--Ads--

ಬೆಂಗಳೂರು ಗ್ರಾ.ಜಿಲ್ಲೆಗೆ ಕಾವೇರಿ ನೀರು ಹಾಗೂ ಮೆಟ್ರೋಗೆ ಆದ್ಯತೆ: ಡಿಸಿಎಂ, ಡಿ.ಕೆ ಶಿವಕುಮಾರ್ 

On: December 13, 2025 5:30 PM
Follow ಮಾಡಿ
--Ads--

Whatsapp Channel

Join Now

Telegram Group

Join Now

*ವಿಜಯ ದರ್ಪಣ ನ್ಯೂಸ್….

ಬಯಪ್ಪ ನೂತನ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ಬೆಂಗಳೂರು ಗ್ರಾ.ಜಿಲ್ಲೆಗೆ ಕಾವೇರಿ ನೀರು ಹಾಗೂ ಮೆಟ್ರೋಗೆ ಆದ್ಯತೆ: ಡಿಸಿಎಂ ,ಡಿ.ಕೆ ಶಿವಕುಮಾರ್

ದೇವನಹಳ್ಳಿ ಬೆಂಗಳೂರು ಗ್ರಾ.ಜಿಲ್ಲೆ, ಡಿ.13 :

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

ದೇವನಹಳ್ಳಿ ಟೌನ್ ನ ಸೂಲಿಬೆಲೆ ರಸ್ತೆಯ ಅಂಬಿಕಾ ಲೇಔಟ್ ನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವತಿಯಿಂದ 6.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(ಬಯಪ)ದ ನೂತನ ಕಛೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ, ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎಚ್ ಮುನಿಯಪ್ಪ ಅವರು ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ಎತ್ತಿನಹೊಳೆ, ಕಾವೇರಿ ನೀರನ್ನು ಈ ಭಾಗಕ್ಕೆ ಕೊಡಲೇ ಬೇಕು ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಸಂಪುಟ ಸಭೆಯಲ್ಲೂ ಕೂಡ ನೀರಿಗಾಗಿ ಮುನಿಯಪ್ಪ ಒತ್ತಡ ಹಾಕುತ್ತಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ನಾನು ನೀರಾವರಿ ಸಚಿವ ಆದ ನಂತರ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಪ್ರತ್ಯೇಕವಾಗಿ ಇಡಲು ನಾನು ಹೊಸ ಸರಕಾರಿ ಆದೇಶ ಮಾಡಿದ್ದೇನೆ ಎಂದರು.

2002 ರಿಂದ 2004 ರಲ್ಲಿ ನಗರಾಭಿವೃದ್ದಿ ಸಚಿವನಾಗಿದ್ದಾಗ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರಚನೆಗೆ ಸಹಿ ಮಾಡಿದೆ. ಬಿಡದಿಯಲ್ಲಿ ಅಥವಾ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಆಗಬೇಕಾ ಎಂಬ ಚರ್ಚೆ ಆಗುತ್ತಿತ್ತು. ಆಗ ಮುಖಂಡರಾದ ಮುನನರಸಿಂಹಯ್ಯ, ಎಸ್ ರಾಮಯ್ಯ, ಆರ್ ಬಚ್ಚೇಗೌಡ ಅವರು ಈ ಭಾಗದ ರೈತರನ್ನು ಒಪ್ಪಿಸಿ, ಇಲ್ಲಿ ಏರ್ಫೋಟ್ ಆಗಬೇಕು ಎಂದು ತೀರ್ಮಾನಿಸಲಾಯಿತು.

ದೇವನಹಳ್ಳಿಯಲ್ಲಿ 2400 ಎಕರೆಯನ್ನು ಭೂಸ್ವಾಧೀನ ಮಾಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಇದಕ್ಕೆ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಅವರನ್ನು ಕರೆದುಕೊಂಡು ಬಂದು ವಿಧಾನಸೌಧದಲ್ಲಿ ಭೂಮಿಪೂಜೆ ಮಾಡಲಾಯಿತು. ಈ ವಿಮಾನ ನಿಲ್ದಾಣದಿಂದ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ, ಭೂಮಿಗೆ ಎಷ್ಟು ಬೆಲೆ ಬಂತು, ಎಷ್ಟು ಅಭಿವೃದ್ದಿ ಆಯಿತು ಎಂಬುದು ಈ ಭಾಗದ ಜನತೆಗೆ ತಿಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಮಾತನಾಡಿ, ಗ್ರಾಮಾಂತರ ಜಿಲ್ಲೆಗೆ ಮೆಟ್ರೋ ರೈಲು ಸಂಪರ್ಕ, ಕಾವೇರಿ ನೀರು ಹಾಗೂ ಬಯಪ್ಪ ಪ್ರಾಧಿಕಾರಕ್ಕೆ ಅನುದಾನವನ್ನು ಕಲ್ಪಿಸುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಸಲ್ಲಿಸಿದರು.

ಈ ಕುರಿತು ಮಾತನಾಡಿದ ಸಚಿವರು ಉಪಮುಖ್ಯಮಂತ್ರಿಗಳು ಕೂಡ ಗ್ರಾ.ಪಂ, ಬೂತ್ ಮಟ್ಟದಲ್ಲಿ ಹೊಸ ಹುರುಪನ್ನು ನೀಡಿದ್ದಾರೆ. ದೇವನಹಳ್ಳಿಯೂ ಅಭಿವೃದ್ದಿ ಹೊಂದುತ್ತಿದ್ದು, ಕೈಗಾರಿಕೋದ್ಯಮ ಹೆಚ್ಚಾಗುತ್ತಿದೆ. ಇದರಿಂದ ದೇವನಹಳ್ಳಿಗೆ ಮೆಟ್ರೋ ಸಂಪರ್ಕ ಅಗತ್ಯವಾಗಿದೆ. ದೇವನಹಳ್ಳಿಗೆ ಮೆಟ್ರೋ ಸಂಪರ್ಕವನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ. ಆದಷ್ಟು ಬೇಗ ಇದಕ್ಕೆ ಆದ್ಯತೆ ನೀಡಬೇಕು ಎಂದರು.

ದೇವನಹಳ್ಳಿ, ವಿಜಯಪುರಕ್ಕೆ ಕಾವೇರಿ ಕುಡಿಯುವ ನೀರು ಕೊಡಬೇಕು. 100 ವರ್ಷ ಇತಿಹಾಸ ಇರುವ ದೇವನಹಳ್ಳಿ, ವಿಜಯಪುರ ಪುರಸಭೆಗೆ ಯುಜಿಡಿ ಕೆಲಸಕ್ಕೆ ಆದ್ಯತೆ ನೀಡಬೇಕು. ಎತ್ತಿನ ಹೊಳೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಆದಷ್ಟು ಬೇಗ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸುವ ಕೆಲಸ ಆದಷ್ಟು ಬೇಗ ಮಾಡಬೇಕು. ಬಯಪ್ಪ ಕೆಲಸಗಳಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೆಗೌಡ, ವಿಧಾನ ಪರಿಷತ್ ಶಾಸಕ ಎಸ್. ರವಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ. ರಾಜಣ್ಣ ,
ಬಯಪ ಆಯುಕ್ತರು ರಾಜೇಂದ್ರ ಪಿ. ಚೋಳನ್ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now