ವಿಜಯ ದರ್ಪಣ ನ್ಯೂಸ್…….
ಬೈಚಾಪುರ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಧನಸಹಾಯ

ದೇವನಹಳ್ಳಿ: ತಾಲೂಕಿನ ಬೈಚಾಪುರ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ಹಾಗೂ ದ್ರೌಪದಮ್ಮ ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ, ಕಲ್ಯಾಣಿ ಹಾಗೂ ಏಳು ಸುತ್ತಿನ ಕೋಟೆ ಉದ್ಘಾಟನೆ ಅಂಗವಾಗಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ಎಲ್. ಎನ್. ನಾರಾಯಣಸ್ವಾಮಿ ಅವರು ದೇವಾಲಯದ ಪದಾಧಿಕಾರಿಗಳಿಗೆ ವೈಯಕ್ತಿಕ ಧನಸಹಾಯ ಹಸ್ತಾಂತರಿಸಿದರು.
ಧನಸಹಾಯ ನೀಡಿ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, “ಬೈಚಾಪುರ ಗ್ರಾಮಸ್ಥರು ದೇವಾಲಯದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಕಾರಣಾಂತರಗಳಿಂದ ತಕ್ಷಣ ಸ್ಪಂದಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಅವರ ಬೇಡಿಕೆಗೆ ಸ್ಪಂದಿಸಿ, ದೇವಾಲಯದ ಜೀರ್ಣೋದ್ಧಾರಕ್ಕೆ ನನ್ನ ಕೈಲಾದ ಧನಸಹಾಯ ನೀಡುತ್ತಿರುವುದು ತೃಪ್ತಿ ತಂದಿದೆ” ಎಂದರು.
ದೇವಾಲಯದ ಅಧ್ಯಕ್ಷ ಮುನಿಯಪ್ಪ ಮಾತನಾಡಿ, “ನಮ್ಮ ದೇವಾಲಯದ ಕುಂಭಾಭಿಷೇಕ, ಕಲ್ಯಾಣಿ ಹಾಗೂ ಏಳು ಸುತ್ತಿನ ಕೋಟೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ನಿಕಟಪೂರ್ವ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಸ್ಪಂದಿಸಿದ್ದಾರೆ.
ಪ್ರಸ್ತುತ ಶಾಸಕರಲ್ಲದಿದ್ದರೂ ಸಹ ನಮ್ಮ ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬರುತ್ತಿರುವುದು ಸಂತೋಷ ತಂದಿದೆ” ಎಂದು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಶ್ರೀ ಎಸ್.ಎಲ್.ಎನ್. ಮುನಿರಾಜು, ದೊಡ್ಡಸಣ್ಣೆಯ ಮುನಿರಾಜು, ಜಿ. ಕೆ. ಹನುಮಪ್ಪ, ಚಂದ್ರೇಗೌಡ, ಹಾಗೂ ದೇವಾಲಯದ ಪದಾಧಿಕಾರಿಗಳಾದ ಮುನಿಯಪ್ಪ, ಶ್ರೀಕಾಂತ್, ಗಜೇಂದ್ರ, ಪ್ರಭು, ವೀರಪ್ಪ, ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.










