ವಿಜಯ ದರ್ಪಣ ನ್ಯೂಸ್…..
ಜಾನಪದ ಎನ್ನುವುದು ಒಂದು ಜೀವಂತ ಸಂಸ್ಕೃತಿ ಮತ್ತು ಸಮುದಾಯದ ಪ್ರತಿಬಿಂಬ : ಶ್ರೀರಂಜಿನಿ ದತ್ತಾತ್ರಿ

ಗಂಗಾವತಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಜಾನಪದ ಪ್ರಕಾರದ ಪ್ರಪ್ರಥಮ ಜಾನಪದ ಟೋಳಿಯನ್ನು ಕೊಪ್ಪಳ ಜಿಲ್ಲೆ ಗಂಗಾವತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಶೋಕ್ ರಾಯ್ಕರ್ ಅವರ ಸ್ವಗೃಹದಲ್ಲಿ ಆರಂಭಿಸಲಾಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಾನಪದ ಪ್ರಾಕಾರದ ಪ್ರಮುಖರಾದ ಶ್ರೀರಂಜಿನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಎನ್ನುವುದು ಒಂದು ಜೀವಂತ ಸಂಸ್ಕೃತಿ ಮತ್ತು ಸಮುದಾಯದ ಪ್ರತಿಬಿಂಬ, ಮಾನವನ ಇತಿಹಾಸದಷ್ಟೇ ಹಳೆಯದಾದ ಜಾನಪದವು ಯಾವುದೇ ಲಿಖಿತ ರೂಪವಿಲ್ಲದೆ, ಕೇವಲ ಬಾಯಿಂದ ಬಾಯಿಗೆ ಅಂದರೆ ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ಹರಿದುಬಂದಿರುವ ಜ್ಞಾನದ ಅಮೂಲ್ಯ ನಿಧಿಯಾಗಿದೆ ಎಂದರು.
ಇದು ಕೇವಲ ಕಲೆ ಅಥವಾ ಮನರಂಜನೆಯಲ್ಲ; ಬದಲಿಗೆ ನಮ್ಮ ಪೂರ್ವಜರ ಬದುಕು, ನಂಬಿಕೆ, ಸಂಸ್ಕಾರ, ನೋವು-ನಲಿವು ಹಾಗೂ ಶ್ರಮದ ಕಥನವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಅಭಾಸಾಪದಿಂದ ಜಾನಪದ ಪ್ರಕಾರದ ಪ್ರಾಮುಖ್ಯತೆ ಬಗ್ಗೆ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ್ ದಿಕ್ಕೂಚಿ ಭಾಷಣದ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕೃತಿಯಲ್ಲಿ ಜಾನಪದಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಗ್ರಾಮೀಣ ಜನರ ಬೆವರಿನ ಹನಿಗಳಲ್ಲಿ, ಹೊಲ-ಗದ್ದೆಗಳ ಕೆಲಸದ ನಡುವೆ, ಹಬ್ಬ-ಹರಿದಿನಗಳ ಸಡಗರದಲ್ಲಿ ಹುಟ್ಟಿಕೊಂಡ ಜಾನಪದ ಗೀತೆಗಳು, ಕಥೆಗಳು, ಒಗಟುಗಳು ಮತ್ತು ವಿವಿಧ ನೃತ್ಯ ಪ್ರಕಾರಗಳು ನಮ್ಮ ಮಣ್ಣಿನ ಗುಣವನ್ನು ಜಗತ್ತಿಗೆ ಸಾರುತ್ತವೆ ಎಂದು ಸವಿಸ್ತಾರವಾಗಿ ತಿಳಿಸಿದರು.
ಗೌರವಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯಲಕ್ಷ್ಮಿ ಗರಗಮಠ ಮಾತನಾಡಿ ಜಾನಪದಕ್ಕೆ ಯಾವುದೇ ನಿರ್ದಿಷ್ಟ ಲೇಖಕರಿಲ್ಲ. ಇದು ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ ಸೃಷ್ಟಿಯಾಗಿ, ಕಾಲದ ಓಟದಲ್ಲಿ ಮರೆಯಾಗದೆ ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿದೆ.
ಈ ಪರಂಪರೆಯನ್ನು ನಾವು ಮತ್ತಷ್ಟು ಕಾರ್ಯ ತತ್ಪರರಾಗಿ ಮುನ್ನಡೆಯೋಣ ನಿಮ್ಮೊಂದಿಗೆ ನಾವು ಎಂದು ಶುಭನುಡಿದರು.
ಜಿಲ್ಲಾ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಪ್ರಕಾಶ್ ಪಾಟೀಲರು ಜನಪದದಲ್ಲಿ ಗ್ರಾಮೀಣ ಬದುಕಿನ ಮುಗ್ಧತೆ, ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕೌಟುಂಬಿಕ ಬಾಂಧವ್ಯಗಳು ಜಾನಪದ ಸಾಹಿತ್ಯದ ಜೀವಾಳವಾಗಿವೆ.
ಕರಾವಳಿಯ ಯಕ್ಷಗಾನ, ಬಯಲಾಟ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಲಾವಣಿ ಪದಗಳು ಹೀಗೆ ಹತ್ತು ಹಲವು ಕಲಾಪ್ರಕಾರಗಳು ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿವೆ ಇಂದು ಸವಿಸ್ತಾರವಾಗಿ ಹಲವು ಹಾಡುಗಳನ್ನ ಲಾವಣಿ ತತ್ವಪದಗಳನ್ನ ಉಲ್ಲೇಖಿಸುತ್ತಾ ಈ ಮೂಲಕ ತಮ್ಮ ನಾಡಿನ ಈ ಪ್ರಾಂತ್ಯ ಸೀಮೆಯ ಆಯ್ದ ಜನಪದ ರನ್ನು ಗುರುತಿಸಿ ಗೌರವಿಸಿ ಮುನ್ನಡೆಯೋಣ ಜಾನಪದ ಪ್ರಕಾರದ ಕಾರ್ಯಕ್ಕೆ ಸಂಕಲ್ಪಿತರಾಗೋಣ ಎಂದು ಕರೆ ನೀಡಿದರು.
ರಾಜ್ಯಾಧ್ಯಕ್ಷ ಎಸ್.ಜಿ ಕೋಟಿಯವರು ಈ ವಿಷಯ ಕುರಿತು ಶುಭ ನುಡಿದು ತಾವೇ ರಚಿಸಿದ ಜನಪದ ಗೀತೆಯೊಂ ದನ್ನು ಹಾಡಿ ಎಲ್ಲರಿಗೂ ಹಾರೈಸಿದರು.
ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಶೋಕ ರಾಯ್ಕರ್ ಅವರ ಶ್ರೀಮತಿ ಕಾಂಚಿಕ ರಾಯರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿ ಅವರ ಸಂಗಡಿಗರೊಂದಿಗೆ ಚಂಡೆ ನುಡಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಟಿ. ಶ್ರೀಧರ್ ನಿರೂಪಿಸಿದರು.
ಈ ವೇಳೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಜಾನಪದ ಪ್ರಕಾರದ ಟೋಳಿ ವಿಜಯಲಕ್ಷ್ಮಿ ಗರಗಮಠ, ಗಂಗಾವತಿ ಗೌರವಾಧ್ಯಕ್ಷರಾಗಿ ಪ್ರಕಾಶ್ ಪಾಟೀಲ್ ಕೊಪ್ಪಳ ಜಿಲ್ಲಾ ತಾರಾ ಸಂತೋಷ್ ಅಧ್ಯಕ್ಷರಾಗಿ ಮೆಹರವಾಡೆ ಕಾರ್ಯದರ್ಶಿಯಾಗಿ, ವಿಜಯಲಕ್ಷ್ಮಿ ಕಲಾಲ್ ಖಜಾಂಜಿಯಾಗಿ ಜವಾಬ್ದಾರಿಗಳು ಘೋಷಣೆಯಾದವು.
ಸದಸ್ಯರಾಗಿ ಶ್ವೇತಾ ವರ್ಣೇಕರ್, ಶಾಂತಾ, ಸುಮನ, ಕಾಂಚಿಕ, ಆರಾಧ್ಯ. ಗಾಯತ್ರಿ ಪ್ರಿಯಾ, ಕುಸುಮ, ಶೃತಿ, ಸುಮಾ, ಸಾಕ್ಷಿ. ಶಿಲ್ಪ ಸೇರ್ಪಡೆಗೊಂಡರು.
ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಪ್ರಾರ್ಥನೆ ಶಾರದಾ ಸ್ತುತಿಯೊಂದಿಗೆ ಮಾಲಾ ಶ್ರೀಧರ್, ನೆರವೇರಿಸಿದರು.
ಅಶೋಕ್ ರಾಯ್ಕರ್ ಆಭಾಸಾಪ ರಾಜ್ಯ ಕಾರ್ಯಕಾರಿಣಿ ಸದಸ್ಯರು ಸರ್ವರನ್ನು ಸ್ವಾಗತಿಸಿದರು.








