ವಿಜಯ ದರ್ಪಣ ನ್ಯೂಸ್….
ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದಲ್ಲಿ ರಕ್ತದಾನ ಶಿಬಿರ

ಮಂಚೇನಹಳ್ಳಿ(ಚಿಕ್ಕಬಳ್ಳಾಪುರ)
ವಿದ್ಯಾರ್ಥಿ ಮತ್ತು ಯುವಜನರು ಓದು ಬರಹ, ಉದ್ಯೋಗ, ಬದುಕು ಕಟ್ಟಿಕೊಳ್ಳುವ ಆತುರದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜತೆಗೆ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿ ತಿಳಿಸಿದರು.
ಮಂಚೇನಹಳ್ಳಿ ತಾಲೂಕು ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ವಾಲಂಟರಿ ಬ್ಲಡ್ ಸೆಂಟರ್, ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಬೆಲೆ ಕಟ್ಟಬಹುದು. ಜಾಗತಿಕವಾಗಿ ಪ್ರತಿ ಸೇವೆಗೂ ಬೆಲೆ ನಿಗಧಿಯಾಗಿದೆ. ಆದರೆ ಜನ್ಮ ನೀಡುವ ತಂದೆ ತಾಯಿಗೆ, ಹಸಿದವರಿಗೆ ಅನ್ನ ಹಾಕುವ, ತುರ್ತು ಪರಿಸ್ಥಿತಿಯಲ್ಲಿ ರಕ್ತ ಕೊಡುವ ಮಾನವೀಯತೆಯ ಸಹಾಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ವಿಜ್ಞಾನ ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರೆದರೂ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸಲು ಇನ್ನೂ ಸಾಧ್ಯವಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು ಒಬ್ಬರಿಂದ ಒಬ್ಬರು ಪಡೆಯಬೇಕಿದೆ. ಆದ್ದರಿಂದ ವಿದ್ಯಾರ್ಥಿ ಮತ್ತು ಯುವಜನರು ಸೇರಿದಂತೆ ಆರೋಗ್ಯವಂತ ಎಲ್ಲರೂ ರಕ್ತದಾನವನ್ನು ನಿಯಮಿತವಾಗಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತನಾಡಿ, ರಕ್ತದಾನವು ಎಲ್ಲ ದಾನಗಳಿಗಿಂತಲೂ ಶ್ರೇಷ್ಠದಾನವಾಗಿದೆ. ಎಲ್ಲರಿಗೂ ರಕ್ತದಾನ ಮಾಡುವ ಸದವಕಾಶ ದೊರೆಯದು. ದೊರೆತಾದ ರಕ್ತದಾನ ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ಬಹಳಷ್ಟು ತಪ್ಪು ಕಲ್ಪನೆಗಳು ಇವೆ. ಆರೋಗ್ಯವಂತ ವಯಸ್ಕರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಯಾವುದೆ ರೀತಿಯ ಅಡ್ಡಪರಿಣಾಮಗಳು ಸಂಭವಿಸುವುದಿಲ್ಲ. ಬದಲಿಗೆ ತಮ್ಮ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ಮಾಡಲಾಯಿತು, ೧೨೨ ಯೂನಿಟ್ ರಸ್ತ ಸಂಗ್ರವಾಯಿತು. ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿ, ಮಾವು ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಸಮಾಜ ಸೇವಕ ಸಂದೀಪ್ ರೆಡ್ಡಿ, ಚಿಮುಲ್ ಅಧ್ಯಕ್ಷ ಭರಣಿ ವೆಂಕಟೇಶ್, ಮರಳುಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಆನಂದ್, ಹಾಗೂ ದೇವನಹಳ್ಳಿ ಹಾಲು ಒಕ್ಕೂಟದ ನಿರ್ದೇಶಕ ಮುನಿರಾಜು. ಯಲಹಂಕದ ಹಾಲು ಒಕ್ಕೂಟದ ನಿರ್ದೇಶಕ ಸತೀಶ್, ಸಮಾಜ ಸೇವಕ ಹರೀಶ್‌ರೆಡ್ಡಿ, ದೇವಾಲಯದ ನೂರಾರು ಭಕ್ತರು ಹಾಜರಿದ್ದರು.









