ವಿಜಯ ದರ್ಪಣ ನ್ಯೂಸ್….
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿರೋಧಿಸಿ ಕನ್ನಡಾಂಬೆ ರಕ್ಷಣ ವೇದಿಕೆ ಮೈಸೂರು ಹೃದಯವಂತ ಕನ್ನಡಿಗರ ಬಳಗ ವತಿಯಿಂದ ಪ್ರತಿಭಟನೆ

ತಾಂಡವಪುರ ಜುಲೈ 16: ಮೈಸೂರು ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಕಂಬಳ ಸ್ಪರ್ಧೆಯನ್ನು ಆಯೋಜಿಸಿರುವುದನ್ನು ವಿರೋಧಿಸಿ ಇಂದು ಕನ್ನಡಾಂಬೆ ರಕ್ಷಣ ವೇದಿಕೆ ಹಾಗೂ ಮೈಸೂರು ಹೃದಯವಂತ ಕನ್ನಡಿಗರ ಬಳಗದ ವತಿಯಿಂದ ಕಂಬಳ ಆಯೋಜನೆಗೆ ನಿಗದಿಪಡಿಸಿರುವ ಸ್ಥಳದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡಾಂಬೆ ರಕ್ಷಣ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ಅವರು, “ನಮಗೆ ಕಂಬಳ ಅಥವಾ ಕರಾವಳಿ ಭಾಗದ ಜನಪದ ಕ್ರೀಡೆಯ ವಿರುದ್ಧ ಯಾವುದೇ ವಿರೋಧವಿಲ್ಲ. ಕರಾವಳಿ ಭಾಗದ ಸಂಸ್ಕೃತಿ ಅವರಿಗೆ ಹೇಗೆ ಹೆಮ್ಮೆಯೋ, ಅದೇ ರೀತಿ ಮೈಸೂರಿನ ದಸರಾ, ಜಂಬೂಸವಾರಿ ಹಾಗೂ ಇಲ್ಲಿನ ಸಾಂಸ್ಕೃತಿಕ ಪರಂಪರೆ ನಮಗೆ ಹೆಮ್ಮೆ. ಎರಡೂ ಸಂಸ್ಕೃತಿಗಳಿಗೆ ತಮ್ಮದೇ ಆದ ವೈಶಿಷ್ಟ್ಯವಿದೆ. ಆದ್ದರಿಂದ ಮೈಸೂರು ದಸರಾದಂತಹ ಐತಿಹಾಸಿಕ ಉತ್ಸವದಲ್ಲಿ ಮೈಸೂರಿನ ಪರಂಪರೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಬೇಕು” ಎಂದು ಹೇಳಿದರು.
ಸುಮಾರು ಕೋಟಿ ವೆಚ್ಚದಲ್ಲಿ ಕಂಬಳ ಆಯೋಜನೆ ಮಾಡುವ ಬದಲು, ಆ ಹಣವನ್ನು ರಾಜ್ಯದ ರೈತರ ಕಲ್ಯಾಣಕ್ಕೆ, ಕೃಷಿ ಅಭಿವೃದ್ಧಿಗೆ, ಕುಸ್ತಿ ಸೇರಿದಂತೆ ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಹಾಗೂ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಕಲಾವಿದರಿಗೆ ಹೆಚ್ಚಿನ ಗೌರವಧನ ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬಳಸಬೇಕು ಎಂದು ಅವರು ಒತ್ತಾಯಿಸಿದರು.
ನಾಲ್ಕು ಶತಮಾನಗಳಿಗೂ ಅಧಿಕ ಇತಿಹಾಸ ಹೊಂದಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮತ್ತು ಜಂಬೂಸವಾರಿ ತನ್ನದೇ ಆದ ವೈಭವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದೆ. ಈ ಪರಂಪರೆಯನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸುವ ಮೂಲಕ ದಸರಾ ಮಹೋತ್ಸವದ ಗೌರವವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಡಿಪಿಕೆ ಪರಮೇಶ್ವರು ಅವರು, “ಯಾವುದೇ ಕಾರಣಕ್ಕೂ ಮೈಸೂರು ದಸರಾದಲ್ಲಿ ಕಂಬಳಕ್ಕೆ ಅವಕಾಶ ನೀಡಬಾರದು. ಮೈಸೂರಿನ ಇತಿಹಾಸ ಮತ್ತು ಸಂಸ್ಕೃತಿ ವಿಭಿನ್ನವಾಗಿದೆ. ಜಗತ್ತಿನ ನಾನಾ ಭಾಗಗಳಿಂದ ಜನರು ಅಂಬಾರಿಯ ಮೇಲೆ ವಿರಾಜಮಾನವಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಜಂಬೂಸವಾರಿಯನ್ನು ವೀಕ್ಷಿಸಲು ಬರುತ್ತಾರೆ; ಕಂಬಳ ವೀಕ್ಷಿಸಲು ಅಲ್ಲ. ಸರ್ಕಾರ ಜನರ ಭಾವನೆಗಳಿಗೆ ವಿರುದ್ಧವಾಗಿ ಯಾವುದೇ ಕಾರ್ಯಕ್ರಮಗಳನ್ನು ಹೇರಬಾರದು. ಜನಾಭಿಪ್ರಾಯಕ್ಕೆ ಗೌರವ ನೀಡಿ ಮೈಸೂರು ದಸರಾವನ್ನು ನಮ್ಮದೇ ಆದ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಬೇಕು” ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಮೈಸೂರು ಹೃದಯವಂತ ಬಳಗದ ಅಧ್ಯಕ್ಷ ಡಿಪಿಕೆ ಪರಮೇಶ್, ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ರಾಜಶೇಖರ್, ಹರೀಶ್, ಸೋಮು ,ಕುಮಾರ್, ಡಾಬಾ ಸೋಮಣ್ಣ , ರಘು, ಕಬಿನಿ ಸುರೇಶ್, ದಿನೇಶ್, ಮತ್ತು ಕಾರ್ಯಕರ್ತರು ಭಾಗವಹಿಸಿ, ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.











