ವಿಜಯ ದರ್ಪಣ ನ್ಯೂಸ್….
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ

ತಾಂಡವಪುರ ಮೇ 30: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಕಾಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಶಾಸಕ ಜಿ.ಡಿ.ಹರೀಶ್ ಗೌಡ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಪತ್ರಕರ್ತರು ಮಾಡುವ ಕೆಲಸ ಮತ್ತು ಶ್ರಮಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ, ಆದರೂ ಪತ್ರಕರ್ತರು ತಮ್ಮ ವೃತ್ತಿಯನ್ನು ಗೌರವಿಸಿ ಸಮಾಜದ ಅಂಕು ಡೊಂಕು ತಿದ್ದುವ ಕೆಲಸವನ್ನು ಪ್ತಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಪತ್ರಕರ್ತರ ಮಕ್ಕಳು ಪತ್ರಕರ್ತರಾಗಬೇಕು ಎಂಬುದಿಲ್ಲ, ಅವರು ಕಷ್ಟಪಟ್ಟು ಓದಿ, ಪರಿಶ್ರಮ ಹಾಕಿ ಇಂಜಿನಿಯರ್ ವೈದ್ಯರಾಗಬಹುದು ಇಲ್ಲ ಪತ್ರಕರ್ತರಾಗೇ ಕೆಲಸ ಮಾಡಬಹುದು. ಆದರೆ, ನಾವು ಯಾವ ಕೆಲಸವನ್ನು ಮಾಡುತ್ತೇವೆ. ಅದರ ಬಗ್ಗೆ ಪ್ರೀತಿ ಇರಬೇಕು ಮತ್ತು ಶ್ರಮ ಹಾಕಿದರೆ ಮಾತ್ರ ನಾವು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೆಚ್ಚು ವಿದ್ಯಾವಂತರಾಗಿ ಪ್ರಜ್ಞಾವಂತರಾಗಬೇಕು, ಎಂತಹುದೆ ಕಷ್ಟ ಬಂದರು ಎದುರಿಸುತ್ತೇನೆ ಎಂಬ ಧೈರ್ಯ ಇರಬೇಕು ಮತ್ತು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಬಿ ರಾಘವೇಂದ್ರ ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಉದ್ಯಮಿ ಶಿವಕುಮಾರ್, ಪ್ರಧಾನಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಉಪಾಧ್ಯಕ್ಷ ರವಿ ಪಾಂಡವಪುರ, ಕಾರ್ಯದರ್ಶಿ ಕೃಷ್ಣೋಜಿರಾವ್, ಖಜಾಂಚಿ ಸುರೇಶ್, ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ, ಕಾರ್ಯದರ್ಶಿ ದಾ.ರಾ.ಮಹೇಶ್ ಸೇರಿ ಹಲವರು ಉಪಸ್ಥಿತರಿದ್ದರು.
ಪತ್ರಕರ್ತರಿಗೆ ಕುಟುಂಬದವರ ಸಹಕಾರ ಇರುವುದರಿಂದಲೇ ಸಮಾಜದಲ್ಲಿ ಅವರು ಸಾಧನೆ ಮಾಡಲು ಸಾಧ್ಯ. ಅದರಲ್ಲೂ ನಿಮ್ಮ ಒತ್ತಡದ ನಡುವೆಯೂ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿರುವುದು ನೋಡಿದರೆ ತುಂಬ ಸಂತಸದ ವಿಷಯವಾಗಿದೆ. ಪತ್ರಕರ್ತರ ಸೇವೆ ಸಮಾಜಕ್ಕೆ ಮಾದರಿ. ಬೆಳಿಗ್ಗೆ ಎದ್ದು ಪತ್ರಿಕೆ ಓದಲಿಲ್ಲ ಎಂದರೆ ಸಮಾಧಾನ ಆಗುವುದಿಲ್ಲ. ದೇಶ ಸೇರಿದಂತೆ ಸ್ಥಳೀಯ ಎಲ್ಲಾ ವಿಚಾರಗಳನ್ನು ಸಂಗ್ರಹಿಸಿ ಸಮಾಜಕ್ಕೆ ಮುಟ್ಟಿಸುವ ಕೆಲಸ ಮಾಡುವ ನಿಮಗೆ ಒಳ್ಳೆಯದಾಗಲಿ.
-ಶ್ರೀಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ











