ವಿಜಯ ದರ್ಪಣ ನ್ಯೂಸ್……
ಬಾಲ ಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಎಲ್ಲರೂ ಸಹಕರಿಸಬೇಕು : ತಹಶಿಲ್ದಾರ್ ಎನ್.ಗಗನಸಿಂಧು

ಶಿಡ್ಲಘಟ್ಟ : ಬಡತನ, ಅನಕ್ಷರತೆ ಮತ್ತು ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಕೆಲವು ಕುಟುಂಬಗಳು ಅಪ್ರಾಪ್ತ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸಕ್ಕೆ ಕಳುಹಿಸುತ್ತಿವೆ ಇದರಿಂದ ಕುಟುಂಬಕ್ಕೆ ಸ್ವಲ್ಪ ಕಾಲ ಆರ್ಥಿಕ ಬೆಂಬಲ ಸಿಗಬಹುದು, ಆದರೆ ಮಕ್ಕಳ ಭವಿಷ್ಯಕ್ಕೆ ಇದು ಹಾನಿಕರ ಎಂದು ತಹಶೀಲ್ದಾರ್ ಎನ್.ಗಗನಸಿಂಧು ಎಚ್ಚರಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ–1986ರ ಅಡಿಯಲ್ಲಿ ರಚಿತವಾದ ತಾಲ್ಲೂಕು ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೋಷಕರು, ಸಾರ್ವಜನಿಕರು ಮತ್ತು ಕಾರ್ಖಾನೆ ಮಾಲೀಕರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕೆಲಸ ಮಾಡುವ ಸಂಘ-ಸಂಸ್ಥೆಗಳು ಈ ಜಾಗೃತಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಹೇಳಿದರು.
ಬಾಲಕಾರ್ಮಿಕ ಪದ್ಧತಿ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಹಾಗು ಕಾನೂನನ್ನು ಸರಿಯಾಗಿ ಜಾರಿಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರೇಡ್–2 ತಹಶೀಲ್ದಾರ್ ಕೆ.ಎನ್. ಮಂಜುನಾಥ್, ಕಾರ್ಮಿಕ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.










