ವಿಜಯ ದರ್ಪಣ ನ್ಯೂಸ್……
ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ !
ಅರ್ಚಕರು ಮತ್ತು ಪುರೋಹಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ : ತಹಸೀಲ್ದಾರ್ ಗಗನಸಿಂಧು

ಶಿಡ್ಲಘಟ್ಟ : ಅರ್ಚಕರು ಮತ್ತು ಪುರೋಹಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಂತ, ಹಂತವಾಗಿ ಕ್ರಮ ,ದೇವಾಲಯಗಳ ಸೌಲಭ್ಯಗಳನ್ನು ಸುಧಾರಿಸಲು ಹಾಗೂ ಆಡಳಿತಾತ್ಮಕ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು
ಎಂದು ತಹಸೀಲ್ದಾರ್ ಗನಸಿಂಧು ಭರವಸೆ ನೀಡಿದರು.
ನಗರದ ಕೋಟೆ ವೃತ್ತದಲ್ಲಿನ ಶ್ರೀಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, ಆಗಮಿಕರ ಮತ್ತು ಉಪಾಧಿವಂತರ ತಾಲ್ಲೂಕು ಶಾಖೆಯಿಂದ ಹಮ್ಮಿಕೊಂಡಿದ್ದ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿ, ಆಸ್ತಿಗಳ ರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ದೇವಾಲಯಗಳಿಗೆ ಸೇರಿದ ಜಾಗಗಳ ಒತ್ತುವರಿ ತೆರವು, ದೇವಾಲಯಗಳ ಅಭಿವೃದ್ಧಿ ಕಾಮಗಾರಿ, ಆಸ್ತಿಗಳ ರಕ್ಷಣೆ, ಅರ್ಚಕರು ಮತ್ತು ಪುರೋಹಿತರಿಗೆ ಗುರುತಿನ ಚೀಟಿ ವಿತರಣೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಹಲವು ದೇವಸ್ಥಾನಗಳು ಶಿಥಿಲವಾಗಿವೆ, ಕೆಲವು ಕಡೆ ಮಳೆ ಬಂದರೆ ಸೋರುತ್ತವೆ. ಅವುಗಳ ದುರಸ್ತಿ ಆಗಬೇಕಿದೆ. ಕೆಲವೆಡೆ ಭಕ್ತರಿಗೆ ಶೌಚಗೃಹ ಮತ್ತು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಸಭೆಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಕಸಬಾ ರಾಜಸ್ವ ನಿರೀಕ್ಷಕ ಕೆ.ಎನ್.ವೇಣುಗೋಪಾಲ್,ಅಮರೇಂದ್ರ, ಬಿ.ಶಶಿಧರ್, ಶಂಕರ್ ಪೂಜಾರ್, ಮುಜರಾಯಿ ಇಲಾಖೆ ಗುಮಾಸ್ತ ಅಂಬರೀಶ್, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ವಿ.ಸತ್ಯನಾರಾಯಣಚಾರ್ ,
ಕಾರ್ಯದರ್ಶಿ ಎಸ್.ಸತ್ಯನಾರಾಯಣರಾವ್, ಖಜಾಂಚಿ ವೈ.ಎನ್.ದಾಶರಥಿ, ನಿರ್ದೇಶಕರಾದ ರಾಮಮೂರ್ತಿ, ಬಿ.ಜನಾರ್ದನ್, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.









