ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಆಗ್ರಹ 

ವಿಜಯ ದರ್ಪಣ ನ್ಯೂಸ್…

ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಲು ಆಗ್ರಹ

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆಯಿಂದ
ವಿಜಯಪುರದ ಕಡೆಗೆ ಸಾಗುವ ಪ್ರಮುಖ ಹೆದ್ದಾರಿಯು ಭದ್ರನಕೆರೆಯ ಕಟ್ಡೆಯ ಮೇಲೆ ಹೋಗುತ್ತದೆ ಈ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ಕಬ್ಬಿಣದ ಸರಳಿನಿಂದ ತಡೆಗೋಡೆ ನಿರ್ಮಿಸಲಾಗಿದ್ದು, ಮತ್ತೊಂದು ಬದಿ ಸರಳಿನ ತಡೆಗೋಡೆ ಇಲ್ಲದೇ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ವಾಹನ ಸವಾರರಲ್ಲಿ ಭಯದ ವಾತಾವರಣ ಮೂಡಿಸಿದೆ. ಸಂಬಂದಿಸಿದ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಶೀಘ್ರವಾಗಿ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರತಿದಿನ ಈ ರಸ್ತೆಯಲ್ಲಿ ಶಾಲಾ, ಕಾಲೇಜುಗಳ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತಿವೆ ಕೆರೆಯ ಎತ್ತರದ ಏರಿಯಿಂದ ಕೆಳಗೆ ಸುಮಾರು 25 ಅಡಿಗಳಷ್ಟು ಆಳವಿದ್ದು, ತಡೆಗೋಡೆ ಇಲ್ಲದ ಭಾಗದಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಆಯತಪ್ಪಿ ರಸ್ತೆಯಿಂದ ಉರುಳುವ ಅಪಾಯವಿದೆ ಈ ಮಾರ್ಗದಲ್ಲಿ ಈಗಾಗಲೇ ಲಾರಿಗಳು ರಸ್ತೆಯಿಂದ ಕೆಳಕ್ಕೆ ಉರುಳಿದ ಘಟನೆಗಳು ನಡೆದಿವೆ.

ರಾತ್ರಿ ವೇಳೆಯಲ್ಲಿ ರೈತರು ತಮ್ಮ ತೋಟಗಳಿಂದ ತರಕಾರಿ ಹಾಗೂ ಸೊಪ್ಪು ಸಾಗಿಸಲು ಈ ರಸ್ತೆಯನ್ನು ಬಳಸುತ್ತಿದ್ದು, ರಸ್ತೆಯ ತಿರುವುಗಳು ಸ್ಪಷ್ಟವಾಗಿ ಕಾಣದ ಕಾರಣದಿಂದ ಅಪಘಾತದ ಸಾಧ್ಯತೆ ಹೆಚ್ಚಾಗಿದೆ ಕೆಲವೊಂದು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಸೂಸುವ ದೀಪಗಳಿಲ್ಲದ ಕಾರಣ, ರಸ್ತೆಯ ಪಕ್ಕಗಳು ಸ್ಪಷ್ಟವಾಗುವುದಿಲ್ಲ ತಡೆಗೋಡೆ ಇಲ್ಲದ ಭಾಗದಲ್ಲಿ ವಾಹನಗಳನ್ನು ಎಷ್ಟು ದೂರ ಚಲಾಯಿಸಬಹುದು ಎಂಬುದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಲಕರಾದ ಅಂಬರೀಶ್ ,ನಾಗಾರ್ಜುನ, ಅವರು ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿ, ಜಂಗಮಕೋಟೆಯ ಕಡೆಯಿಂದ ಆರಂಭಿಸಿ ವೆಂಕಟಾಪುರದ ಮೋರಿಯವರೆಗೂ ತಡೆಗೋಡೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಮಯಕ್ಕೆ ಮುನ್ನ ತಡೆಗೋಡೆ ನಿರ್ಮಿಸದಿದ್ದರೆ ಮಾನವನ ಪ್ರಾಣಗಳ ಜತೆ ಚೆಲ್ಲಾಟವಾಣಿ ದುರ್ಘಟನೆಗಳಿಗೆ ಕಾರಣವಾಗುವುದರಿಂದ ಎಚ್ಚರಿಕೆಯಿಂದ ವಾಹನ ಸವಾರರು ಓಡಾಡಬೇಕು ಎಂದರು.