ವಿಜಯ ದರ್ಪಣ ನ್ಯೂಸ್…..
ಗತಿಸಿದ ಚರಿತ್ರೆ,ಸಮಕಾಲಿನ ಸಂದರ್ಭ ಅರ್ಥವಾಗದಿದ್ದರೆ ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ: ಮುರುಘೇಂದ್ರ ಸ್ವಾಮೀಜಿ ಅಭಿಮತ

ಚಿಕ್ಕಮಗಳೂರು ಮೇ ೨೪: ಆಲೋಚನೆಗಳು ಹೆಚ್ಚು ಹೆಚ್ಚು ಸತ್ಯಕ್ಕೆ ಹತ್ತಿರವಾಗಬೇಕು, ವಾಸ್ತವ ವಿಚಾರಗಳು ಈ ನೆಲದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಬಾಳಬೇಕು, ಚರಿತ್ರೆ ಮತ್ತು ಸಮಕಾಲೀನ ಸಂದರ್ಭ ಅರ್ಥವಾಗದೆ ಹೋದರೆ ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ಹುಸಿ ಸಾಹಿತ್ಯದ ಎದುರು ಜನಸಾಹಿತ್ಯ ಎದ್ದು ನಿಲ್ಲಬೇಕು ಎಂದು ಶ್ರೀ ಫಲಾಹಾರಸ್ವಾಮಿ ಮಠದ ಮುರುಘೇಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಲ್ಲೇನಹಳ್ಳಿಯ ಕವಿಯತ್ರಿ ಭವ್ಯ ಮಲ್ಲಿಕ್ ಮತ್ತು ಶಿಕ್ಷಕ ಮಲ್ಲಿಕಾರ್ಜುನ್ ದಂಪತಿಗಳ ಮನೆಯಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಯಾವುದೇ ಮತ ಧರ್ಮದ ಪ್ರಾರ್ಥನಾ ಮಂದಿರಗಳ ಹುಂಡಿಗಳಿಗೆ ಬೀಳುವ ಜನಗಳ ದುಡಿಮೆಯ ಹಣವು ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಇರುವ ವಿದ್ಯಾರ್ಥಿ ಯುವಜನರ ಭವಿಷ್ಯವನ್ನು ಅರಳಿಸುವದಕ್ಕೆ ಉಪಯೋಗವಾಗಬೇಕು, ಜ್ಞಾನ ದೀವಿಗೆಯಂತಿರುವ ಗ್ರಂಥಾಲಯಗಳ ಸದ್ಬಳಕೆಗೆ ಸದುಪಯೋಗವಾಗಬೇಕು, ಪುಸ್ತಕಗಳು ಮೌಢ್ಯವನ್ನು ಕಳಚಿ ವೈಚಾರಿಕತೆಯನ್ನು ತುಂಬಬೇಕು, ವೈಚಾರಿಕತೆಯ ಬೆಳಗು ನಮ್ಮದಾಗದಿದ್ದರೆ ಜ್ಞಾನದ ಸಮಾಜವನ್ನು ಕಟ್ಟಲು ಅಸಾಧ್ಯ, ಹಾಗಾಗಿ ಪ್ರತಿ ಮನೆ ಮನೆಗೆ ಗ್ರಂಥಾಲಯಗಳ ಅಗತ್ಯ ಹಿಂದಿಗಿಂತಲೂ ಇಂದು ಹೆಚ್ಚು ಅನಿವಾರ್ಯವಾಗಿದೆ, ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮನೆಮನೆಗೂ ಗ್ರಂಥಾಲಯ ಅನುಷ್ಠಾನದ ಯೋಜನೆಯನ್ನು ಹಮ್ಮಿಕೊಂಡು ಕಾರ್ಯಯೋನ್ಮುಖವಾಗಿರುವುದು ಶ್ಲಾಘನೀಯ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕನ್ನಡ ಪುಸ್ತಕ ಪ್ರಾಧಿಕಾರವು ತನ್ನ ಗೋಡೆಯನ್ನು ದಾಟಿ, ಬಯಲಿಗೆ ಬಂದು,ಬುದ್ಧ ಮಹಾಗುರುವಿನ ಕಾರುಣ್ಯ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೇಳಿಕೆ, ಅಣ್ಣ ಬಸವಣ್ಣನ ನಡವಳಿಕೆಯು ಸೇರಿದಂತೆ ಶ್ರೇಷ್ಠ ತತ್ವಜ್ಞಾನಿಗಳ ದಾರ್ಶನಿಕರ ಬೆಳಕಿನ ಬುತ್ತಿಯನ್ನು ಮನೆಮನೆಗೂ ಗ್ರಂಥಾಲಯಗಳನ್ನು ಅನುಷ್ಠಾನ ಮಾಡುವ ಮೂಲಕ ಕನ್ನಡ ಪುಸ್ತಕ ಪ್ರಾಧಿಕಾರ ಹೊಸ ಹೆಜ್ಜೆ ಇಟ್ಟು ನವ ಬಾಷ್ಯ ಬರೆಯುತ್ತಿದೆ, ಪ್ರಾಧಿಕಾರದ ಲಕ್ಷ್ಯ ಈಗ ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪನೆ ಮಾಡುವ ಘನ ಉದ್ದೇಶ ಹೊಂದಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕ ಡಿ ಎಂ ಮಂಜುನಾಥಸ್ವಾಮಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ , ಇತಿಹಾಸದ ಕಣ್ಣೀರಿನ ಪುಟಗಳನ್ನು ವರಸಿ, ಭವಿಷ್ಯವನ್ನು ಬದಲಾಯಿಸುವ ಮತ್ತು ಬೆಳಗಿಸುವಂತಹ ಕ್ರಾಂತಿಯನ್ನು ಹುಟ್ಟು ಹಾಕುವಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದು, ಹೀಗಾಗಿ ಜನ ವರ್ಗದ ಕಥನವನ್ನು ಕಾದಂಬರಿಯಾಗಿ, ಕವಿತೆಯಾಗಿ, ನಾಟಕವಾಗಿ, ಮಹಾಕಾವ್ಯವಾಗಿ ರೂಪಗೊಂಡ ಪುಸ್ತಕ ಸಂಸ್ಕೃತಿಯು ಪ್ರತಿ ಮನೆ ಮನೆಯಲ್ಲಿ ನೆಲೆಗೊಳ್ಳಬೇಕು ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಬಿಂಡಿಗಾದೇವಿರಮ್ಮ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ ಎ ಕುಲಶೇಖರ್ ಅವರು, ಪುಸ್ತಕ ಪ್ರೀತಿ ನಮ್ಮೊಳಗೆ ಇದ್ದರೆ ಬದುಕಿನಲ್ಲಿ ಹಲವಷ್ಟನ್ನು ಉತ್ಕೃಷ್ಟವಾಗಿ ಗಳಿಸಿಕೊಂಡು ಬದುಕನ್ನು ಸಹನೀಯ ಮಾಡಿಕೊಳ್ಳಬಹುದು ಎಂದರು.
ಜನಪರ ಹೋರಾಟಗಾರ ಪಿ ವೇಲಾಯುಧನ್, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಕೆ ಪಿ ಪರಮೇಶ್ವರಪ್ಪ, ಕವಿಯತ್ರಿ,ಲೇಖಕಿ,ಡಿ ನಳಿನಾ ಮಾತನಾಡಿದರು.
ಕಾರ್ಯಕ್ರಮದ ಅತಿಥ್ಯವಹಿಸಿ ಮನೆಗೊಂದು ಗ್ರಂಥಾಲಯವನ್ನು ಸ್ಥಾಪನೆ ಮಾಡಿದ ಕವಿಯತ್ರಿ ಭವ್ಯ ಮಲ್ಲಿಕ್ ಮತ್ತು ಶಿಕ್ಷಕ ಮಲ್ಲಿಕಾರ್ಜುನ್ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು.
ವೇದಿಕೆಯಲ್ಲಿ ಬಿಂಡಿಗಾ ದೇವಿರಮ್ಮ ದೇವಸ್ಥಾನದ ಸದಸ್ಯ ಬಿ ಎಸ್ ಬಸವರಾಜೆಗೌಡ, ಕಾಫಿ ಬೆಳಗಾರ ನಿಂಗಶೆಟ್ಟಿ ಮತ್ತು ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಲಕ್ಷ್ಮಿಕಾಂತ್ ಕೆ ಎನ್, ಎಂ ಆರ್ ಪ್ರಕಾಶ್, ಸೌಭಾಗ್ಯ ಮಹಾಂತೇಶ್ ಮುಂತಾದವರು ಇದ್ದರು.
ಶಿಕ್ಷಕ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಭವ್ಯ ಮಲ್ಲಿಕ್ ಸ್ವಾಗತಿಸಿ , ಧನುಶ್ರೀ ರವಿ ಪಟೇಲ್ ವಂದಿಸಿದರು.
ನ್ಯೂಸ್ ಕಿಂಗ್….
ಚಿಕ್ಕಮಗಳೂರು






