--Ads--

ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

On: November 1, 2026 5:24 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ 

ತಾಂಡವಪುರ ನವೆಂಬರ್ 1 ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಿಸಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕನ್ನಡವನ್ನು ಬೆಳೆಸಬೇಕು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ರವರು ಜನತೆಗೆ ಕರೆ ನೀಡಿದರು.

ಮೈಸೂರಿನ ಐತಿಹಾಸಿಕ ಒವೆಲ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯನವರು ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಕನ್ನಡಾಂಬೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ , ಕನ್ನಡದಲ್ಲಿ ಗುಣಮಟ್ಟದ ಡಿಜಿಟಲ್ ಪುಸ್ತಕಗಳು, ಶೈಕ್ಷಣಿಕ ವಿಡಿಯೊಗಳು, ಆನ್‌ಲೈನ್ ಪಾಠಗಳು ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ವಿಜ್ಞಾನ, ವೈದ್ಯಕೀಯ, ಕಾನೂನು ಮತ್ತು ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯು ಕನ್ನಡದಲ್ಲಿ ಸುಲಭವಾಗಿ ಲಭ್ಯವಾಗಬೇಕು. ಯುವಜನರು ಕನ್ನಡ ಭಾಷೆಯ ಮೂಲಕ ಹೊಸ ಆವಿಷ್ಕಾರ, ಸಂಶೋಧನೆ ಹಾಗೂ ಉದ್ಯಮಶೀಲತೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ನವೆಂಬರ್ 1 ಎಂದರೆ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಹಾಗೂ ಸಂತೋಷದ ದಿನವಾಗಿದೆ. ಕನ್ನಡ ನಾಡಿನ ಇತಿಹಾಸ, ಭಾಷೆಯ ಶ್ರೀಮಂತಿಕೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಸ್ಮರಿಸುವ ಈ ದಿನವು ಕೇವಲ ಹಬ್ಬವಲ್ಲ, ಕನ್ನಡದ ಏಕತೆ, ಸಮಗ್ರತೆ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸುವ ಮಹತ್ವದ ದಿನವಾಗಿದೆ ಎಂದು ಸಚಿವರು ಹೇಳಿದರು

ಕನ್ನಡ ನಾಡಿನ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು, ಭಾಷೆಯ ಗೌರವವನ್ನು ಹೆಚ್ಚಿಸುವುದು ಹಾಗೂ ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಂಪರೆ ವಿಶ್ವಮಟ್ಟದಲ್ಲಿ ಹೆಮ್ಮೆ ತರುವಂತಹದ್ದು ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಆದಿಕವಿ ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಪುರಂದರದಾಸ, ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಶಿವರಾಮ ಕಾರಂತ ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸಚಿವರು ಸ್ಮರಿಸಿದರು.

ವಚನ ಸಾಹಿತ್ಯವು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದರೆ, ದಾಸ ಸಾಹಿತ್ಯವು ಭಕ್ತಿ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದೆ. ನವೋದಯ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳು ಕನ್ನಡದ ಚಿಂತನಾಲೋಕವನ್ನು ವಿಸ್ತರಿಸಿವೆ.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವರು ತಿಳಿಸಿದರು

ಭಾಷೆಯ ಶ್ರೀಮಂತಿಕೆ ಅದರ ಇತಿಹಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ದೈನಂದಿನ ಬದುಕಿನಲ್ಲಿ ನಾವು ಕನ್ನಡವನ್ನು ಎಷ್ಟು ಪ್ರೀತಿಯಿಂದ ಬಳಸುತ್ತೇವೆ, ಮಕ್ಕಳಿಗೆ ಎಷ್ಟು ಪರಿಣಾಮಕಾರಿಯಾಗಿ ಕಲಿಸುತ್ತೇವೆ ಮತ್ತು ಕನ್ನಡ ಸಾಹಿತ್ಯ ಹಾಗೂ ಕಲೆಯನ್ನು ಎಷ್ಟು ಪ್ರೋತ್ಸಾಹಿಸುತ್ತೇವೆ ಎಂಬುದರಲ್ಲಿಯೂ ಭಾಷೆಯ ಬೆಳವಣಿಗೆ ಅಡಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕನ್ನಡದ ಮೇಲಿನ ಅಭಿಮಾನ ನಮ್ಮ ದೈನಂದಿನ ಬದುಕಿನಲ್ಲಿರಲಿ ಮನೆಯಲ್ಲಿಯೇ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಓದುವುದು ಹಾಗೂ ಕನ್ನಡ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಇತರ ಭಾಷೆಗಳನ್ನು ಕಲಿಯುವುದರಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಆದರೆ ಅದಕ್ಕಾಗಿ ಮಾತೃಭಾಷೆಯನ್ನು ಕಡೆಗಣಿಸುವ ಅಗತ್ಯವಿಲ್ಲ. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳಿಗೂ ಗೌರವ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ವೈಯಕ್ತಿಕವಾಗಿ ನಾನು ವೈದ್ಯಕೀಯ ವ್ಯಾಸಂಗ ಮಾಡಿದ್ದೇನೆ. ವೃತ್ತಿಯಲ್ಲಿ ವೈದ್ಯನಾಗಿದ್ದರೂ ಕನ್ನಡ ಭಾಷೆ ನನಗೆ ಅತ್ಯಂತ ಅಚ್ಚುಮೆಚ್ಚು. ಕನ್ನಡದಲ್ಲಿ ಮಾತನಾಡುವ ವಿಚಾರದಲ್ಲಿ ನಮ್ಮ ತಂದೆಯವರಾದ ಶ್ರೀ ಸಿದ್ದರಾಮಯ್ಯ ಅವರು ನನಗೆ ಸ್ಫೂರ್ತಿ. ಮನೆಯಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಕನ್ನಡದಲ್ಲಿಯೇ ಮಾತನಾಡಲು ಆದ್ಯತೆ ನೀಡುತ್ತೇನೆ. ಕನ್ನಡ ಬಳಸುವುದು ನನಗೆ ಹೆಮ್ಮೆ ಮತ್ತು ಸಂತೋಷದ ಸಂಗತಿ. ನಾವು ಯಾವುದೇ ಉದ್ಯೋಗದಲ್ಲಿದ್ದರೂ, ಎಲ್ಲೇ ಇದ್ದರೂ ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು ಎಂದು ತಿಳಿಸಿದರು.

*ಜನನ-ಮರಣ ಪ್ರಮಾಣಪತ್ರ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭ*ಇದೆ ವೇಳೆ
ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸಂಬಂಧ ಮೈಸೂರು ಮಹಾನಗರ ಪಾಲಿಕೆಯು ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ನಾಗರಿಕರು ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕ್ರಮಗಳು ಮಹತ್ವದ್ದಾಗಿವೆ ಎಂದು ಸಚಿವರು ಹೇಳಿದರು

*ಇ-ಖಾತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ*
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೇವಾ ವಿಶೇಷ ಇ-ಖಾತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ ಕೇವಲ 175 ರೂಪಾಯಿ ಶುಲ್ಕದಲ್ಲಿ 72 ಗಂಟೆಗಳೊಳಗೆ 590ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇ-ಖಾತಾ ದಾಖಲೆಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 78 ಸಾವಿರ ‘ಎ’ ಮತ್ತು ‘ಬಿ’ ಖಾತಾಗಳನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 210 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಅರ್ಹ ಆಸ್ತಿ ಮಾಲೀಕರಿಗೆ ಇ-ಖಾತಾ ಸೌಲಭ್ಯ ತಲುಪಿಸುವುದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಗರ ಪಾಲಿಕೆಯ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಅಭಿಯಾನವನ್ನು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೇವೆಗಳು ಸಕಾಲದಲ್ಲಿ ದೊರೆಯುವಂತೆ ಮಾಡುವುದೇ ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

*ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ*
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾಷೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಸಿಎನ್ ಮಂಜೇಗೌಡ ರಘು ಕೌಟಿಲ್ಯ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ರಾಜ್ಯಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಕನ್ನಡ ಚಳುವಳಿ ಹೋರಾಟಗಾರ ನಂಜುಂಡಸ್ವಾಮಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಶ್ರೀಮತಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಎಂ.ಕೆ. ಸವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಹಿರಿಯರು ಮುಖಂಡರು ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದರು

WhatsApp

Join Now

Telegram

Join Now

Instagram

Join Now