ವಿಜಯ ದರ್ಪಣ ನ್ಯೂಸ್….
ದಿನದ ಸುಭಾಷಿತಗಳಲ್ಲಿ ಕೆಲವು…..
ಲೇಖನ: ವಿವೇಕಾನಂದ ಎಚ್ ಕೆ
” ಕಲ್ಲು ಇಟ್ಟಿಗೆಗಳಿಂದ ಕಟ್ಟಿರುವ ಗುಡಿ ಗೋಪುರಗಳಿಗಿಂತ, ಚರ್ಚು ಮಸೀದಿಗಳಿಗಿಂತ, ಬೌದ್ಧ ಸ್ತೂಪಗಳಿಗಿಂತ, ಜೈನ ಬಸದಿಗಳಿಗಿಂತ, ಸಿಖ್ ಗುರುದ್ವಾರಗಳಿಗಿಂತ, ಲಿಂಗಾಯತ ಮಠಗಳಿಗಿಂತ ನೆತ್ತರು, ಮಾಂಸದಿಂದ ನಿರ್ಮಾಣವಾಗಿರುವ ಮಾನವನ ಶರೀರವೇ ನಿಜವಾದ ದೇವಾಲಯ…..”
ಮಹಾತ್ಮ ಗಾಂಧಿ. ( ಅವರ ಸಣ್ಣ ಹೇಳಿಕೆಯ ಪರಿಕಲ್ಪನೆಯನ್ನು ಎಲ್ಲಾ ಧರ್ಮಗಳಿಗೂ ಅನ್ವಯಿಸಿ ವಿಸ್ತರಿಸಲಾಗಿದೆ……..)
” ನಂಬಿ ಅನುಭವಿಸುವುದಕ್ಕಿಂತ ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ. ಕುರುಡು ನಂಬಿಕೆಯ ಮೇಲೆ ನಿಂತ ಅನುಭವವೂ ಕುರುಡಾದುದೆ….. ”
ಕುವೆಂಪು.
” ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ…. ”
ಜಿ. ಎಸ್. ಶಿವರುದ್ರಪ್ಪ.
ಪತ್ರಿಕೆಯಲ್ಲಿ ಪ್ರಕಟವಾಗಿರುವ ಕೆಲವು ಸುಭಾಷಿತಗಳನ್ನು ಓದುತ್ತಿರುವಾಗ ಈ ಕ್ಷಣಕ್ಕೂ ಈ ದಾರ್ಶನಿಕರ ಮಾತುಗಳು ಎಷ್ಟು ವಾಸ್ತವವಾದದ್ದು ಮತ್ತು ಪ್ರಸ್ತುತವಾದದ್ದು ಎಂದೆನಿಸಿತು….
ವಸ್ತು ಸಂಸ್ಕೃತಿಯ, ಆಧುನಿಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು, ಧ್ಯಾನಸ್ಥ ಮನಸ್ಥಿತಿಯನ್ನು ಕಳೆದುಕೊಂಡಿರುವ ನಾವು, ಕನಿಷ್ಠ ಸಾಮಾನ್ಯ ಜ್ಞಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅದರ ಪರಿಣಾಮವೇ ಮನಸ್ಸಿನ ನಿರ್ವಾತ ಸ್ಥಿತಿ.
ಸಕಲ ಜೀವರಾಶಿಗಳಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಎಲ್ಲಾ ಜೀವಿಗಳಲ್ಲಿ ನಾಗರಿಕತೆಯನ್ನು ಅಳವಡಿಸಿಕೊಂಡಿರುವ ಸಮಾಜ ಮನುಷ್ಯರದು. ಜಗತ್ತಿನ ಬಹುತೇಕ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಿ, ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಅನುಭವಿಸುತ್ತಿರುವವನು ಮನುಷ್ಯನೇ.
ತನ್ನ ಮನಸ್ಸಿನ ಭಾವನೆಗಳನ್ನು ಸ್ವಚ್ಛಂದವಾಗಿ, ಸ್ವೇಚ್ಛೆಯಾಗಿ ಹೊರಹೊಮ್ಮಿಸುತ್ತ, ಅದರಲ್ಲಿ ತೇಲಾಡಿ, ಅತ್ಯಂತ ಸುಖ ಲೋಲುಪತೆಯಲ್ಲಿ ತೇಲುತ್ತಿರುವುದು ಮನುಷ್ಯನೇ.
ಕುಳಿತಲ್ಲಿ, ನಿಂತಲ್ಲಿ, ನಡೆದಾಡಿದಲ್ಲಿ, ಮಲಗಿದ್ದಲ್ಲಿ ನಮಗೇನು ಬೇಕೋ, ಎಲ್ಲಾ ಅನುಕೂಲಗಳನ್ನು ನಮ್ಮ ಬಳಿಯೇ ಬರುವಂತೆ ಮಾಡಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿರುವವರು ಮನುಷ್ಯರೇ.
ವಿಪರ್ಯಾಸವೆಂದರೆ,
ಇದೇ ಮನುಷ್ಯ ಎಲ್ಲ ಜೀವರಾಶಿಗಳಿಗಿಂತ ಹೆಚ್ಚಾಗಿ ತನ್ನನ್ನು ತಾನೇ ಅಳಿದುಕೊಂಡು, ತನ್ನನ್ನು ತಾನೇ ಟೀಕಿಸಿಕೊಂಡು, ತನ್ನನ್ನು ತಾನೇ ನಂಬದೇ,
ಅತ್ಯಂತ ಅಜ್ಞಾನದಿಂದ,
ತನ್ನನ್ನು ತಾನೇ ನಿಕೃಷ್ಟವಾಗಿ ಭಾವಿಸಿ, ನಿರಾಶೆಯ, ವಿನಾಶದ, ಅಸಹಾಯಕ ಪರಿಸ್ಥಿತಿಗೆ ನೂಕಲ್ಪಡುತ್ತಿರುವವನು ಇದೇ ಮಾನವನೇ.
ಯಾವುದು ಮುಖ್ಯ, ಯಾವುದು ಅಮುಖ್ಯ, ಯಾವುದು ಅಭಿವೃದ್ಧಿ, ಯಾವುದು ವಿನಾಶ ಎಂಬುದನ್ನು ಅರಿಯದೆ ತಾನೇ ಹಣೆದ ಬಲೆಯೊಳಗೆ ಸಿಲುಕಿ ಒದ್ದಾಡುತ್ತಿರುವವನು ಇದೇ ಜೀವಿಯೇ.
ದೇವರು ಧರ್ಮವನ್ನು ಸೃಷ್ಟಿಸಿಕೊಂಡು, ಅದನ್ನೇ ನಂಬಿಕೊಂಡು, ಕೊನೆಗೆ ಆ ನಂಬಿಕೆಯಿಂದಲೇ ಒಬ್ಬರಿಗೊಬ್ಬರು ತಿವಿದುಕೊಂಡು, ತಮ್ಮನ್ನು ತಾವೇ ಕೊಂದುಕೊಳ್ಳುತ್ತಿರುವ ವಿಚಿತ್ರ ಪರಿಸ್ಥಿತಿಗೆ ಬಂದಿರುವುದು ಇದೇ ಮಾನವರು.
ತಮ್ಮೊಳಗಡಗಿರುವ ಅದ್ಭುತ ಮಾನವೀಯತೆಯನ್ನು, ವಿವೇಚನಾ ಶಕ್ತಿಯನ್ನು, ವಿಶೇಷ ಸಾಮರ್ಥ್ಯವನ್ನು ಗುರುತಿಸದೆ ಕೇವಲ ಮನೆ, ಕಾರು, ಬಂಗಲೇ, ಅಧಿಕಾರ, ಪ್ರಶಸ್ತಿ, ಜನಪ್ರಿಯತೆ ಇವುಗಳನ್ನೇ ಯಶಸ್ಸಿನ ಮಾನದಂಡವೆಂದು, ಬದುಕಿನ ಪರಮೋಚ್ಚ ಸಾಧನೆ ಎಂದು ಭ್ರಮಿಸಿ, ಅದನ್ನು ಪಡೆದ ನಂತರವೂ, ಇದೀಗ ತನ್ನೊಳಗೆ ಅಸಹನೆ, ಅತೃಪ್ತಿ, ಅಸಹಿಷ್ಣುತೆ, ಅಸಮಾಧಾನದಿಂದ ನರಳುತ್ತಿರುವವನು ಇದೇ ಮನುಷ್ಯ.
ಎಲ್ಲಿ ನೋಡಿದರಲ್ಲಿ ಹಿಂಸೆ, ಅಪಘಾತ, ಬೆಂಕಿ, ಆತ್ಮಹತ್ಯೆ, ಕೊಲೆ, ಅತ್ಯಾಚಾರ, ಅಪರಾಧ, ಪ್ರತಿಭಟನೆ, ಮುಷ್ಕರ, ಅನಾರೋಗ್ಯ, ಮೋಸ, ವಂಚನೆ, ಕಳ್ಳತನ ಇವುಗಳ ನಡುವೆ ಕಳೆದು ಹೋಗುತ್ತಾ, ನಿಜವಾದ ಜೀವನ ಮೌಲ್ಯವನ್ನೇ ಕಳೆದುಕೊಂಡು ವಿಷಾದದಿಂದ ಆಕಾಶ ನೋಡುತ್ತಿರುವುದು ಇದೇ ಮನುಷ್ಯನೇ.
ಇನ್ನಾದರೂ ತಾಳ್ಮೆಯಿಂದ, ಸರಳತೆಯಿಂದ, ಸಹಜತೆಯಿಂದ, ಒಂದಷ್ಟು ವಿವೇಚನೆ, ವಿವೇಕ, ಬುದ್ಧಿವಂತಿಕೆ ಬೆಳೆಸಿಕೊಂಡು, ಪ್ರಕೃತಿಯೊಡನೆ ಒಡನಾಡುತ್ತಾ ಧ್ಯಾನಸ್ತ ಮನಸ್ಥಿತಿಗೆ ಬನ್ನಿ. ಅದೊಂದು ಅದ್ಭುತ ಲೋಕ. ಎಲ್ಲಾ ಕುಟುಂಬ, ಸಮಾಜ, ವಾಸ್ತವದ ವ್ಯಾವಹಾರಿಕ ಬದುಕಿನ ನಡುವೆಯೂ, ಧ್ಯಾನಸ್ಥ ಮನಸ್ಥಿತಿ ನಿರ್ಮಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ, ಮನಸ್ಥಿತಿ ನಿಮ್ಮಲಡಗಿದೆ. ಅದಕ್ಕೊಂದು ರೂಪ ನೀಡಿ ಪ್ರಯತ್ನಿಸಿ. ಆ ದಿವ್ಯಶಕ್ತಿ ನಿಮ್ಮದಾದರೆ ನಿಮ್ಮ ಬದುಕು ಇಂತಹ ಪರಿಸ್ಥಿತಿಯಲ್ಲಿಯೂ ಸಹನೀಯವಾಗುವುದು, ಸಂತೋಷವಾಗುವುದು ಆರಾಮದಾಯಕವಾಗುವುದು. ದಯವಿಟ್ಟು ಪ್ರಯತ್ನಿಸಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











