--Ads--

ಆಶಾ ಕಾರ್ಯಕರ್ತೆಯರ ಕನಿಷ್ಠ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

On: October 18, 2026 12:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಆಶಾ ಕಾರ್ಯಕರ್ತೆಯರ ಕನಿಷ್ಠ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಕನಿಷ್ಠ ಗೌರವಧನವನ್ನು ₹10 ಸಾವಿರದಿಂದ ₹15 ಸಾವಿರಕ್ಕೆ ಹೆಚ್ಚಿಸಬೇಕು. ಅವರ ಸೇವೆಗೆ ತಕ್ಕ ಗೌರವ, ಆರ್ಥಿಕ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ವಿಧಾನಮಂಡಲದಲ್ಲಿ ಧ್ವನಿ ಎತ್ತಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಮತ್ತು ಕಳೆದ 25 ವರ್ಷಗಳಿಂದ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ ಬೆಳ್ಳಿ ಹಬ್ಬದ ಅಂಗವಾಗಿ ಆಚರಿಸಲಾಗುತ್ತಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಭಾಗವಾಗಿ, ಚಿಕ್ಕಮಗಳೂರಿನ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ “ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಚುನಾವಣೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹10 ಸಾವಿರ ನಿಶ್ಚಿತ ಗೌರವಧನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಮೂರೂವರೆ ವರ್ಷ ಕಳೆದರೂ ಅದು ಜಾರಿಯಾಗಿಲ್ಲ ಎಂದು ಆರೋಪಿಸಿದ ರವಿ ಅವರು, ಕನಿಷ್ಠ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವಂತೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಗೌರವಧನ ಮತ್ತು ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗುತ್ತಿರುವ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಈ ಸಂಬಂಧ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದನ್ನು ಉಲ್ಲೇಖಿಸಿದರು. ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಗೌರವಧನ ಮತ್ತು ಪ್ರೋತ್ಸಾಹಧನ ಪಾವತಿಸಲಾಗುತ್ತಿದೆ ಎಂದು ಸರ್ಕಾರ ಉತ್ತರ ನೀಡಿದೆ. ಆದರೆ, ತಾವು ಮಾತನಾಡಿಸಿದ ಆಶಾ ಕಾರ್ಯಕರ್ತೆಯರು ಹಣ ನಿಯಮಿತವಾಗಿ ಬರುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಈ ಕುರಿತು ಸರ್ಕಾರದ ಗಮನ ಸೆಳೆದು, ಪಾವತಿಯಲ್ಲಿ ಆಗುತ್ತಿರುವ ವಿಳಂಬವನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರ ಕೆಲಸದ ಹೊರೆ ಹೆಚ್ಚಾಗಿದ್ದರೂ, ಅದಕ್ಕೆ ಅನುಗುಣವಾಗಿ ಗೌರವಧನ ಮತ್ತು ಸೌಲಭ್ಯಗಳು ಹೆಚ್ಚಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕನಿಷ್ಠ ಕೂಲಿಯ ಲೆಕ್ಕಾಚಾರದಲ್ಲಿಯೂ ಮಾಸಿಕ ₹10 ಸಾವಿರಕ್ಕೂ ಹೆಚ್ಚಿನ ಮೊತ್ತ ಬರಲಿದೆ ಎಂದು ಹೇಳಿದರು. ನಿವೃತ್ತಿಯ ನಂತರದ ಜೀವನಕ್ಕೆ ಭದ್ರತೆ ಒದಗಿಸುವ ಅಗತ್ಯವನ್ನೂ ಅವರು ಪ್ರಸ್ತಾಪಿಸಿದರು.
ಕಾರ್ಯಕರ್ತೆಯರಿಗೆ ಮೊಬೈಲ್ ಬಳಕೆ, ಸಂಬಂಧಿತ ಆ್ಯಪ್‌ಗಳ ನಿರ್ವಹಣೆ ಸೇರಿದಂತೆ ತಾಂತ್ರಿಕ ಕೆಲಸಗಳಿಗೆ ಸೂಕ್ತ ತರಬೇತಿ ನೀಡಬೇಕು. ಅಗತ್ಯ ಮೊಬೈಲ್ ಸೌಲಭ್ಯ ಮತ್ತು ಕರೆನ್ಸಿ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಅವರು ಹೇಳಿದರು. ಆಶಾ ಕಾರ್ಯಕರ್ತೆಯರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ಸೌಲಭ್ಯ ಒದಗಿಸುವ ಬೇಡಿಕೆಯೂ ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾತ್ರಿ ವೇಳೆ ಕರ್ತವ್ಯ ಮುಗಿಸಿ ಮನೆಗೆ ಮರಳುವ ಕಾರ್ಯಕರ್ತೆಯರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸುರಕ್ಷಿತ, ಸ್ವಚ್ಛವಾದ ವಿಶ್ರಾಂತಿ ಕೊಠಡಿಗಳ ಅಗತ್ಯವಿದೆ ಎಂದು ತಿಳಿಸಿದ ರವಿ ಅವರು, ಈ ವಿಷಯವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು ಎಂದರು. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೂ, ಚಿಕ್ಕಮಗಳೂರಿನಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಿರುವ ಮಾರ್ಗಗಳನ್ನು ಪರಿಶೀಲಿಸುವುದಾಗಿ ಹೇಳಿದರು. ಆಶಾ ಕಾರ್ಯಕರ್ತೆಯರಿಗೆ ರೇಷನ್ ಕಾರ್ಡ್ ರದ್ದಾಗುವ ಆತಂಕವೂ ಇರಬಾರದು ಎಂಬ ಮನವಿಯನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ವಿಧಾನಮಂಡಲದಲ್ಲಿ ಪ್ರಶ್ನೆಗಳನ್ನು ಕೇಳಿ ಧ್ವನಿ ಎತ್ತುವುದಾಗಿ ಹೇಳಿದ ಅವರು, ಡಿ.ಸಿ.ಸಿ. ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲು ಇರುವ ಅವಕಾಶಗಳನ್ನೂ ಪರಿಶೀಲಿಸುವುದಾಗಿ ತಿಳಿಸಿದರು.
ನವರಾತ್ರಿ ಮತ್ತು ದೇವಿ ಆರಾಧನೆಯ ಮಹತ್ವವನ್ನು ವಿವರಿಸಿದ ರವಿ ಅವರು, ಭಾರತೀಯ ಪರಂಪರೆಯಲ್ಲಿ ಸ್ತ್ರೀಶಕ್ತಿಗೆ ವಿಶೇಷ ಸ್ಥಾನವಿದೆ ಎಂದರು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು; ಜಾತಿಭೇದಗಳನ್ನು ಮೀರಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸಿದರು. ನಿವೃತ್ತರಾದ ಹಿರಿಯ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಉಳಿದವರಿಗೂ ಗೌರವಪೂರ್ವಕವಾಗಿ ಉಡುಗೊರೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಕನಕರಾಜ ಅರಸ್, ಎಸ್.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಸೀತಾರಾಮ್ ಭರಣ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಜಿ. ಎನ್ ವಿಜಯ್ ಕುಮಾರ್, ಗ್ರಾಮಾಂತರ ಮಂಡಲ ಕಾರ್ಯದರ್ಶಿಗಳಾದ ಎಚ್. ಪಿ ರಾಜೀವ್, ಪ್ರಕಾಶ್ ಬಿ.ಎಲ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷರಾದ ಲೀಲಾ ಪರಮೇಶ್, ಸೇರಿದಂತೆ ಗ್ರಾಮಾಂತರ ಮತ್ತು ನಗರ ಮಂಡಲದ ಇನ್ನಿತರ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now