ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 498 ಪ್ರಕರಣಗಳು ಇತ್ಯರ್ಥ
ವಿಜಯ ದರ್ಪಣ ನ್ಯೂಸ್….
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 498 ಪ್ರಕರಣಗಳು ಇತ್ಯರ್ಥ

ಶಿಡ್ಲಘಟ್ಟ : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಗರದ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 498 ಪ್ರಕರಣಗಳು ಇತ್ಯರ್ಥಗೊಂಡು 3 ಕೋಟಿ 8 ಲಕ್ಷ 94 ಸಾವಿರ 753 ರೂ ಪಾವತಿಸಲಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು,ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ವಿವಿಧ ರೀತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.
ಸಂಧಾನಕಾರರಾಗಿ ವಕೀಲರಾದ ಬಿ.ಎನ್.ವೇಣುಗೋಪಾಲ್ ಮತ್ತು ಸಿ.ಲಕ್ಷ್ಮಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.
&&&&&&&&&&&&&&&&&&&&&&&&&&&&
ಜಿಲ್ಲೆಯಲ್ಲಿ ಡಿಸೆಂಬರ್ 12 ರದ ಹೆಲ್ಮೆಟ್ ಕಡ್ಡಾಯ

ಶಿಡ್ಲಘಟ್ಟ : ಜಿಲ್ಲೆಯಲ್ಲಿ ಹೆಲ್ಕೆಟ್ ಕಡ್ಡಾಯ ನಿಯಮ ಡಿಸೆಂಬರ್ 12 ರಿಂದ ಕಟ್ಟುನಿಟ್ಟಾಗಿ ಜಾರಿಯಾಗಿದ್ದು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ದಿನವೇ ಬಿಗಿ ಕ್ರಮಗಳು ಕಂಡುಬಂದವು.
ಬೆಳಿಗ್ಗೆಯಿಂದಲೇ ನಗರದಲ್ಲಿ ಜಾಗೃತಿ ಅಭಿಯಾನ ಮತ್ತು ರ್ಯಾಲಿ ನಡೆಸಿದ ಪೊಲೀಸ್ ಸಿಬ್ಬಂದಿ, ಸ್ವತಃ ಹೆಲ್ಮೆಟ್ ಧರಿಸಿ ಸಾರ್ವಜನಿಕರಿಗೆ ಮಾದರಿ ಪ್ರದರ್ಶನ ನೀಡಿದರು.
ಆದರೂ ಕೂಡ ಮೊದಲ ದಿನ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ನಿಯಮ ಪಾಲನೆ ಮಾಡಿದರೆ, ಹಲವರು ನಿರ್ಲಕ್ಷ್ಯ ವಹಿಸಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ಆರಂಭಿಕ ಅವಧಿಯಲ್ಲಿ ಪೊಲೀಸರು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದರು, ಆದರೆ ಸಂಜೆ 5 ಗಂಟೆಯ ನಂತರ, ನಗರ ಪೊಲೀಸ್ ಠಾಣೆ ಎದುರು ವಿಶೇಷ ತಪಾಸಣಾ ನಿಗಾ ಹಮ್ಮಿಕೊಳ್ಳಲಾಯಿತು, ಈ ವೇಳೆ ಹೆಲ್ಮೆಟ್ ಇಲ್ಲದೇ ಬಂದ ಸವಾರರಿಗೆ ಕಾನೂನುನ್ವಯ ದಂಡ ವಿಧಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಟ್ಟುನಿಟ್ಟಿನ ತಪಾಸಣಾ ಸಮಯದಲ್ಲಿ ಹೆಲ್ಮೆಟ್ ಧರಿಸದೇ ಬೈಕ್ನಲ್ಲಿ ಬರುತ್ತಿದ್ದ ಪೊಲೀಸ್ ಪೇದೆ ಒಬ್ಬರನ್ನು ನೋಡಿದ ಎಸ್.ಐ.ವೇಣುಗೋಪಾಲ್ ಅವರು ತಕ್ಷಣವೇ ವಾಹನವನ್ನು ತಡೆದರು,ನಿಯಮ ಎಲ್ಲರಿಗೂ ಒಂದೇ ಎಂಬ ಸ್ಪಷ್ಟ ಸಂದೇಶದೊಂದಿಗೆ ಅವರು ಅದೇ ಪೊಲೀಸ್ ಪೇದೆಗೆ ಮೊದಲ ದಂಡವನ್ನು ವಿಧಿಸಿದರು.
ಪೊಲೀಸರೂ ನಿಯಮ ಪಾಲಿಸಬೇಕು ಎಂದು ಸಾರ್ವಜನಿಕರಿಗೆ ನೀಡಿದ ಈ ಸಂದೇಶ ಸ್ಥಳೀಯರಲ್ಲಿ ನಿಯಮ ಪಾಲನೆಯ ಬಗ್ಗೆ ಮತ್ತಷ್ಟು ಎಚ್ಚರಿಕೆ ಮೂಡಿಸಿತು ಮತ್ತು ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮೂಡಿಸಿದೆ.
ಜಿಲ್ಲಾ ಮಟ್ಟದಲ್ಲಿ ಹೆಲ್ಕೆಟ್ ಕಡ್ಡಾಯ ಜಾರಿಯ ಹಿನ್ನೆಲೆ, ಶಿಡ್ಲಘಟ್ಟದಲ್ಲಿ ಮೊದಲ ದಿನದಲ್ಲೇ ಅನೇಕ ಸವಾರರಿಗೆ ದಂಡ ವಿಧಿಸಲಾಯಿತು.
ಸ್ಥಳದಲ್ಲೇ ದಂಡದ ರಸೀದಿ ನೀಡುತ್ತಾ, ಹೆಲ್ಮೆಟ್ ಧರಿಸುವಿಕೆಯ ಅಗತ್ಯತೆ ಮತ್ತು ಜೀವ ರಕ್ಷಣೆಯ ಮಹತ್ವದ ಕುರಿತು ವಾಹನ ಸವಾರರಿಗೆ ಪೊಲೀಸರಿಂದ ಅರಿವು ಮೂಡಿಸಲಾಯಿತು.
ಈ ಹಿಂದಿನಿಂದಲೂ ಇದ್ದ ನಾಮಕಾವಸ್ತೆ ನಿಯಮಕ್ಕೆ ಬದಲಾಗಿ, ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದ್ದು, ನಗರದಲ್ಲಿ ಸಂಚರಿಸುವ ಬೈಕ್ ಸವಾರರು ಮಾತ್ರವಲ್ಲದೆ ನಿತ್ಯ ರೇಷ್ಮೆ ಗೂಡು ಮಾರುಕಟ್ಟೆಗೆ ಬೈಕ್ನಲ್ಲಿ ಬರುವ ರೈತರು ಸಹ ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು ಎಂದು ಸೂಚಿಸಲಾಗಿದೆ. ಹೆಲ್ಮೆಟ್ ಇಲ್ಲದೆ ಸಂಚರಿಸುವ ಬೈಕ್ ಸವಾರರ ಬಗ್ಗೆ ತೀವ್ರ ನಿಗಾ ಇಟ್ಟು ದಂಡ ವಿಧಿಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
