ವಿಜಯ ದರ್ಪಣ ನ್ಯೂಸ್…..
ಜಿಕೆವಿಕೆ ವಿದ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳ ಪ್ರದರ್ಶನ

ಶಿಡ್ಲಘಟ್ಟ : ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆತು ಗ್ರಾಮದ ಸಾಮಾಜಿಕ ವ್ಯವಸ್ಥೆ, ಕೃಷಿ ಚಟುವಟಿಕೆಗಳು, ಸಂಪನ್ಮೂಲಗಳು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಅರಿಯುತ್ತಿರುವುದು ಶ್ಲಾಘನೀಯ ಎಂದು ಎಂದು ಕೆಎಂಎಫ್ ಮಾಜಿ ನಿರ್ದೇಶಕ ಶ್ರೀನಿವಾಸ ರಾಮಯ್ಯ ತಿಳಿಸಿದರು.
ತಾಲ್ಲೂಕಿನ ಕೆ.ಮುತ್ತಕದಹಳ್ಳಿ ಗ್ರಾಮದ ಭಜನಾ ಮಂದಿರದ ಬಳಿ ನಡೆದವಬೆಂಗಳೂರು ಕೃಷಿ ವಿಶ್ವವಿದ್ಯಾಲಯ (GKVK) ಅಂತಿಮ ವರ್ಷದ ವಿದ್ಯಾರ್ಥಿಗಳು ಕೈಗೊಂಡಿರುವ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಕೃಷಿ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಅರಿಯುವ ಉದ್ದೇಶದಿಂದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳನ್ನು ಗ್ರಾಮಸ್ಥರ ಮುಂದೆ ಪ್ರದರ್ಶಿಸಿ, ರೈತರೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಮಾಜಿಕ ನಕ್ಷೆಯಲ್ಲಿ ಗ್ರಾಮದ ಮನೆಗಳು, ಕುಟುಂಬಗಳ ಹಂಚಿಕೆ, ಶಾಲೆ, ದೇವಾಲಯ, ಅಂಗನವಾಡಿ, ಕುಡಿಯುವ ನೀರಿನ ಮೂಲ ಸೇರಿದಂತೆ ವಿವಿಧ ಸಾಮಾಜಿಕ ಸಂಪನ್ಮೂಲಗಳನ್ನು ಗುರುತಿಸಲಾಗಿದೆ ,ಋತುಮಾನ ನಕ್ಷೆ ಮೂಲಕ ವಿವಿಧ ಋತುಗಳಲ್ಲಿ ಹವಾಮಾನ ಪರಿಸ್ಥಿತಿ, ಮಳೆಯ ಪ್ರಮಾಣ, ಬಿತ್ತನೆ ಮತ್ತು ಕೊಯ್ಲಿನ ಅವಧಿ, ನೀರಿನ ಲಭ್ಯತೆ ಹಾಗೂ ಕೃಷಿ ಚಟುವಟಿಕೆಗಳಲ್ಲಾಗುವ ಬದಲಾವಣೆಗಳನ್ನು ಗುರುತಿಸಲಾಗಿದೆ. ಈ ಮಾಹಿತಿ ಆಧರಿಸಿ ರೈತರು ಕಾಲಮಾನಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡಿಕೊಂಡು ಕೃಷಿಯಲ್ಲಿನ ಅಪಾಯ ಕಡಿಮೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಸಲಹೆ ನೀಡಿದರು.
ಗ್ರಾಮದ ಪ್ರಮುಖ ರಸ್ತೆಗಳು, ಸಮೀಪದ ಆಸ್ಪತ್ರೆ, ಗ್ರಾಮ ಪಂಚಾಯಿತಿ, ಗೂಡು ಮಾರುಕಟ್ಟೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳನ್ನು ನಕ್ಷೆಯಲ್ಲಿ ಗುರುತಿಸಿ, ಅವುಗಳ ಅಂತರದ ಮಾಹಿತಿಯನ್ನೂ ಗ್ರಾಮಸ್ಥರಿಗೆ ನೀಡಲಾಯಿತು. ಗ್ರಾಮದ ಪರಿಸರಕ್ಕೆ ಅನುಗುಣವಾಗಿ ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ನೈಸರ್ಗಿಕ ವಸ್ತುಗಳನ್ನು ಬಳಸಿ ವಿದ್ಯಾರ್ಥಿಗಳು ಆಕರ್ಷಕ ಮಾದರಿಗಳನ್ನೂ ನಿರ್ಮಿಸಿದ್ದರು.
ಕಾಲಮಾನ, ಹವಾಮಾನ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಏರಿಳಿತಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬೆಳೆ ಪದ್ಧತಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳು ರೈತರಿಗೆ ಸಲಹೆ ನೀಡಿದರು.
ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯದೆ ಬೆಳೆ ಪರಿವರ್ತನೆ ಪದ್ಧತಿ ಅನುಸರಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡುವುದರ ಜತೆಗೆ ರೋಗ ಮತ್ತು ಕೀಟಬಾಧೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಾದ ಪೂಜಾ,ಮಾಳವಿಕ, ಲಕ್ಷ್ಮೀ,ರಾಹುಲ್, ಮಾದೇಶ, ಪ್ರಜ್ವಲ್, ಸಂದೀಪ್, ಪವನ್ ಹಾಗೂ ಗ್ರಾಮಸ್ಥರಾದ ಕೃಷ್ಣಪ್ಪ,
ಪ್ರಕಾಶ್, ಮಂಜುನಾಥ್,ಕೇಶವ, ರಾಜಣ್ಣ, ಮುನಿಕೃಷ್ಣ
ಮತ್ತಿತರರು ಪಾಲ್ಗೊಂಡಿದ್ದರು.










