--Ads--

ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ: ನವೆಂಬರ್ 1ರಂದು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಸಚಿವ ಚಲುವರಾಯಸ್ವಾಮಿ ಕರೆ

On: November 1, 2026 5:59 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕನ್ನಡ ಕೇವಲ ಭಾಷೆಯಲ್ಲ , ಅದು ನಮ್ಮ ಅಸ್ಮಿತೆ : ನವೆಂಬರ್ 1ರಂದು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸೋಣ  ಸಚಿವ ಚಲುವರಾಯಸ್ವಾಮಿ ಕರೆ

ಮಂಡ್ಯ ಜಿಲ್ಲೆಯಲ್ಲಿ ₹1,793 ಕೋಟಿ ವೆಚ್ಚದ 57 ಕಾಮಗಾರಿಗಳಿಗೆ ಚಾಲನೆ, 35 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮಂಡ್ಯ, ನ.1: ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಅಸ್ಮಿತೆ, ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೂಲ. ಕನ್ನಡ ಸಾಹಿತ್ಯಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾಷಣದ ಪ್ರಮುಖಾಂಶಗಳು:

ಬಂಧುಗಳೇ, ನಾಡು ನುಡಿಯ ಬಗೆಗಿನ ಪ್ರೀತಿ, ಅಭಿಮಾನವನ್ನು ಈ ದಿನವು ನಮಗೆ ನೆನಪಿಸುತ್ತದೆ. ನಮ್ಮ ಕನ್ನಡನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಈ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ.

1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ಡಿ.ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ₹1,793 ಕೋಟಿ:

ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ. 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಅಕ್ಟೋಬರ್ 31ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು ₹1,793 ಕೋಟಿ ವೆಚ್ಚದ 57 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಅದರಲ್ಲಿ ಕಾವೇರಿ ನೀರಾವರಿ ನಿಗಮ, ಹೇಮಾವತಿ ಎಡದಂಡೆ ನಾಲಾ ವಿಭಾಗಗಳಿಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವುದು, ರಸ್ತೆ ದುರಸ್ತಿ, ವಿತರಣಾ ನಾಲೆ ಮತ್ತು ಕಾಲುವೆ ದುರಸ್ತಿ ಇತ್ಯಾದಿ ಉದ್ದೇಶಗಳಿಗಾಗಿ ರೂ.806 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಮಂಡ್ಯ, ಶ್ರೀರಂಗಪಟ್ಟಣ ವ್ಯಾಪ್ತಿಯ ಕಾವೇರಿ, ಕೆರಗೋಡು, ಶಿಂಷಾ, ಲೋಕಸರ ಶಾಖಾ ನಾಲೆ ಹಾಗೂ ಮದ್ದೂರು ಶಾಖಾ ನಾಲೆಗಳ ಅಭಿವೃದ್ಧಿಗಾಗಿ ರೂ.224 ಕೋಟಿ ಮತ್ತು ಮಂಡ್ಯದ ಮೈಶುಗರ್ ಕಂಪನಿಯ ಆಧುನೀಕರಣ ಉದ್ದೇಶಕ್ಕೆ ಬಾಯ್ಲಿಂಗ್ ಹೌಸ್ ಆಧುನೀಕರಣಕ್ಕೆ ರೂ.60.00 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಮಂಡ್ಯದಲ್ಲಿ ಮೊದಲ ಬಾರಿಗೆ “ಮುಗುಳ್ನಗೆ ಸಿಂಚನ”:

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ “ಮುಗುಳ್ನಗೆ ಸಿಂಚನ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ದಂತ ಚಿಕಿತ್ಸೆ ಸೌಲಭ್ಯವನ್ನು ನೀಡಲಾಗುತ್ತಿದೆ.

ಯುವಜನರಿಗೆ 283 ಭಾರತ್ ಜೋಡೋ ಕೇಂದ್ರ:

ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರದ ವಾರ್ಡ್‌ಗಳಲ್ಲಿ ಯುವ ಜನರನ್ನು ಸಬಲೀಕರಣಗೊಳಿಸಿ ಸಮುದಾಯ ಅಭಿವೃದ್ಧಿ ಮತ್ತು ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 283 “ಭಾರತ್ ಜೋಡೋ” ಯುವ ಸಂಪರ್ಕಗಳನ್ನು ಸ್ಥಾಪಿಸಲಾಗುವುದು. ಈವರೆಗೆ 40,000ಕ್ಕೂ ಹೆಚ್ಚು ಮಂದಿ ಯುವಕರು ನೋಂದಣಿ ಮಾಡಿಕೊಂಡಿರುವುದು ಸಂತಸ ತಂದಿದೆ.

30 ಸಾಧಕರಿಗೆ ಜಿಲ್ಲಾ ಪ್ರಶಸ್ತಿ:

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ರಂಗಭೂಮಿ, ಆಡಳಿತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಈ ವರ್ಷ 35 ಜನ ಸಾಧಕರಿಗೆ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಲಾಗುತ್ತಿದ್ದು, ಅವರೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ಕೊನೆಯಲ್ಲಿ, ನಮ್ಮ ಮಕ್ಕಳು ಕನ್ನಡದಲ್ಲಿ ಕನಸು ಕಾಣಬೇಕು, ಕನ್ನಡದಲ್ಲಿ ಚಿಂತಿಸಬೇಕು. ಜಗತ್ತಿನ ಜ್ಞಾನವನ್ನು ಕನ್ನಡದ ಮೂಲಕವೂ ಅರಿಯುವ ಅವಕಾಶ ಪಡೆಯಬೇಕು. ಇತರೆ ಭಾಷೆಗಳನ್ನು ಕಲಿಯುವುದಕ್ಕೆ ನಾವು ವಿರೋಧಿಗಳಲ್ಲ. ಆದರೆ ಇತರೆ ಭಾಷೆಗಳನ್ನು ಕಲಿಯುವಾಗ ನಮ್ಮ ಮಾತೃಭಾಷೆಯನ್ನು ಮರೆಯಬಾರದು. ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರು ಇರುವುದು ಮಂಡ್ಯ ಜಿಲ್ಲೆಯಲ್ಲಿ. ಆದ್ದರಿಂದ ಕನ್ನಡವನ್ನು ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

WhatsApp

Join Now

Telegram

Join Now

Instagram

Join Now