ವಿಜಯ ದರ್ಪಣ ನ್ಯೂಸ್…..
ಮೈಸೂರಿನಲ್ಲಿ ರಂಜಾನ್ ಸಂಭ್ರಮ ಎಲ್ಲೆಡೆ ಸಾಮೂಹಿಕ ಪ್ರಾರ್ಥನೆ, ಶಾಂತಿ, ಸಹಭಾಳ್ವೆ ಸಂದೇಶ

ತಾಂಡವಪುರ ಮಾರ್ಚ್ 21: ಶಾಂತಿ, ಸೌಹಾರ್ದತೆಯ ಸಂದೇಶ ಸಾರುವ ರಂಜಾನ್(ಈದ್ ಉಲ್ ಫಿತರ್) ಹಬ್ಬವನ್ನು ಮೈಸೂರಿನ ನಗರದೆಲ್ಲಡೆ ಮುಸ್ಲಿಂ ಸಮುದಾಯದವರು ಭಕ್ತಿಭಾವದೊಂದಿಗೆ ಸಂಭ್ರಮದಿಂದ ಆಚರಿಸಿದರು.
ತಿಲಕ್ ನಗರ, ರಾಜೀವ್‌ನಗರ, ಗೌಸಿಯಾ ನಗರದ ಈದ್ಗಾಗಳಲ್ಲಿ ಈದ್ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಜತೆಗೆ ಬಡಾವಣೆಗಳಲ್ಲಿ ಇರುವ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದರು.
ಮೂವತ್ತು ದಿನಗಳ ರಂಜಾನ್ ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮುಸ್ಲೀಮರು ತಮ್ಮ ಆದಾಯದ ಶೇ.೨.೫ರಷ್ಟನ್ನು ಜಕಾತ್ ರೂಪದಲ್ಲಿ ದಾನ ಮಾಡಿ, ಪ್ರತಿ ಕುಟುಂಬ ಸದಸ್ಯರಿಂದ ಫಿತ್ರಾ ನೀಡಿದ ನಂತರ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಭಕ್ತಿಪೂರ್ವಕವಾಗಿ ಸೇರಿ ಹಬ್ಬವನ್ನು ಆಚರಿಸಿದರು.
ನಗರದ ವಿವಿಧ ಕಡೆಗಳಲ್ಲಿರುವ ಮಸೀದಿಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಪ್ರಾರ್ಥನೆ ಸಲ್ಲಿಸಿ ಬಳಿಕ ತಿಲಕ್‌ನಗರದ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಧರ್ಮಗುರು ಸರ್‌ಖಾಜಿ ಮೌಲಾನ ಮಹಮ್ಮದ್ ಉಸ್ಮಾನ್ ಶರೀಫ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರಲ್ಲದೆ ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಡ ಮುಸ್ಲಿಂ ಸಮುದಾಯದವರಿಗೆ ಹಬ್ಬದ ಅಂಗವಾಗಿ ಸಿಹಿ ತಿಂಡಿ, ಹಾಲು, ಹಣ್ಣು, ಬಟ್ಟೆ ಇತ್ಯಾದಿಗಳನ್ನು ವಿತರಿಸಲಾಯಿತು. ಇದಾದ ಬಳಿಕ ಸ್ನೇಹಿತರ ಮನೆಗಳಿಗೆ, ಅಕ್ಕಪಕ್ಕದ ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆ ಹಾಗೂ ಸಾಮೂಹಿಕ ನಮಾಜ್ ಸಮಯದಲ್ಲೂ ಕೂಡ ಎಲ್ಲರೂ ಒಬ್ಬರನ್ನು ಒಬ್ಬರು ಬಿಗಿದ್ದಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಅಬಾಲವೃದ್ಧರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು.
ಈ ವೇಳೆ ಧರ್ಮ ಸಂದೇಶದ ನೀಡಿದ ಧರ್ಮಗುರು ಸರ್‌ಖಾಜಿ ಮೌಲಾನ ಮಹಮ್ಮದ್ ಉಸ್ಮಾನ್ ಶರೀಫ್, ಇಸ್ಲಾಂ ಧರ್ಮದ ಮುಖ್ಯ ಉದ್ದೇಶ ದೇವರ ಆರಾಧನೆ ಹಾಗೂ ಮಾನವ ಸೇವೆ. ಉಪವಾಸ, ನಮಾಜ್, ಜಕಾತ್ ಮತ್ತು ಫಿತ್ರಾ ಮೂಲಕ ಬಡವರಿಗೂ ಸಹಾಯ ಮಾಡುವುದೇ ಈ ಹಬ್ಬದ ಮಹತ್ವ. ಈದ್ ಹಬ್ಬ ಕೇವಲ ಆಚರಣೆ ಮಾತ್ರವಲ್ಲ, ವಿಶ್ವಕ್ಕೆ ಮಾನವೀಯತೆ, ಏಕತೆ ಮತ್ತು ಸಹೋದರತ್ವದ ಸಂದೇಶ ನೀಡುವ ಹಬ್ಬವಾಗಿದೆ ಎಂದು ಹೇಳಿದರು.
ಪ್ರವಾದಿ ಮಹಮ್ಮದ್ ಅವರ ಜೀವನಶೈಲಿಯನ್ನು ಅನುಸರಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ಯುವಕರು ಮದ್ಯಪಾನ, ಮಾದಕ ವಸ್ತುಗಳಂತಹ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದ ಅವರು, ದೇಶದ ಹಾಗೂ ವಿಶ್ವದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಶಾಸಕ ತನ್ವೀರ್ ಸೇಠ್ ಅಶೋಕ ರಸ್ತೆಯ ಮಸ್ಜಿದ್-ಎ-ಕಚ್ಚಿ ಮೆಮನ್‌ನಲ್ಲಿ ಬೆಳಗ್ಗೆ ಈದ್ ನಮಾಜ್‌ನಲ್ಲಿ ಪಾಲ್ಗೊಂಡು ಮುಸ್ಲಿಂ ಸಹೋದರರಿಗೆ ಹಬ್ಬದ ಶುಭಾಶಯ ಕೋರಿದರು. ಶಾಸಕ ಕೆ.ಹರೀಶ್ ಗೌಡ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಮುಸಲ್ಮಾನರಿಗೆ ರಂಜಾನ್ ಶುಭಾಶಯ ತಿಳಿಸಿದರು.
ವಿಟಿಯು ಮಾಜಿ ಡೀನ್ ಡಾ.ಶಕೀಬ್ ಉರ್ ರೆಹಮಾನ್, ಕೆ.ಸಿ.ಶೌಕತ್ ಪಾಷಾ, ಮಾಜಿ ಮೇಯರ್ ಅನ್ವರ್ ಬೇಗ್, ಮುಖಂಡರಾದ ಮುಷ್ತಾಕ್ ಅಹ್ಮದ್, ಜಮೀಲ್ ಅಹ್ಮದ್ ಅಶ್ರಫಿ, ಮುಮ್ತಾಜ್ ಅಹ್ಮದ್, ಮಚ್ಚಿ ತಾಜ್, ಸುಹೇಲ್ ಬೇಗ್ ಸೇರಿ ಅನೇಕರಿದ್ದರು.
ಪ್ರಪಂಚಕ್ಕೆ ಒಳಿತಾಗಲಿ ಎಂಬ ಪ್ರಾರ್ಥನೆ ಈದ್ಗಾ ಮೈದಾನದಲ್ಲಿ ಆಗಿದೆ. ತ್ಯಾಗ, ಸೌಹರ್ದತೆ, ಪ್ರೀತಿ, ವಿಶ್ವಾಸದಿಂದ ಗೆಲ್ಲುವುದೇ ರಂಜಾನ್ ಆಗಿದೆ. ಇಲ್ಲದವರಿಗೆ ಉಳ್ಳವರು ನೀಡುವ ಹಬ್ಬ ಇದಾಗಿದೆ. ನಿನ್ನೆ ಯುಗಾದಿ, ಇಂದು ರಂಜಾನ್ ಪರಸ್ಪರ ಎರಡು ಸಮುದಾಯ ಕೋರಿಕೊಳ್ಳುವ ಮೂಲಕ ಸಂದೇಶ ನೀಡಿದ್ದೇವೆ. ನಡೆಯುತ್ತಿರುವ ಯುದ್ಧಗಳನ್ನು ಇಂತಹ ಶಾಂತಿ ಸಂದೇಶದ ಮೂಲಕ ನಿಲ್ಲುವಂತಾಗಲಿ.
-ಕೆ.ಹರೀಶ್ ಗೌಡ, ಶಾಸಕ









