ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಬೇಟಿ ಮಾಡಿದ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಬೇಟಿ ಮಾಡಿದ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ

ಕನಿಷ್ಠ ಬೆಂಬಲ ಬೆಲೆ ಯೋಜನೆಯ ಬಾಕಿ ಮೊತ್ತ 1446 ಕೋಟಿ ರೂ ಗಳ ಬಿಡುಗಡೆಗೆ ಮನವಿ

ನವದೆಹಲಿ10.

ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ನವದೆಹಲಿಯ ಕೃಷಿ ಭವನದಲ್ಲಿ ನಡೆದ ಆಹಾರ ಇಲಾಖೆಯ ಸಭೆಯಲ್ಲಿ ಮಾನ್ಯ ಆಹಾರ ಸಚಿವ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕರ್ನಾಟಕ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ಧಾನ್ಯಗಳು ಹಾಗೂ ಭತ್ತ/ಕಸ್ಟಮ್ ಮಿಲ್ಡ್ ರೈಸ್ (CMR) ಖರೀದಿ ಕಾರ್ಯವನ್ನು ನಿಯಮಾನುಸಾರವಾಗಿ ನಡೆಸುತ್ತಿದೆ.

ಖರೀದಿಸಲಾದ ಆಹಾರ ಧಾನ್ಯಗಳನ್ನು ಕೇಂದ್ರ ಪೂಲ್‌ಗೆ ಸೇರಿಸಿ, ಭಾರತ ಸರ್ಕಾರದ ಅನುಮೋದನೆಯೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಅಡಿಯಲ್ಲಿ ವಿತರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ನಿಗದಿತ ಪ್ರಕ್ರಿಯೆಯಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪರಿಹಾರ ದಾವೆಗಳನ್ನು ಸಲ್ಲಿಸಿದೆ. ಆದರೆ ಖರೀದಿ ಋತು 2023–24 ಹಾಗೂ 2024–25ಕ್ಕೆ ಸಂಬಂಧಿಸಿದಂತೆ ರೂ. 1,446.36 ಕೋಟಿ ಮೊತ್ತದ ತಾತ್ಕಾಲಿಕ MSP ಪರಿಹಾರ ಮೊತ್ತವು ಬಹುಕಾಲದಿಂದ ಬಾಕಿ ಉಳಿದಿರುವುದು ರಾಜ್ಯದ ಆರ್ಥಿಕ ಸಂಪನ್ಮೂಲಗಳ ಮೇಲೆ ಗಂಭೀರ ಒತ್ತಡವನ್ನುಂಟುಮಾಡುತ್ತಿದೆ.

ಇದಲ್ಲದೆ, 2025–26ರ ಖರೀದಿ ಋತುವಿನ ಕಾರ್ಯಾಚರಣೆಗಳು ಈಗಾಗಲೇ ಪ್ರಾರಂಭವಾಗಿದ್ದು, 31.01.2026ರ ತನಕ 2,86,365ಕ್ಕೂ ಅಧಿಕ ರೈತರು ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದು, MSP ವ್ಯವಸ್ಥೆಯ ಮೇಲಿನ ಅವರ ವಿಶ್ವಾಸವನ್ನು ಕಾಯ್ದುಕೊಳ್ಳುವುದು ಹಾಗೂ ಪ್ರಸ್ತುತ ನಡೆಯುತ್ತಿರುವ ಖರೀದಿ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ಹಣದ ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಬಹುಕಾಲದಿಂದ ಬಾಕಿ ಉಳಿದಿರುವ MSP ಪರಿಹಾರ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ಪಾವತಿಯನ್ನು ಮಾಡಲಿದ್ದು, ಖರೀದಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಹಾರ ನಿಗಮದ ನಿರ್ದೇಶಕ ಜಗದೀಶ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.