ವಿಜಯ ದರ್ಪಣ ನ್ಯೂಸ್…
ಚಿಕ್ಕನಹಳ್ಳಿ ಗ್ರಾಮದ ಲೆಜೆಂಡ್ಸ್ ಇ ಟೆಕ್ನೋ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಲೆಜೆಂಡ್ಸ್ ಇ ಟೆಕ್ನೋ ಶಾಲೆಯಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಯರೇಗೌಡ ಅವರು ಮಾತನಾಡಿ, ಕನ್ನಡ ಭಾಷೆ ನಮ್ಮ ನಾಡಿನ ಹೆಮ್ಮೆ ಹಾಗೂ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನಕ್ಕೆ ಪ್ರತೀಕವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಮಾತನಾಡುವುದರ ಜೊತೆಗೆ ಕನ್ನಡ ಸಾಹಿತ್ಯ, ಇತಿಹಾಸ ಮತ್ತು ನಾಡಿನ ಮಹನೀಯರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಶಾಲೆಗಳು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಇತಿಹಾಸ, ಕನ್ನಡ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ತ್ಯಾಗ ಹಾಗೂ ಕನ್ನಡ ಭಾಷೆಯ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಹಾಗೂ ಅಭಿಮಾನ ಮೂಡಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿದಿನವೂ ಕನ್ನಡ ಭಾಷೆಯನ್ನು ಪ್ರೀತಿಸುವ, ಗೌರವಿಸುವ ಮತ್ತು ಅದರ ಬೆಳವಣಿಗೆಗೆ ಕೈಜೋಡಿಸುವ ಸಂಕಲ್ಪವಾಗಬೇಕು ಎಂಬ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಕಲಾವತಿ ಯರೇಗೌಡ ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










