವರ ಮೂಲ ಹೆಸರು ವಿಶ್ವನಾಥ್ ಗಜಾನನ್ ಪಾಟೇಕರ್. ಇವರ ತಾಯಿಯ ಆಪ್ತ ಗೆಳತಿಯೊಬ್ಬರು ಇವರನ್ನು ಪ್ರೀತಿಯಿಂದ ‘ನಾನಾ’ ಎಂದು ಕರೆಯುತ್ತಿದ್ದರು, ಇದೇ ಹೆಸರು ಮುಂದೆ ಚಿತ್ರರಂಗದಲ್ಲಿ ಅವರ ಖ್ಯಾತಿಗೆ ಕಾರಣವಾಯಿತು.
ಬಾಲ್ಯದಲ್ಲಿ ಇವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿತು. ಕೇವಲ 13ನೇ ವಯಸ್ಸಿನಲ್ಲಿಯೇ ನಾನಾ ಅವರು ಕುಟುಂಬದ ಹೊಣೆ ಹೊತ್ತು, ಓದುತ್ತಲೇ ಮುಂಬೈನ ರಸ್ತೆಗಳಲ್ಲಿ ಚಿತ್ರರಂಗದ ಪೋಸ್ಟರ್‌ಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು. ಆ ಮೂಲಕ ತಿಂಗಳಿಗೆ ೩೦ ರಿಂದ ೩೫ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ನಂತರ ಮುಂಬೈನ ಪ್ರಸಿದ್ಧ ಸರ್ ಜೆ. ಜೆ. ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್ ಸಂಸ್ಥೆಯಲ್ಲಿ ಕಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಮರಾಠಿ ರಂಗಭೂಮಿಯ ಮೂಲಕ ತಮ್ಮ ನಟನಾ ಜೀವನ ಆರಂಭಿಸಿದ ನಾನಾ ಪಾಟೇಕರ್, 1978 ರ ‘ಗಮನ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು 1989 ರ ‘ಪರಿಂದಾ’ ಚಿತ್ರ. ಇದರಲ್ಲಿನ ಅವರ ಕ್ರೂರ ಅಂಡರ್‌ವರ್ಲ್ಡ್ ಡಾನ್ ಪಾತ್ರ ಅವರಿಗೆ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.
‘ಕ್ರಾಂತಿವೀರ್’ (1994) ಚಿತ್ರದಲ್ಲಿನ ದೇಶಭಕ್ತಿ ಮತ್ತು ಸಾಮಾಜಿಕ ಕಳಕಳಿಯ ಪಾತ್ರ ಹಾಗೂ ಅವರ ತೀವ್ರ ಆಕ್ರೋಶದ ಸಂಭಾಷಣೆಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಜರಾಮರವಾದವು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.
‘ಅಗ್ನಿ ಸಾಕ್ಷಿ’ ಮತ್ತು ‘ಖಾಮೋಶಿ’ ಚಿತ್ರಗಳಲ್ಲಿ ವಿಭಿನ್ನ ಮನಸ್ಥಿತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ಅವರ ಅಭಿನಯ ಕೌಶಲ್ಯವನ್ನು ಹೊರಹಾಕಿದ್ದರು.
‘ಅಬ್ ತಕ್ ಛಪ್ಪನ್’ (2004) ನ ಮುಂಬೈ ಪೊಲೀಸ್ ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ನಾನಾ ಅವರ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಕೇವಲ ಗಂಭೀರ ಪಾತ್ರಗಳಷ್ಟೇ ಅಲ್ಲದೆ, ‘ಉದಯ್ ಶೆಟ್ಟಿ’ ಎಂಬ ಹಾಸ್ಯಭರಿತ ಡಾನ್ ಪಾತ್ರವನ್ನು ‘ವೆಲ್ಕಮ್'(2007) ಚಿತ್ರದಲ್ಲಿ ನಿರ್ವಹಿಸಿ ಹೊಸ ಪೀಳಿಗೆಯ ಪ್ರೇಕ್ಷಕರನ್ನೂ ನಗಿಸಿದ್ದರು.
ಅಪ್ಪಟ ರಂಗಭೂಮಿ ಕಲಾವಿದರಾಗಿ ಮರಾಠಿ ಚಿತ್ರರಂಗದ ‘ನಟ ಸಾಮ್ರಾಟ್’ (2016) ಚಿತ್ರದ ಶ್ರೇಷ್ಠ ಕಲಾಕೃತಿಯಲ್ಲಿನ ಅವರ ಅಭಿನಯವು ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದವು.
ಅಂತೆಯೇ ನಾನಾ ಪಾಟೇಕರ್ ಅವರು ಕನ್ನಡದ ‘ಯಕ್ಷ’ (2010) ಚಿತ್ರದಲ್ಲೂ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು.
ಸೈನಿಕ ಸೇವೆ:
ನಾನಾ ಪಾಟೇಕರ್ ಅವರು ಕೇವಲ ತೆರೆಯ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಶಿಸ್ತಿನ ಸಿಪಾಯಿಯಾಗಿದ್ದರು. ಅವರು ಭಾರತೀಯ ಪ್ರಾದೇಶಿಕ ಸೇನೆಯಲ್ಲಿ (Territorial Army) ಸೇವೆ ಸಲ್ಲಿಸಿದ್ದು, ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದರು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರು ಗಡಿ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸೇರಿ ಸೇವೆ ಸಲ್ಲಿಸಿದ್ದರು.
ಪ್ರಶಸ್ತಿ ಮತ್ತು ಪುರಸ್ಕಾರಗಳು:
ನಾನಾ ಪಾಟೇಕರ್ ಅವರ ಅದ್ಭುತ ನಟನಾ ಕೌಶಲ್ಯಕ್ಕಾಗಿ ಹಲವಾರು ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅಂತೆಯೇ ಭಾರತ ಸರ್ಕಾರವೂ ಚಿತ್ರರಂಗಕ್ಕೆ ನಾನಾ ನೀಡಿದ ಕೊಡುಗೆಯನ್ನು ಮನಗಂಡು 2013ರಲ್ಲಿ ‘ಪದ್ಮಶ್ರೀ’ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
‘ಪರಿಂದಾ’ (ಪೋಷಕ ನಟ), ‘ಕ್ರಾಂತಿವೀರ್’ (ಮುಖ್ಯ ನಟ), ಮತ್ತು ‘ಅಗ್ನಿ ಸಾಕ್ಷಿ’ (ಪೋಷಕ ನಟ) ಚಿತ್ರಗಳಲ್ಲಿನ ಅವರ ಅಮೋಘ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭ್ಯವಾಗಿದ್ದವು.
ಫಿಲ್ಮ್‌ಫೇರ್ ದಾಖಲೆ:
ಅತ್ಯುತ್ತಮ ನಾಯಕ ನಟ, ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ಖಳನಾಯಕ ನಟಿ ಈ ಮೂರೂ ವಿಭಾಗಗಳಲ್ಲಿ ಸೈ ಎನಿಸಿಕೊಂಡು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದ ಏಕೈಕ ನಟ ಎಂಬ ಹೆಗ್ಗಳಿಕೆ ಕೂಡ ಇವರದ್ದೇ ಆಗಿದೆ.
ಸಮಾಜ ಸೇವೆ ಮತ್ತು ಸರಳ ಜೀವನ:
ಕೋಟಿಗಟ್ಟಲೆ ಆಸ್ತಿ ಮತ್ತು ಅಪಾರ ಜನಪ್ರಿಯತೆ ಇದ್ದಾಗ್ಯೂ ನಾನಾ ಪಾಟೇಕರ್ ಅವರು ತೀರ ಸರಳ ಜೀವನವನ್ನು ನಡೆಸುತ್ತಿದ್ದರು. ಮಹಾರಾಷ್ಟ್ರದ ರೈತರ ಸರಣಿ ಆತ್ಮಹತ್ಯೆ ಮತ್ತು ಬರಗಾಲದ ಸಂದರ್ಭದಲ್ಲಿ ನೊಂದ ರೈತ ಕುಟುಂಬಗಳಿಗೆ ನೆರವಾಗಲು ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ಸೇರಿ ‘ನಾಮ್ ಫೌಂಡೇಶನ್’ (Naam Foundation) ಎಂಬ ಎನ್‌ಜಿಒ ಸಂಸ್ಥೆಯನ್ನು ಸ್ಥಾಪಿಸಿದ್ದರು. ತಮಗೆ ಬಂದ ಪ್ರಶಸ್ತಿಗಳ ಹಣ ಮತ್ತು ಚಿತ್ರಗಳ ಸಂಭಾವನೆಯ ಬಹುಭಾಗವನ್ನು (ಸುಮಾರು 90%) ಇವರು ರೈತರ ಕಲ್ಯಾಣ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿಯೇ ದಾನ ಮಾಡುತ್ತಿದ್ದರು.
ಭಾರತೀಯ ಚಿತ್ರರಂಗದ ಈ ಮಹಾನ್ ಚೇತನವು ಅಕ್ಟೋಬರ್ 8, 2026 ರಂದು ತಮ್ಮ 75ನೇ ವಯಸ್ಸಿನಲ್ಲಿ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿನಿಮಾ ರಂಗದಲ್ಲಿ ಶ್ರೇಷ್ಠ ನಟನಾಗಿ ಮತ್ತು ನಿಜ ಜೀವನದಲ್ಲಿ ಮಾನವೀಯತೆಯ ಸಾಕಾರ ಮೂರ್ತಿಯಾಗಿ ಬದುಕಿದ ನಾನಾ ಪಾಟೇಕರ್ ಅವರ ಹೆಸರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಹಚ್ಚಹಸಿರಾಗಿರುತ್ತದೆ. ಯುವ ಜನಾಂಗ ಇಂಥ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ನಡೆದು ಹಾದಿಯಲ್ಲಿ ಸಾಗುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡೋಣ. ಏನಂತೀರಿ?!











