ವಿಜಯ ದರ್ಪಣ ನ್ಯೂಸ್…..
ವೃದ್ಧೆಯ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ, ಬೆಳ್ಳಿ ವಸ್ತುಗಳ ದರೋ

ಚಿಕ್ಕಮಗಳೂರು: ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದ ಮಹಿಳೆಯನ್ನು ಚಾಕು ತೋರಿಸಿ ಬೆದರಿಸಿದ ಇಬ್ಬರು ಅಪರಿಚಿತರು, ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಜೋಡಿ ಮಾಚೇನಹಳ್ಳಿ ಅಂಚೆ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ, ದಿವಂಗತ ಕೃಷ್ಣೇಗೌಡ ಅವರ ಪತ್ನಿ ರುಕ್ಮಿಣಿ ಅವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರುಕ್ಮಿಣಿ ಅವರು ಕುರುಬರಹಳ್ಳಿ ಗ್ರಾಮದಲ್ಲಿ ಒಬ್ಬರೇ ವಾಸವಾಗಿದ್ದು, ಅವರ ಮಗ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳಿಗೂ ವಿವಾಹವಾಗಿದೆ. ಅ. 8ರಂದು ರಾತ್ರಿ ಊಟ ಮುಗಿಸಿ ಮನೆಯ ಬಾಗಿಲುಗಳನ್ನು ಹಾಕಿಕೊಂಡು ಮಲಗಿದ್ದ ಅವರು, ಅ. 9ರ ನಸುಕಿನ ಸುಮಾರು 1 ಗಂಟೆಯ ವೇಳೆಗೆ ಇಬ್ಬರು ಅಪರಿಚಿತರು ಮನೆಗೆ ನುಗ್ಗಿದ್ದರಿಂದ ಬೆಚ್ಚಿಬಿದ್ದಿದ್ದಾರೆ.
ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು, ಮಲಗಿದ್ದ ರುಕ್ಮಿಣಿ ಅವರನ್ನು ಎಬ್ಬಿಸಿ ಚಾಕು ತೋರಿಸಿ ಬೆದರಿಸಿದ್ದಾರೆ. ಮನೆಯಲ್ಲಿರುವ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹಣ ಎಲ್ಲಿವೆ ಎಂದು ಕೇಳಿದ್ದಾರೆ. ಒಬ್ಬ ಹಿಂದಿ ಭಾಷೆಯಲ್ಲಿ, ಮತ್ತೊಬ್ಬ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಚಾಕು ತೋರಿಸಿ ಬೆದರಿಸಿದ ಆರೋಪಿಗಳು, ರುಕ್ಮಿಣಿ ಅವರಿಗೆ ಕೂಗದಂತೆ ಎಚ್ಚರಿಕೆ ನೀಡಿ, ಮಲಗಿದ್ದಲ್ಲಿಯೇ ತಿರುಗಿಕೊಂಡು ಮಲಗುವಂತೆ ಸೂಚಿಸಿದ್ದಾರೆ. ಅವರ ಪಕ್ಕದಲ್ಲಿ ಒಬ್ಬ ಕುಳಿತುಕೊಂಡಿದ್ದು, ಮತ್ತೊಬ್ಬ ಗಾಡ್ರೇಜ್ ಬೀರುವಿನಲ್ಲಿದ್ದ ಆಭರಣಗಳನ್ನು ತೆಗೆದುಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ದೋಚಿದ ಚಿನ್ನಾಭರಣಗಳಲ್ಲಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ, 30 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 25 ಗ್ರಾಂ ತೂಕದ ಕೊರಳ ಚೈನ್, ಸುಮಾರು 16 ಗ್ರಾಂ ತೂಕದ ಎರಡು ಉಂಗುರಗಳು ಹಾಗೂ 10 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ ಸೇರಿವೆ. ಇವುಗಳ ಅಂದಾಜು ಮೌಲ್ಯ ₹6.65 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿದ್ದ ದೇವರ ಬೆಳ್ಳಿ ಮುಖವಾಡ, ಬೆಳ್ಳಿ ತಟ್ಟೆ, ದೀಪದ ಕಂಬಗಳು, ಕುಂಕುಮದ ಬಟ್ಟಲುಗಳು, ಕಳಸ, ಗಿಂಡಿ ಹಾಗೂ ಚಿಕ್ಕ ದೀಪಗಳು ಸೇರಿದಂತೆ ಒಟ್ಟು ಸುಮಾರು 1,010 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಆರೋಪಿಗಳು ದೋಚಿದ್ದಾರೆ ಎನ್ನಲಾಗಿದೆ. ಇವುಗಳ ಅಂದಾಜು ಮೌಲ್ಯ ₹1.51 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಯ ಹುಂಡಿಯಲ್ಲಿದ್ದ ಸುಮಾರು ₹5,000 ನಗದನ್ನೂ ಕಳವು ಮಾಡಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಮನೆಯ ಹಿಂಭಾಗದ ಬಾಗಿಲಿನ ಮರದ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಆರೋಪಿಗಳು ಒಳನುಗ್ಗಿರಬಹುದು ಎಂದು ರುಕ್ಮಿಣಿ ಅವರು ದೂರಿನಲ್ಲಿ ಶಂಕಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆಯ ಕುರಿತು ಮಗ ಕೆ.ಕೆ. ತೇಜಸ್ವಿ ಅವರಿಗೆ ಮಾಹಿತಿ ನೀಡಿದ ಬಳಿಕ, ಅವರ ಸಲಹೆಯಂತೆ ಸಂಬಂಧಿ ಕೆ.ಎಂ. ಧನಂಜಯ ಅವರೊಂದಿಗೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅ. 9ರಂದು ಮಧ್ಯಾಹ್ನ 12 ಗಂಟೆಗೆ ನೀಡಿದ ಲಿಖಿತ ದೂರನ್ನು ಸ್ವೀಕರಿಸಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನೆಯಲ್ಲಿದ್ದ ವೃದ್ಧೆಯನ್ನು ಬೆದರಿಸಿ ನಡೆಸಿರುವ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಕಳವುಗೈದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದಿನ ವಶಪಡಿಸಿಕೊಳ್ಳುವಿಕೆ ತನಿಖೆಯ ಪ್ರಮುಖ ಅಂಶಗಳಾಗಿವೆ.











