--Ads--

ದಿನಾಂಕ: 17-07-2026 ಶುಕ್ರವಾರ *ದಕ್ಷಿಣಾಯಣ ಪುಣ್ಯಕಾಲ* : ಸೂರ್ಯನು ನಾಳೆ ಬೆಳಗ್ಗೆ 11.45ಕ್ಕೆ ಮಘಾ ನಕ್ಷತ್ರದಲ್ಲಿ ಕರ್ಕಾಟಕರಾಶಿ ಪ್ರವೇಶ

On: July 16, 2026 5:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ದಿನಾಂಕ: 17-07-2026 ಶುಕ್ರವಾರ *ದಕ್ಷಿಣಾಯಣ ಪುಣ್ಯಕಾಲ* : ಸೂರ್ಯನು ನಾಳೆ ಬೆಳಗ್ಗೆ 11.45ಕ್ಕೆ ಮಘಾ ನಕ್ಷತ್ರದಲ್ಲಿ ಕರ್ಕಾಟಕರಾಶಿ ಪ್ರವೇಶ

ಸಂಕ್ರಮಣದಲ್ಲಿ ಸಂಕ್ರಮಣಕ್ಕಿಂತ ಮೊದಲು 30 ಗಳಿಗೆ ಸಂಕ್ರಮಣ ಪುಣ್ಯಕಾಲವಿರುತ್ತದೆ. ಈ ಸಮಯದಲ್ಲಿ ಸ್ನಾನ, ಪೂಜೆ, ಜಪ, ತಪ ಹಾಗೂ ಅರ್ಹರಿಗೆ ದಾನಾದಿಗಳನ್ನು ಮಾಡಬೇಕು.

ಪುಣ್ಯಕಾಲ *ಗುರುವಾರ ರಾತ್ರಿಯೇ ಆರಂಭಗೊಳ್ಳುವುದರಿಂದ ರಾತ್ರಿ ಆಚರಣೆ ಮಾಡುವಂತಿಲ್ಲ. (ಗ್ರಹಣ ಕಾಲದಲ್ಲಿ ಮಾತ್ರ ರಾತ್ರಿ ಆಚರಣೆ ಉಂಟು, ಉಳಿದಂತೆ ಸಂಕ್ರಮಣಕ್ಜೆ ಅನ್ವಯಿಸುವುದಿಲ್ಲ).
ಆದ್ದರಿಂದ 17 ರಂದು ಸೂರ್ಯೋದಯದಿಂದ ಆರಂಭಗೊಂಡು 11-45ರವರೆಗೆಲ ದಕ್ಷಿಣಾಯನ ಪುಣ್ಯಕಾಲ* ಇರುತ್ತದೆ.

ಈ ಪುಣ್ಯಕಾಲದ ವೇಳೆ ಜಪ, ತಪ, ತಿಲ ತರ್ಪಣಾದಿಗಳ ಆಚರಣೆ ಮೂಲಕ ವಿಜ್ಞಾನ ಹಾಗೂ ಧರ್ಮ ಮಿಳಿತಗೊಳ್ಳುವ ಈ ಒಳ್ಳೆಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸೋಣ.

ಜನವರಿ 14 ರಂದು ಮಕರರಾಶಿ ಪ್ರವೇಶಿಸಿದ್ದ ಸೂರ್ಯ, ಆರು ತಿಂಗಳಿಂದ ಉತ್ತರ ದಿಕ್ಕಿನತ್ತ ಸಾಗಿದ್ದ. ಈಗ ಕರ್ಕಾಟಕ ಸಂಕ್ರಮಣದ ದಿನದಿಂದ ತನ್ನ ಪಥವನ್ನು ಬದಲಿಸಿ ದಕ್ಷಿಣದತ್ತ ಮತ್ತಾರು ತಿಂಗಳು ಸಾಗುತ್ತಾನೆ. ಹಾಗಾಗಿ ಈ ದಿನದಿಂದ *ದಕ್ಷಿಣಾಯನ* ಕಾಲ ಆರಂಭವಾಗುತ್ತದೆ.

ಸ್ವಾಭಾವಿಕವಾಗಿ ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಚಾಂದ್ರಮಾನದ ಪ್ರಕಾರ ಚೈತ್ರ, ವೈಶಾಖ ಮುಂತಾದ ರಾಶಿಗಳಲ್ಲಿ ಹಾಗೂ ಸೌರಮಾನದ ಪ್ರಕಾರ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಹಾಗೂ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.
ಹಾಗಾಗಿ ಸೂರ್ಯನಿಗೆ ಸಂಬಂಧಿಸಿದ ಸೌರಮಾನದ ಪ್ರಕಾರ ಆರು ತಿಂಗಳಿಗೊಮ್ಮೆ ಪಥ ಬದಲಿಸುವ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು *ಮಕರ ಸಂಕ್ರಮಣ* ವೆಂತಲೂ. ಮಿಥುನರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುವುದನ್ನು *ಕಟಕ ಸಂಕ್ರಮಣ* ವೆಂತಲೂ ಕರೆಯುತ್ತಾರೆ.
ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಕ್ಕೆ ಸಾಗುವುದನ್ನು *ಉತ್ತರಾಯಣ* ಎಂದು, ಕರ್ಕಾಟಕ ಸಂಕ್ರಮಣದ ನಂತರ *ದಕ್ಷಿಣಾಯನ* ಎಂದೂ ಕರೆಯುತ್ತೇವೆ.

ಧಾರ್ಮಿಕವಾಗಿ ಈ ದಿನದಿಂದ ದೇವತೆಗಳಿಗೆ ರಾತ್ರಿ ಕಾಲ ಆರಂಭ. ಮಾನವರಿಗೆ 360 ದಿನಗಳ ಒಂದು ವರ್ಷ, ದೇವತೆಗಳಿಗೆ ಒಂದು ದಿನಕ್ಕೆ ಸಮ. ಹಾಗಾಗಿ ದೇವತೆಗಳಿಗೆ ಉತ್ತರಾಯಣ ಹಗಲಾದರೆ, ದಕ್ಷಿಣಾಯಣ ರಾತ್ರಿಕಾಲ ಎನ್ನಲಾಗಿದೆ.

ಸಾಮಾನ್ಯವಾಗಿ ಜನವರಿ 14‌ ಅಥವಾ 15 ರಂದು ಉತ್ತರಾಯಣ ಪುಣ್ಯಕಾಲ ಸಂಭವಿಸುತ್ತದೆ. ಆ ದಿನವನ್ನು ಮಕರ ಸಂಕ್ರಮಣವೆಂದು ಸಂಕ್ರಾಂತಿ ಹಬ್ಬವೆಂದು ಹಿಂದೂಗಳೆಲ್ಲರೂ ಆಚರಿಸುತ್ತಾರೆ.
ಅದೇ ರೀತಿ ದಕ್ಷಿಣಾಯನ ಪುಣ್ಯಕಾಲ ಸಾಮಾನ್ಯವಾಗಿ ಜುಲೈ 15, 16 ಅಥವಾ 17ರಂದು ಸಂಭವಿಸುತ್ತದೆ. ಈ ವರ್ಷ ಜುಲೈ 17 ರಂದು ಶುಕ್ರವಾರ ಸಂಕ್ರಮಣ ನಡೆಯುತ್ತಿದೆ. ಹೆಚ್ಚಾಗಿ ಈ ದಕ್ಷಿಣಾಯನ ಪುಣ್ಯಕಾಲವನ್ನು ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ, ಸಾಮಾನ್ಯ ಜನರು ಆಚರಿಸುವುದು ಕಡಿಮೆ.

ಈ ದಿನ ಪರ್ವ ಪುಣ್ಯಕಾಲದ ವೇಳೆ ಅಂದರೆ ಬೆಳಗ್ಗೆ ಸೂರ್ಯೋದಯದಿಂದ ಆರಂಭಿಸಿ 11-45 ವರೆಗೆ ವಿಶೇಷವಾಗಿ ಸ್ನಾನ ಮಾಡಿ ಇಷ್ಟದೇವರ ಜಪ ತಪಾದಿಗಳನ್ನು ನಡೆಸಬಹುದು. ಅಧಿಕಾರವುಳ್ಳವರು( ತಂದೆಯಿಲ್ಲದವರು) ಪರ್ವಕಾಲದ ಅಂಗವಾಗಿ ಗತಿಸಿದ ಪಿತೃಗಳಿಗೆ ತಿಲತರ್ಪಣ ನೀಡಬೇಕು. ಇದು ಸಾಧ್ಯವಿಲ್ಲದವರು ಅರ್ಹರಿಗೆ ದಾನ ನೀಡಬಹುದು. ಶ್ರೀಹರಿಯನ್ನು ಮನಸಾ ಸ್ಮರಿಸಿ ಗತಿಸಿದ ಪಿತೃಗಳಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಬಹುದು.
ಉತ್ತರಾಯಣದಲ್ಲಿ ಮದುವೆ, ಗೃಹ ನಿರ್ಮಾಣ, ಗೃಹಪ್ರವೇಶ, ಉಪನಯನ ಇತ್ಯಾದಿ ಶುಭಕಾರ್ಯಗಳನ್ನು ನಡೆಸುತ್ತೇವೆ. ಆದರೆ ದಕ್ಷಿಣಾಯನ ಪುಣ್ಯ ಸಂಚಯನ ಕಾಲ ಎನ್ನುತ್ತೇವೆ. ಈ ಕಾಲದಲ್ಲಿ ವ್ರತಗಳ ಆಚರಣೆ ಹೆಚ್ಚು. ಚಾತುರ್ಮಾಸ್ಯ ಆಚರಣೆಯ ಜತೆ ಹಬ್ಬ ಹರಿದಿನಗಳ ಸಡಗರವೂ ಜೋರು.
ಪುಣ್ಯ ಸಂಚಯನದ ಜತೆ, ವೈಜ್ಞಾನಿಕ ಕಾರಣವೂ ಇದೆ. ದಕ್ಷಿಣಾಯನ ಬಹುತೇಕ ಮಳೆಗಾಲ. ಜೋರು ಮಳೆ, ಜಿಟಿಪಿಟಿ ಮಳೆ, ಸೋನೆಮಳೆ ಸದಾ ಒಂದಿಲ್ಲೊಂದು ಸಮಯದಲ್ಲಿ ಸುರಿಯುತ್ತದೆ. ಆಹ್ಲಾದಕರ ವಾತಾವರಣವಿದ್ದರೂ, ಚಳಿ ಹೆಚ್ಚು. ಮಳೆಯಲ್ಲಿ ನೆನೆಯುವ ಹಾಗೂ ಚಳಿಯಲ್ಲಿ ನಡಗುವ ವ್ಯಕ್ತಿಗೆ ಬಿಸಿ ಬಿಸಿ ಆಹಾರ ಬೇಕು. ಸೂರ್ಯನ ಶಾಖದ ತಾಪವೂ ಕಡಿಮೆಯಿರುವುದರಿಂದ, ಬಿಸಿಯಾದ, ಸತ್ವಭರಿತ ಆಹಾರ ಸೇವನೆ ಚಳಿಯ ತಾಡನದಿಂದ ನಮ್ಮನ್ನು ಸಂರಕ್ಷಿಸುತ್ತದೆ. ಹಾಗಾಗಿ ಹಿರಿಯರು ಹಲವಾರು ವ್ರತಗಳನ್ನು ಕಡ್ಡಾಯವಾಗಿ ಆಚರಿಸುವಂತೆ ನಿಯೋಜಿಸಿದ್ದಾರೆ.

ಬೇಸಿಗೆಯಲ್ಲಿ ನಮ್ಮ ಮೈ ಚರ್ಮವನ್ನು ಸಂರಕ್ಷಿಸಿಕೊಳ್ಳಲು ಮಕರಸಂಕ್ರಾಂತಿ ವೇಳೆ ಎಳ್ಳು ತಿನ್ನುತ್ತೇವೆ. ಹಾಗೆಯೇ ಮಳೆಗಾಲದಲ್ಲಿಯೂ ದೇಹದ ಕಾಂತಿ ಕಾಪಿಡಲು ಎಳ್ಳಿನ ಬಳಕೆಯಿದೆ. ನಾಗರ ಪಂಚಮಿಯಂದು ಎಳ್ಳುಂಡೆ, ಗಣಪನ ಹಬ್ಬದಲ್ಲಿ ಸಿಹಿಕಡುಬು, ಹೀಗೆ ಎಳ್ಳಿನ ಬಳಕೆ ಉಂಟು. ಆಯಾ ವ್ರತಗಳಂದು ವಿಶೇಷ ಭಕ್ಷ್ಯಗಳನ್ನು ಭುಂಜಿಸುವುದು ವಾಡಿಕೆ. ಒಂದೊಂದು ವ್ರತ (ಹಬ್ಬ) ಕ್ಕೆ ಒಂದೊಂದು ರೀತಿಯ ಅಡುಗೆ, ಇದು ನಮ್ಮ ಆರೋಗ್ಯ ಕಾಪಾಡುತ್ತದೆ.
ವೈಜ್ಞಾನಿಕ ಹಿನ್ನೆಲೆಯನ್ನು ಧಾರ್ಮಿಕ ನೆಲೆಗಟ್ಟಲ್ಲಿ ನಮಗೆ ಬಳುವಳಿಯಾಗಿ ನೀಡಿದ ಋಷಿ ಮುನಿಗಳಿಗೆ ನಮೋ ಎನ್ನೋಣ. ಹಾಗೆಯೇ ಇಂತಹ ಸುಸಂದರ್ಭದಲ್ಲಿ ಆಚರಣೆ ಮೂಲಕ ನಮ್ಮ ಆರೋಗ್ಯ ಕಾಪಿಡುವ ಕೆಲಸ ಮಾಡೋಣ.

ಶ್ರೀಮದ್ ರಾಘವೇಂದ್ರ ತೀರ್ಥ ಗುರುವಾಂತರ್ಗತ, ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಧರ ನಾಮಕ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನು ಅನುಗ್ರಹಿಸಲಿ.

ಶ್ರೀಕೃಷ್ಣಾರ್ಪಣಮಸ್ತು ….🙏🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಛಲ ಬಿಡದ ಲಕ್ಷ್ಮವ್ವ: 116ರ ಹರೆಯದಲ್ಲೂ ಅಲಿಪಿರಿ ಮಾರ್ಗದ 3,550 ಮೆಟ್ಟಿಲು ಹತ್ತಿ ತಿರುಮಲ ತಲುಪಿದ ಕರ್ನಾಟಕದ ಶತಾಯುಷಿ!

ಚೌಡಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ಗಂಗಾದೇವಿ ದೇವಾಲಯದ ಅಭಿವೃದ್ಧಿಗೆ  ಧನಸಹಾಯ  ಮಾಡಿದ  ಶ್ರೀ ನಿಸರ್ಗ ನಾರಾಯಣಸ್ವಾಮಿ 

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ  ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಬಿ ಬಸವರಾಜು 

ಶ್ರೀಸೋಮೇಶ್ವರಸ್ವಾಮಿ ಜೀರ್ಣೋದ್ದಾರ ಮತ್ತು ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಶ್ರೀಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ, ಮಂಡಲಪೂಜೆ

ಆದ್ದೂರಿಯಾಗಿ ನಡೆದ ಶ್ರೀ ಓಂಶಕ್ತಿ ಅಮ್ಮನವರ ವಾರ್ಷಿಕೋತ್ಸವ