ಜಗದ್ಗುರು ವಿಧುಶೇಖರ ಭಾರತಿ ಸನ್ನಿದಾನಂಗಳವರ ರಿಂದ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಗೋಪುರ ಶಿಖರದ ಲೋಕಾರ್ಪಣೆ
ವಿಜಯ ದರ್ಪಣ ನ್ಯೂಸ್….
ಜಗದ್ಗುರು ವಿಧುಶೇಖರ ಭಾರತಿ ಸನ್ನಿದಾನಂಗಳವರ ರಿಂದ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಗೋಪುರ ಶಿಖರದ ಲೋಕಾರ್ಪಣೆ

ಕಳಸ: ಕಳಸ ಸಮೀಪದ ಬಾಳೆಹೊಳೆ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಆಮ್ಮನವರ ನೂತನ ಗೋಪುರ ಶಿಖರದ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಮಹೋತ್ಸ ವವು ದಕ್ಷಿಣಾಮ್ನಾಯ ಶಾರದಾ ಪೀಠದ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ದಿವ್ಯ ಅಮೃತಹಸ್ತದಿಂದ ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಬೆಳಿಗ್ಗೆ ದೇವಾಲಯದ ಆವರಣಕ್ಕೆ ಆಗಮಿಸಿದ ಶೃಂಗೇರಿ ಜಗದ್ಗುರುಗಳನ್ನು ಭಕ್ತಸಾಗರವು ಅತ್ಯಂತ ಭಕ್ತಿ-ಗೌರವಗಳೊಂದಿಗೆ ಬರಮಾಡಿಕೊಂಡಿತು. ಮಂಗಳವಾದ್ಯಗಳ ಝೇಂಕಾರ, ಕಿವಿಗೆ ಇಂಪು ನೀಡುವ ಚಂಡೆ ವಾದನ ಹಾಗೂ ವೇದಮಂತ್ರಗಳ ಘೋಷದ ನಡುವೆ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.

ಬಳಿಕ ದೇವಾಲಯದ ಗರ್ಭಗುಡಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾ ‘ಚಂಡಿಕಾ ಯಾಗ’ದ ಪೂರ್ಣಾಹುತಿಯನ್ನು ಶ್ರೀಗಳು ತಮ್ಮ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿಸಿದರು. ಜಗನ್ಮಾತೆ ದುರ್ಗಾಪರಮೇಶ್ವರೀ ಅಮ್ಮನವರಿಗೆ ಮಹಾಪೂಜೆಯನ್ನು ಸಮರ್ಪಿಸಿ, ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯದ ಭವ್ಯ ಗೋಪುರದ ಶಿಖರಕ್ಕೆ ಶಾಸ್ರೋಕ್ತವಾಗಿ ‘ಕುಂಭಾಭಿಷೇಕ’ವನ್ನು ನೆರವೇರಿಸಿ, ಲೋಕಾರ್ಪಣೆ ಮಾಡಿದರು.

ಕುಂಭಾಭಿಷೇಕದ ಬಳಿಕ ಆಶೀರ್ವಚನ ನೀಡಿದ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರು, ಮಕ್ಕಳಿಗೆ ಧಾರ್ಮಿಕ ತಳಹದಿ ಅಗತ್ಯ ಇಂದಿನ ದಿನಗಳಲ್ಲಿ ಮಕ್ಕಳು ಉನ್ನತ ವ್ಯಾಸಂಗ ಮಾಡಿ, ಅಪಾರ ಸಂಪತ್ತು ಗಳಿಸಿ, ದೊಡ್ಡ ಅಧಿಕಾರವನ್ನು ಪಡೆದರೂ, ಅವರಲ್ಲಿ ಧಾರ್ಮಿಕ ಸಂಸ್ಕಾರವಿಲ್ಲದಿದ್ದರೆ ಆ ಎಲ್ಲ ಸಾಧನೆಗಳೂ ಶೂನ್ಯವಾಗುತ್ತವೆ. ಅಂತಹ ವಿದ್ಯೆ ಹಾಗೂ ಅಧಿಕಾರಕ್ಕೆ ಸಮಾಜದಲ್ಲಿ ನೈಜ ಬೆಲೆ ಇರುವುದಿಲ್ಲ. ಮಕ್ಕಳು ಜೀವನದಲ್ಲಿ ಉನ್ನತ ಸ್ಥಿತಿಗೇರಲು ಕೇವಲ ಲೌಕಿಕ ವಿದ್ಯೆ ಸಾಲದು, ಆದರೊಂದಿಗೆ ಧಾರ್ಮಿಕ ಸಂಸ್ಕಾರವೂ ಅತ್ಯಗತ್ಯ. ಪೋಷಕರು ಪ್ರತಿದಿನ ತಮ್ಮ ಮಕ್ಕಳನ್ನು ದೇವಾಲಯದ ಪವಿತ್ರ ವಾತಾವರಣಕ್ಕೆ ಕರೆತಂದು, ಭಗವಂತನ ಭಕ್ತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸಿಕೊಡಬೇಕು.
ಯುವಜನತೆ ಉನ್ನತ ಶಿಕ್ಷಣ ಪಡೆದು, ಉದ್ಯೋಗವನ್ನರಸಿ ಜಗತ್ತಿನ ಯಾವುದೇ ಮೂಲೆಗೆ ಹೋದರೂ, ತಾವು ಹುಟ್ಟಿದ ಊರು ಹಾಗೂ ತಮ್ಮೂರಿನ ದೇವಾಲಯಗಳನ್ನು ಎಂದಿಗೂ
ಮರೆಯಬಾರದು. ನಮ್ಮ ಬೇರುಗಳು ಸದಾ ಭಗವಂತನ ಸನ್ನಿಧಿಯೊಂದಿಗೆ ಬೆಸೆದುಕೊಂಡಿರಬೇಕು
ನಾವು ಭಗವಂತನಿಗೆ ಎಷ್ಟು ಹತ್ತಿರವಾಗುತ್ತೇವೆಯೋ, ಅಷ್ಟು ನಮ್ಮ ಮನಸ್ಸು ಶುದ್ದಿಯಾಗುತ್ತದೆ ಹಾಗೂ ನೆಮ್ಮದಿ ಲಭಿಸುತ್ತದೆ. ಜೀವನದಲ್ಲಿ ಕೇವಲ ಭಗವಂತನಿದ್ದಾನೆ ಎಂದು ಸುಮ್ಮನೆ ಕೂರಬಾರದು.

ನಮ್ಮ ಪಾಲಿನ ಕರ್ತವ್ಯ ಹಾಗೂ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು ಯಾವುದೇ ಪ್ರಯತ್ನ ಮಾಡದೆ ಫಲ ಸಿಗಲಿಲ್ಲ ಎಂದು ನಿರಾಸೆಗೊಳ್ಳಬಾರದು. ನಿರಂತರವಾದ ಶ್ರದ್ದೆಯ ಪ್ರಯತ್ನ ಹಾಗೂ ಭಗವಂತನ ಅನುಗ್ರಹವಿದ್ದರೆ ಒಂದಲ್ಲ ಒಂದು ದಿನ ಖಂಡಿತವಾಗಿಯೂ ಸತ್ಪಲ ದೊರೆಯುತ್ತದೆ ಎಂದು ಆಶೀರ್ವಚನ ನೀಡಿದರು.
ಈ ಪುಣ್ಯ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತರು ಪಾಲ್ಗೊಂಡು ಜಗನ್ಮಾತೆ ದುರ್ಗಾಪರಮೇಶ್ವರಿಯ ದರ್ಶನ ಪಡೆದು, ಶೃಂಗೇರಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿ ಕೃತಾರ್ಥರಾದರು. ದೇವಾಲಯದ ಆವರಣವೆಲ್ಲವೂ ಭಕ್ತಿಗೀತೆ, ಮಂತ್ರಘೋಷಗಳಿಂದ ಕೂಡಿತ್ತು ದೇವಸ್ಥಾನವನ್ನು ವಿದ್ಯುತ್ ದೀಪ ಹೂಗಳಿಂದ ಶೃಂಗಾರ ಮಾಡಲಾಗಿತ್ತು.
