ಕೊಟ್ಟಿಗೆಹಾರದಿಂದ ಮುಂಡಾಜೆಗೆ ಎಸ್ ಸುರೇಶ್ ಕುಮಾರ್ ವಿಶೇಷ ಪಾದಯಾತ್ರೆ

ಕೊಟ್ಟಿಗೆಹಾರ : ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೊಟ್ಟಿಗೆಹಾರದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ವಿಶೇಷ ಪಾದಯಾತ್ರೆ ಕೈಗೊಂಡಿದ್ದಾರೆ.
ಚಿಕ್ಕಮಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮವಾದ ಮುಂಡಾಜೆಯಲ್ಲಿ ಸ್ಥಳೀಯ ಪರಿಸರ ಪ್ರೇಮಿ ಸಚಿನ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣಾರ್ಥ 527 ವಿವಿಧ ಜಾತಿಯ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ‘ಕಾರ್ಗಿಲ್ ಸ್ಮಾರಕ ವನ’ ನಿರ್ಮಿಸಿದ್ದಾರೆ.
ದೇಶಭಕ್ತಿಯೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಸಾರುತ್ತಿರುವ ಸಚಿನ್ ಅವರ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ಸ್ಮಾರಕ ವನಕ್ಕೆ ಭೇಟಿ ನೀಡಿ ಸಚಿನ್ ಅವರನ್ನು ಅಭಿನಂದಿಸುವುದರ ಜತೆಗೆ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲು ಪಾದಯಾತ್ರೆ ಕೈಗೊಂಡಿದ್ದಾರೆ.
30 ಕಿ.ಮೀ. ಪಾದಯಾತ್ರೆ
ಕೊಟ್ಟಿಗೆಹಾರದಿಂದ ಆರಂಭವಾಗಿರುವ ಪಾದಯಾತ್ರೆ ಪ್ರಕೃತಿ ರಮಣೀಯ ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾಗಿ ಸುಮಾರು 30 ಕಿ.ಮೀ. ದೂರ ಕ್ರಮಿಸಿ ಮುಂಡಾಜೆ ಗ್ರಾಮವನ್ನು ತಲುಪಲಿದೆ. ಪಾದಯಾತ್ರೆಯ ಮೂಲಕ ಯೋಧರ ತ್ಯಾಗವನ್ನು ಸ್ಮರಿಸುವುದರ ಜತೆಗೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಲಾಗಿದೆ.
ಸೈಕ್ಲಿಂಗ್ ವೇಳೆ ಸಿಕ್ಕ ಪರಿಚಯ
ಈ ಹಿಂದೆ ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ತೆರಳಿದ್ದ ಸಂದರ್ಭದಲ್ಲಿ ಮುಂಡಾಜೆಯಲ್ಲಿರುವ ‘ಕಾರ್ಗಿಲ್ ಸ್ಮಾರಕ ವನ’ದ ಕುರಿತು ಪರಿಚಯವಾಗಿತ್ತು. 527 ಹುತಾತ್ಮ ಯೋಧರ ನೆನಪಿಗಾಗಿ 527 ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಿರುವ ಸಚಿನ್ ಅವರ ಕಾರ್ಯವನ್ನು ಅಂದೇ ಮೆಚ್ಚಿಕೊಂಡಿದ್ದ ಅವರು, ಇದೀಗ ಪಾದಯಾತ್ರೆಯ ಮೂಲಕ ಸ್ಮಾರಕ ವನಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದಾರೆ.
ಯೋಧರ ತ್ಯಾಗವನ್ನು ಸ್ಮರಿಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡುವ ಸಚಿನ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಪಾದಯಾತ್ರೆಯಲ್ಲಿ ಸ್ಥಳೀಯರಾದ ಟಿ.ಎಂ. ಗಜೇಂದ್ರ, ಸಂಜಯ್ ಗೌಡ, ಅಭಿಲಾಷ್, ಸಾಗರ್, ವಿನಯ್ ಹಾಗೂ ಸಂದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.










