ಅಭಿವೃದ್ಧಿ ಭಾರತಕ್ಕೆ ಶಿಕ್ಷಣವೇ ಶಕ್ತಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ವಿಜಯ ದರ್ಪಣ ನ್ಯೂಸ್……
ಅಭಿವೃದ್ಧಿ ಭಾರತಕ್ಕೆ ಶಿಕ್ಷಣವೇ ಶಕ್ತಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

:ತಾಂಡವಪುರ ಮೈಸೂರು ಜನವರಿ 31 :
ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಸಾಧನೆಗಾಗಿ ಮಾತ್ರವಲ್ಲದೆ ರಾಷ್ಟ್ರ ಮತ್ತು ಸಮಾಜದ ಕಲ್ಯಾಣಕ್ಕಾಗಿಯೂ ಬಳಸಬೇಕೆಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ೨೧ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂರ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ, ಯಾಂತ್ರೀಕೃತಗೊಳಿಸುವಿಕೆ, ಡಿಜಿಟಲ್ ಕ್ರಾಂತಿ ಮತ್ತು ಹಸಿರು ತಂತ್ರಜ್ಞಾನ ಎಲ್ಲವೂ ನಮ್ಮ ಜೀವನ ಮತ್ತು ಉದ್ಯೋಗವನ್ನು ಪರಿವರ್ತಿಸುತ್ತಿವೆ. ಈ ಪರಿಸರದಲ್ಲಿ, ನೀವು ನಿರಂತರ ಕಲಿಕೆಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದರು.
ಇಂದಿನ ಭಾರತವು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುತ್ತಿದೆ. ಇದಕ್ಕೆ ನಾವೀನ್ಯತೆ, ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ. ಸ್ಟಾರ್ಟ್‌ಅಪ್ ಸಂಸ್ಕೃತಿ, ಗ್ರಾಮೀಣ ಉದ್ಯಮಶೀಲತೆ ಮತ್ತು ಸಾಮಾಜಿಕ ಉದ್ಯಮ ಎಲ್ಲವೂ ನಿಮಗೆ ಅಪಾರ ಅವಕಾಶಗಳನ್ನು ನೀಡುತ್ತವೆ. “ವಸುಧೈವ ಕುಟುಂಬಕಂ” (ಜಗತ್ತು ಒಂದು ಕುಟುಂಬ) ಎಂಬ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ನಮಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ದೂರ ಶಿಕ್ಷಣ ವ್ಯವಸ್ಥೆಯು ಇಂದು ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಈ ದಿಕ್ಕಿನಲ್ಲಿ ಅವರು ಮಾಡುತ್ತಿರುವ ಶ್ಲಾಘನೀಯ ಕೆಲಸಕ್ಕಾಗಿ ಕುಲಪತಿ ಹಾಲ್ಸೆ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯವು ಕೌಶಲ್ಯ ಆಧಾರಿತ ಕೋರ್ಸ್‌ಗಳು, ಉದ್ಯೋಗ-ಆಧಾರಿತ ತರಬೇತಿ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸುತ್ತೇನೆ. ನೀವೆಲ್ಲರೂ ವೈವಿಧ್ಯಮಯ ಹಿನ್ನೆಲೆಯಿಂದ ಬಂದವರು.
ಕೆಲವರು ಕೆಲಸ ಮಾಡುತ್ತಲೇ ಅಧ್ಯಯನ ಮಾಡಿದ್ದಾರೆ, ಕೆಲವರು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಅಧ್ಯಯನ ಮಾಡಿದ್ದಾರೆ, ಮತ್ತು ಕೆಲವರು ಆರ್ಥಿಕ ತೊಂದರೆಗಳ ನಡುವೆಯೂ ಅಧ್ಯಯನ ಮಾಡಿದ್ದಾರೆ. ಇದು ನಿಮ್ಮ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ. ನಿಮ್ಮ ಜೀವನದುದ್ದಕ್ಕೂ ಈ ಇಚ್ಛಾಶಕ್ತಿಯನ್ನು ನೀವು ಕಾಪಾಡಿಕೊಳ್ಳಿ. ಕಲಿಯುತ್ತಲೇ ಇರಿ, ಪ್ರಗತಿ ಸಾಧಿಸುತ್ತಾ ಇರಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಿ ಎಂದು ಹೇಳಿದರು.
ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯ ಮೂಲಕ ಉನ್ನತ ಶಿಕ್ಷಣವನ್ನು ಒದಗಿಸುವಲ್ಲಿ ಈ ವಿಶ್ವವಿದ್ಯಾನಿಲಯವು ದೇಶದ ಪ್ರಮುಖ ಮತ್ತು ಪ್ರಮುಖ ಸಂಸ್ಥೆಯಾಗಿದ್ದು, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾನವ ಸಂಪನ್ಮೂಲಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ಲಾಘಿಸಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಗಣ್ಯರು ಸಮಾಜಕ್ಕಾಗಿ ಅವರ ಸೇವೆ ಮುಂದುವರೆಸಲಿ ಎಂದರು. ಸಮಾರಂಭದಲ್ಲಿ ಕುಲಪತಿ ಶರಣಪ್ಪ ವಿ ಹಲಸೆ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಎನ್.ಆನಂದ್ ಕುಮಾರ್, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು.
ಎಂಟು ಮಂದಿಗೆ ಗೌರವ ಡಾಕ್ಟರೇಟ್ ಪ್ರಧಾನ
ಮೈಸೂರು: ಮೈಸೂರು ಕೈಗಾರಿಕೆ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಸೇರಿ ಒಟ್ಟು 8 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಜತೆಗೆ ಒಟ್ಟು 41,206 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬೆಂಗಳೂರಿನ ಹರ್ಷ ಸಂಸ್ಥೆಯ ಎಸ್.ಶಿವಕುಮಾರ್, ತುಮಕೂರಿನ ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಸತೀಶ್ ಕುಮಾರ್ ಡಿ.ಕೆಗ್ಗೆರೆ, ಪ್ರಜಾಪಿತ ಬ್ರಹ್ಮಕುಮಾರಿ ಐಶ್ವರ್ಯ ವಿಶ್ವವಿದ್ಯಾಲಯದ ಲಕ್ಷ್ಮೀಜಿ, ಬೀದರ್ ಜಿಲ್ಲೆಯ ನಿವೃತ್ತ ಪ್ರಾಂಶುಪಾಲ ಶಿವಶಂಕರ ಟೊಕರೆ, ಬೆಂಗಳೂರಿನ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು.
ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಮಾನ್ಯತೆ ರದ್ದಾಗಿದ್ದ ಕಾರಣಕ್ಕೆ ಬಾಕಿ ಉಳಿದುಕೊಂಡಿದ್ದ 2013-14, 2014-15ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಯುಜಿಸಿ ಮಾನ್ಯತೆ ದೊರಕಿದ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷವನ್ನೂ ಸೇರಿಸಿ ಮೂರು ಸಾಲಿನ ಘಟಿಕೋತ್ಸವವನ್ನು ಒಟ್ಟಿಗೆ ಆಚರಿಸಲಾಯಿತು.
68 ಪಿಎಚ್‌ಡಿ, 65 ಪದಕ: ಘಟಿಕೋತ್ಸವದಲ್ಲಿ 23 ಮಹಿಳಾ ಹಾಗೂ 45 ಪುರುಷ ಅಭ್ಯರ್ಥಿಗಳನ್ನು ಸೇರಿ 68 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. 65 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 62 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. 2013-14 ಮತ್ತು 2014-15ನೇ ಸಾಲಿನಲ್ಲಿ ಮಾನವಿಕ ವಿಷಯಗಳಲ್ಲಿ 6,112 ಸ್ನಾತಕೋತ್ತರ ಪದವಿ, ಸಮಾಜ ವಿಜ್ಞಾನ ವಿಷಯಗಳಲ್ಲಿ 10,671 ಸ್ನಾತಕೋತ್ತರ ಪದವಿ, ಶಿಕ್ಷಣಶಾಸ್ತ್ರದಲ್ಲಿ 1072 ಸ್ನಾತಕ ಪದವಿ, ವಾಣಿಜ್ಯಶಾಸ್ತ್ರ ವಿಷಯಗಳಲ್ಲಿ 8,411 ಸ್ನಾತಕ ಮತ್ತು ಸ್ನಾತಕೋತ್ತರ ಪದವಿ, ನಿರ್ವಹಣಶಾಸ್ತ್ರ ವಿಷಯಗಳಲ್ಲಿ 358 ಸ್ನಾತಕೋತ್ತರ ಪದವಿ, ವಿಜ್ಞಾನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯಗಳಲ್ಲಿ 963 ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಿದರು.
2023-24ನೇ ಸಾಲಿನಲ್ಲಿ ಮಾನವಿಕ ವಿಷಯಗಳಲ್ಲಿ 2814 ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ, ಸಮಾಜ ವಿಜ್ಞಾನ ವಿಷಯಗಳಲ್ಲಿ 2822 ಸ್ನಾತಕೋತ್ತರ ಪದವಿ, ಶಿಕ್ಷಣಶಾಸ್ತ್ರದಲ್ಲಿ 473 ಸ್ನಾತಕ ಪದವಿ, ವಾಣಿಜ್ಯಶಾಸ್ತ್ರದಲ್ಲಿ 1,482 ಸ್ನಾತಕ ಮತ್ತು ಸ್ನಾತಕೋತ್ತರ ಪದವಿ, ನಿರ್ವಹಣಶಾಸ್ತ್ರ ವಿಷಯಗಳಲ್ಲಿ 810 ಸ್ನಾತಕೋತ್ತರ ಪದವಿ, ವಿಜ್ಞಾನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯಗಳಲ್ಲಿ 2222 ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಿದರು. ಒಟ್ಟು 3,987 ಪುರುಷ ಹಾಗೂ 6,704 ಮಹಿಳಾ ಅಭ್ಯಾರ್ಥಿಗಳು ಸೇರಿ ಒಟ್ಟು 10,691 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಿದರು.
ಮಾಜಿ ಸಚಿವ ಸಿಟಿ ರವಿ ಪಿಎಚ್‌ಡಿ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 14ನೇ ಘಟಿಕೋತ್ಸವದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪಿಎಚ್ ಡಿ ಪದವಿ ಪಡೆದು ಗಮನ ಸೆಳೆದರು.
ಬಳಿಕ ಮಾತನಾಡಿದ ಸಿ.ಟಿ.ರವಿ, ರಾಜಕೀಯದಲ್ಲಿ ಇರುವುದರಿಂದ ರಾಜ್ಯಶಾಸ್ತ್ರವನ್ನೇ ಆಯ್ಕೆ ಮಾಡಿಕೊಂಡೆನು. ರಾಜಕೀಯದಲ್ಲಿ ಯಾವಾಗಲು ಬ್ಯುಸಿ ಆಗಿರುವ ನನಗೆ ನೀವೇಕೆ ಪಿಎಚ್ ಡಿ ಮಾಡಬಾರದು ಎಂದು ಕೆಲವರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 2023 ರಲ್ಲಿ ಪಿಎಚ್ ಡಿ ಸಂಪೂರ್ಣ ಗೊಳಿಸಿದ್ದೆನು. ರಾಜ್ಯ ಶಾಸ್ತ್ರದ ಡಾ.ಸುರೇಶ ಅವರ ಮಾರ್ಗದರ್ಶನದಲ್ಲಿ 4 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದೆ. ನಾನು ನಿರಂತರ ಕಲಿಕೆಯ ವಿದ್ಯಾರ್ಥಿ, ಪ್ರತಿ ಕ್ಷಣಕ್ಕೂ ತಿಳಿದುಕೊಳ್ಳುವುದು ಇರುತ್ತದೆ. ಎಲ್ಲರೊಟ್ಟಿಗೆ ಕುಳಿತು ಕಲಿಕೆಯ ಒಂದು ಭಾಗವಾದೆ ಎಂದು ಸಂತಸ ಹಂಚಿಕೊಂಡರು.
ಪಿಎಚ್ ಡಿ ಪಡೆದ ಪೊಲೀಸ್ ಅಧಿಕಾರಿ
ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಪ್ರಸನ್ನ ಅವರು ಕನ್ನಡದಲ್ಲಿ ಪಿಎಚ್ ಡಿ ಪಡೆದು ಸಂಭ್ರಮಿಸಿದರು. ಈ ಕುರಿತು ಮಾತನಾಡಿ, 2019ರಲ್ಲಿ ಪಿಎಚ್ ಡಿ ನೊಂದಣಿಯಾದೇ ಆಗ ಮೈಸೂರಿನಲ್ಲೇ ಡಿಸಿಪಿ ಆಗಿದ್ದೆನು. ಮೈಸೂರು ಜಿಲ್ಲೆಯ ಬಗ್ಗೆಯೇ ನಾನು ಕನ್ನಡ ವಿಭಾಗದಲ್ಲಿ ಪ್ರೊ.ರಂಗಸ್ವಾಮಿ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ಅಧ್ಯಯನ ವಿಷಯ ಕುರಿತು ನಡೆದಿಸ ಅಧ್ಯಯನಕ್ಕೆ ಪಿಎಚ್ ಡಿ ದೊರೆತಿರುವುದು ಸಂತಸ ತಂದಿದೆ ಎಂದರು. ಅಂತೆಯೇ ಗ್ರಾಪಂ ಮಾಜಿ ಅಧ್ಯಕ್ಷ ಶಂಕರ್ ಕೊಂಗಹಳ್ಳಿ ಜಾನಪದ ಕ್ಷೇತ್ರದಿಂದ ಪಿಎಚ್ ಡಿ ಪಡೆದು ಸಂಭ್ರಮಿಸಿದರು.
