ವಿಜಯ ದರ್ಪಣ ನ್ಯೂಸ್…..
ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತೇ : ಎಚ್.ಸಿ.ಮಹದೇವಪ್ಪ

ತಾಂಡವಪುರ ಜೂನ್ 20‘ನಾನು ಹಿಂದೆಯೂ ಫಸ್ಟ್, ಈಗಲೂ ಫಸ್ಟ್. ಸಚಿವ ಸ್ಥಾನ ಸಿಕ್ಕಿಲ್ಲವೆಂದಾಕ್ಷಣಕ್ಕೆ ನಾನು 2ನೇ ದರ್ಜೆ ನಾಯಕನಲ್ಲ. ಯಾವಾಗ ಏನಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಶಾಸಕ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಅವರು ಎಂಎಲ್ಸಿ ಚುನಾವಣೆ ಮುಗಿದ ಬಳಿಕ ಮೈಸೂರಿಗೆ ಶುಕ್ರವಾರ ಆಗಮಿಸಿ ಜಲದರ್ಶಿನಿಯಲ್ಲಿ ತಮ್ಮನ್ನು ಭೇಟಿಯಾಗಿ, ಸಚಿವ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದಲಿತ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೊದಲ ಹಂತದ ನಾಯಕರಾದ ತಮಗೆ ಮೊದಲ ಹಂತದ ಸಚಿವ ಸ್ಥಾನ ಸಿಗದಿರುವ ಕುರಿತು ಮೇಲಿನಂತೆ ಪ್ರತಿಕ್ರಯಿಸಿದರು.
ಎಲ್ಲದಕ್ಕೂ ಲೆಕ್ಕಾಚಾರ ಇರುತ್ತದೆಂದರು. ಇನ್ನೂ ಕೆಲವರು ಮಂತ್ರಿ ಸ್ಥಾನ ಕೇಳುತ್ತಿರುವ ಕುರಿತು ಪ್ರತಿಕ್ರಯಿಸಿ, ‘ನಾವು ಅತ್ತು ಕರೆದು, ಬೇಡಿ ಮಂತ್ರಿ ಪದವಿ ತೆಗೆದುಕೊಳ್ಳುವುದಿಲ್ಲವೆಂದರು. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಇರುವುದರಿಂದಲೇ ಸ್ಥಾನ ತಪ್ಪಿದಿಯಾ ಎಂಬ ಪ್ರಶ್ನೆಗೆ ಅಂತ ಯಾವುದೇ ವಾತಾವರಣ ಇಲ್ಲ. ನಾವೆಲ್ಲ ಇಷ್ಟು ಗಟ್ಟಿಯಾಗಿರುವುದು ಅವರ ಬಣದಲ್ಲಿರುವ ಕಾರಣಕ್ಕೆ ಎಂದರು.
ಸಂವಿಧಾನ, ಪ್ರಜಾಪ್ರಭುತ್ವ ದ ಬಲವರ್ದನೆಗೆ ಸಂಘಟನೆಗಳ ಜತೆಗೆ ಸೇರಿ ಕೆಲಸ ಮಾಡಿದ್ದವನಾಗಿದ್ದೇನೆ. ಮನೆ ಮನೆ ಸಂವಿಧಾನದ ಪೀಠಿಕೆ ತಲುಪಿಸುವ ಕೆಲಸ ಮಾಡುತ್ತೇನೆಂದರು. ಇನ್ನೂ ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಯಿಸಿ, ಇಂತಹ ಸಮಯದಲ್ಲಿ ಯಾಕೆ ದೂರು ನೀಡಿದ್ದಾರೆಂಬುದು ಗೊತ್ತಿಲ್ಲ. ಕೆಲವರು ನನ್ನ ವಿರುದ್ಧ ರಾಜ್ಯಪಾಲರಿಗೆ ಆಧಾರರಹಿತ ದೂರು ನೀಡಿದ್ದಾರೆ. 40 ವರ್ಷದ ರಾಜಕೀಯದಲ್ಲಿ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದಿನಿಂದ ನನ್ನ ಹೋರಾಟ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಯಿಸಿ, ಜೆಡಿಎಸ್ ಸಿದ್ಧಾಂತ ರಹಿತ ಪಕ್ಷ ಜೆಡಿಎಸ್ ಪಕ್ಷ ಸ್ಥಾಪನೆಯಾದಾಗ ನಾವೆಲ್ಲ ಇದ್ದೆವು. ಈಗ ಜೆಡಿಎಸ್ ಯಾವ ಸಿದ್ಧಾಂತವೂ ಇಲ್ಲ, 2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
‘ದಲಿತ ಸಂಘಟನೆಗಳ ಮುಖಂಡರು ನನ್ನ ಪರವಾಗಿ ಎಲ್ಲಾ ಕಡೆಯೂ ಮಾತನಾಡಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲರೂ ಬಹಳ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಸ್ವಲ್ಪ ಬೇಸರದಿಂದ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಎಲ್ಲವೂ ಮನವರಿಕೆಯಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ನನ್ನ ಮಗ ಇದ್ದಂತೆ. ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ವೈಯಕ್ತಿಕವಾಗಿ ಸಂತೋಷ ತಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ನಾನು ಹಾಗೂ ಸಿದ್ದರಾಮಯ್ಯ ಮಾಡಿದ್ದ ಹೋರಾಟವನ್ನೇ ಸುನೀಲ್ ಬೋಸ್ ಮತ್ತು ಡಾ ಯತೀಂದ್ರ ಮುಂದುವರಿಸುತ್ತಿದ್ದಾರೆ’ ಎಂದರು.
ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ: ದಲಿತ ಮುಖಂಡರು
: ನಿಮಗೆ ಸಚಿವ ಸ್ಥಾನ ಸಿಗದಿರುವುದು ಕಾಂಗ್ರೆಸ್ ದಲಿತರಿಗೆ ಮಾಡಿದ ಅನ್ಯಾಯವಾಗಿದೆ. ನಿಮಗೆ ಸ್ಥಾನ ಕೊಡದಿದ್ದರೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ದಲಿತ ಮುಖಂಡರು ಮಹದೇವಪ್ಪರ ಎದುರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.
‘ಸಿದ್ದರಾಮಯ್ಯ ನಿಮ್ಮ ಪರವಾಗಿ ಗಟ್ಟಿ ಧ್ವನಿ ಎತ್ತಬೇಕಿತ್ತು. ಅವರ ಮೌನ ಬೇಸರ ತರಿಸಿದೆ. ಅನ್ಯಾಯವನ್ನು ಹೈಕಮಾಂಡ್ ಸರಿಪಡಿಸಬೇಕು. ಯತೀಂದ್ರ ಅವರಿಗೆ ಸ್ಥಾನ ಕೊಡಿಸಲಿ, ಭೈರತಿ ಸುರೇಶ್ ಅವರಿಗೆ ಕೊಡಿಸಿದರೇಕೆ?’ ಎಂದು ಮುಖಂಡರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಮಾಜಿ ಸಚಿವ ಮಹದೇವಪ್ಪ ಎಲ್ಲವೂ ಮುಗಿದು ಹೋಗಿಲ್ಲ, ಇನ್ನೂ ಸಮಯ ಇದೆ. ಯಾರೂ ಏನೂ ಬೇಸರ ಮಾಡಿಕೊಳ್ಳಬೇಡಿ. ಸಿದ್ದರಾಮಯ್ಯ ನಮ್ಮ ಪರವಾಗಿ ಮಾತನಾಡಿದ್ದಾರೆ. ‘ನಾನು– ಸಿದ್ದರಾಮಯ್ಯ ಯಾವತ್ತೂ ಬೇರೆ ಬೇರೆ ಅಲ್ಲ. ನನ್ನ ಪರವಾಗಿ ಅವರು, ಅವರ ಪರವಾಗಿ ನಾನು ಇರುತ್ತೇವೆ. ನಮ್ಮದು ಸುದೀರ್ಘ 40 ವರ್ಷಗಳ ಸಂಬಂಧ. ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿಲ್ಲ’ ಎಂದರು.










