ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

ವಿಜಯ ದರ್ಪಣ ನ್ಯೂಸ್…

ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ.ಡಿ.10:

ಭೂಕಂಪ, ಪ್ರವಾಹ, ಸುನಾಮಿ, ಅಪಘಾತ, ಕಟ್ಟಡ ಕುಸಿತ, ನೆರೆ, ಅತೀವೃಷ್ಟಿ, ಅಗ್ನಿ ಅವಘಡ, ಅನಿಲ ಸೋರಿಕೆ ಸೇರಿದಂತೆ ಇತರೆ ವಿಪತ್ತುಗಳು ಸಂಭವಿಸಿದಾಗ ಅವುಗಳನ್ನು ಎದುರಿಸುವುದು ಹೇಗೆ, ಮುಂಜಾಗ್ರತ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ಹೇಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂಬುದ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾದಳ(ಎನ್.ಡಿ.ಆರ್.ಎಫ್)10ನೇ ಬೆಟಾಲಿಯನ್ ಟೀಮ್ ರವರು ಹೊಸಕೋಟೆಯಲ್ಲಿ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ ಆಯೋಜಿಸಿತ್ತು.

ಹೊಸಕೋಟೆ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ವಿಪತ್ತು ನಿರ್ವಹಣಾ ದಳದ ಇನ್ಸ್ಪೆಕ್ಟರ್ ರಾಮಬಾಜ್ ಮಾತನಾಡಿ ವಿಪತ್ತುಗಳು ಯಾವ ಸಂದರ್ಭ, ಸಮಯದಲ್ಲಿ ಬೇಕಾದರೂ ಸಂಭವಿಸಬಹುದು. ಹಲವಾರು ವಿಪತ್ತುಗಳನ್ನು ಎದುರಿಸಲು ನಮ್ಮಲ್ಲಿ ತಾಳ್ಮೆ ಸಹನೆ ಅಗತ್ಯ. ಇದು ಸಾಹಸದ ಕೆಲಸವಾಗಿದೆ ಅತ್ಯಂತ ಚಾಣಾಕ್ಷತೆಯಿಂದ ವಿಪತ್ತು ನಿರ್ವಹಣೆ ಮಾಡಬೇಕು. ವಿಪತ್ತಿನಲ್ಲಿ ಸಿಲುಕಿ ಅದೆಷ್ಟೋ ಜನರ ಜೀವ ಹೋಗುವ ಸನ್ನಿವೇಶ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರು ವಿಪತ್ತು ನಿರ್ವಹಣೆಗೆ ಧುಮುಕುವ ಮೂಲಕ ಸಾರ್ವಜನಿಕರ ಪ್ರಾಣ ಕಾಪಾಡುವುದು ಮಾನವೀಯ ಕರ್ತವ್ಯವಾಗಿದೆ. ವಿಪತ್ತು ಸಂದರ್ಭದಲ್ಲಿ ಅಗತ್ಯ ಮಾಹಿತಿ ಕಲೆ ಹಾಕುವ ಮೂಲಕ, ವಿಪತ್ತು ನಿರ್ವಹಣೆ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಹೆಡ್ ಕಾನ್‌ಸ್ಟೇಬಲ್ ವಜ್ರ ಚೇತನ್ ವಿಪತ್ತು ನಿರ್ವಹಣೆಯ ಹಲವು ಮಜಲುಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿಪತ್ತು ನಿರ್ವಹಣೆಯಲ್ಲಿ ನಾವು ವಹಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿದರು.

ಕಾರ್ಯಕರ್ಮದಲ್ಲಿ ಉಪತಹಶೀಲ್ದಾರ್ ಹೊಸಕೋಟೆ, ಗ್ರಾಪಂ ಪಿಡಿಒಗಳು, ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ, ಎಸ್.ಟಿ.ಎಂ.ಸಿ ಸದಸ್ಯರು ಇತರೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

&&&&&&&&&&&&&&&&&&&&&&&&&&&&

ಪತ್ರಿಕೋದ್ಯಮ ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿ.10:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2025-2026ನೇ ಸಾಲಿಗೆ 12 ತಿಂಗಳ ಅಪ್ರೆಂಟಿಶಿಪ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿ ಆಗಿರಬೇಕು. ಕಂಪ್ಯೂಟರ್ ಜ್ಞಾನವಿರುವ ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರಬೇಕು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ತಲಾ ಒಬ್ಬರಂತೆ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯಾನ ರೂ.15000/- ಗಳ ಸ್ಟೇಫಂಡ್ ನೀಡಲಾಗುವುದು.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 35 ವರ್ಷದೊಳಗಿರಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿಯೊಂದಿಗೆ ಎಸ್.ಎಸ್. ಎಲ್.ಸಿ ಅಂಕಪಟ್ಟಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಜಾತಿ, ಆದಾಯ, ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ತ್ರಿ-ಪ್ರತಿಯಲ್ಲಿ ಡಿಸೆಂಬರ್ 25 ರೊಳಗೆ ಉಪನಿರ್ದೆಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಂ.17, ಭಗವಾನ್ ಮಾಹಾವೀರ ರಸ್ತೆ, ವಾರ್ತಾ ಸೌಧ, 2ನೇ ಮಹಡಿ, ಇನ್ಫೆಂಟ್ರಿ ರಸ್ತೆ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸುವುದು.

ಆಸಕ್ತರು ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯ ಇ-ಮೇಲ್ ruralinformation@gmail.com, ಅಥವಾ ಮೊ.ಸಂ 9886636130 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೆಶಕರಾದ ಅಶೋಕ್ ಕುಮಾರ್ ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.