ವಿಜಯ ದರ್ಪಣ ನ್ಯೂಸ್….
ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ: ಧೀಮಂತ ನಾಯಕನಿಗೆ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ
ಶೋಷಿತರಿಗೆ ಬೆಳಕು ನೀಡಿದ ಮಹಾನ್ ನಾಯಕ ಡಾ.ಅಂಬೇಡ್ಕರ್ : ಸಿಎಂ ಡಿ ಕೆ ಶಿವಕುಮಾರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜುಲೈ 05:
“ಒಂದು ವರ್ಗದ ನಾಯಕರಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಲಿಲ್ಲ. ಎಲ್ಲ ಶೋಷಿತ ವರ್ಗಕ್ಕೆ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಜನರ ಪರವಾಗಿ ದನಿ ಎತ್ತುವುದನ್ನು ಅಂಬೇಡ್ಕರ್ ಅವರು ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನ ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾ ಬಾಯಿಯವರು ಮಗುವಿಗೆ ಜನ್ಮ ನೀಡಲಿಲ್ಲ. ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಶಕ್ತಿಗೆ ಜನ್ಮ ಕೊಟ್ಟರು” ಎಂದರು.

“ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ ಮಾಡಿಸಿದ್ದೇವೆ. ಬುದ್ಧ ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಯೇಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪೈಗಂಬರವರು ದಿವ್ಯವಾಣಿ ನೀಡಿದ ಗಳಿಗೆಯಲ್ಲಿ, ಭೀಮಾ ಬಾಯಿಯವರು ಅಂಬೇಡ್ಕರ್ ಅವರಿಗೆ ಜನನ ನೀಡಿದ ಗಳಿಗೆಯಲ್ಲಿ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ನ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಕೆಂಪೇಗೌಡರು ಬೆಂಗಳೂರನ್ನ ಕಟ್ಟಿದ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆದಿದೆ” ಎಂದು ಬಣ್ಣಿಸಿದರು.
ಮಹಾತ್ಮ ಗಾಂಧಿಯವರು ಕುಳಿತಂತಹ ಜಾಗದಲ್ಲಿ ಈ ರಾಜ್ಯದ ಹಿಂದುಳಿದ ಪ್ರದೇಶದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. 371 ಜೆ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕದ ಜನತೆಯ ಉದ್ದಾರಕ್ಕೆ ಮುನ್ನುಡಿ ಬರೆದವರು. ಅಲ್ಲಿನ ಜನರ ಬದುಕಿನಲ್ಲಿ ಬದಲಾವಣೆ ತಂದು ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದಾರೆ” ಎಂದರು.
“ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ಕೊಟ್ಟು ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದಾರೋ ಅದೇ ರೀತಿ ಕಲ್ಯಾಣ ಕರ್ನಾಟಕದ ಜನರ ಬದುಕಿಗೆ ಒಂದು ದೊಡ್ಡ ಶಕ್ತಿ, ಸಾಕ್ಷಿ ಗುಡ್ಡೆ ನೀಡಿದ್ದಾರೆ” ಎಂದರು.
“ಪವಿತ್ರ ಗಳಿಗೆಯಲ್ಲಿ ನಮ್ಮ ಸಂವಿಧಾನವನ್ನ ಕೊಟ್ಟು ಇಡೀ ನಮ್ಮ ನೊಂದು, ಬೆಂದವರ ಪರವಾಗಿ ನಿಂತು ಜಾತಿರೋಗಕ್ಕೆ ಚಿಕಿತ್ಸೆ ನೀಡಿದಂತಹ ಒಬ್ಬ ದಿವ್ಯವಾದ ನಾಯಕನ ಪುತ್ಥಳಿಯನ್ನ ನಾವು ಅನಾವರಣ ಮಾಡುವಂತಹ ದೊಡ್ಡ ಅವಕಾಶ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರಿಂದ ನೆರವೇರಿದ್ದು ನಮ್ಮೆಲ್ಲರ ಭಾಗ್ಯ” ಎಂದರು.
“ಮಹಾತ್ಮ ಗಾಂಧೀಜಿಯವರ ಪುತ್ಥಳಿ ಜೊತೆಯಲ್ಲೇ ಇವತ್ತು ಬಾಬಾಸಾಹೇಬರ ಪುತ್ಥಳಿಯನ್ನ ನಾವು ಈ ದೇಶದ ಉದ್ದಗಲಕ್ಕೂ ಇರೋದನ್ನ ಗಮನಿಸಿದ್ದೇವೆ. ನಾನು ಪ್ರತಿ ಬಾರಿ ಹೇಳುತ್ತೇನೆ ಒಂದು ಜಾತಿ ವರ್ಗಕ್ಕೆ ಅಂಬೇಡ್ಕರ್ ಅವರನ್ನ ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಒಂದು ಸಮಾನತೆಯನ್ನ ಕೊಟ್ಟಂತಹ ನಾಯಕರು ಅವರು. ಎಲ್ಲಾ ವರ್ಗಕ್ಕೂ ನಾಯಕರಾಗಿ ಬೆಳಕು ತಂದವರು” ಎಂದರು.

“ಅಂಬೇಡ್ಕರ್ ಅವರ ಚಿಂತನೆಗಳು ಯಾವಾಗಲೂ ಕೂಡ ಸಮಾಜದ ಬಗ್ಗೆ, ಎಲ್ಲಾ ವರ್ಗದ ಜನರ ಬಗ್ಗೆಯಿದೆ. ಸಿದ್ದರಾಮಯ್ಯನವರರು ಮುಖ್ಯಮಂತ್ರಿ ಆಗಿದ್ದಾಗ ಸಂವಿಧಾನ ಪೀಠಿಕೆಯನ್ನ ಶಾಲೆಗಳಲ್ಲಿ ಓದುವುದು ಕಡ್ಡಾಯ ಮಾಡಲಾಯಿತು. ಇಂತಹ ಐತಿಹಾಸಿಕ ತೀರ್ಮಾನವನ್ನ ಕಾಂಗ್ರೆಸ್ ಸರ್ಕಾರ ಮಾತ್ರ ನೀಡಲು ಸಾಧ್ಯ. ಬೇರೆ ಸರ್ಕಾರಗಳು ಇಂಥ ಆಲೋಚನೆಯನ್ನ ಮಾಡಕ್ಕೆ ಸಾಧ್ಯವಿಲ್ಲ. ಮಾನವತೆಗಿಂತ ದೊಡ್ಡ ಧರ್ಮ ಇಲ್ಲ” ಎಂದರು.
“ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಮನುಷ್ಯ ಚಿರಂಜೀವಿ ಆಗಲಿಕ್ಕೆ ಸಾಧ್ಯವಿಲ್ಲ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬಹುದು. ನಿನ್ನನ್ನ ಟೀಕಿಸುವವರಿಗೆ ಕೆಲಸದ ಮುಖಾಂತರ ಉತ್ತರ ಕೊಡಬೇಕು ಅನ್ನೋದನ್ನ ಹೇಳಿ ಕೊಟ್ಟವರು ಬಾಬಾ ಸಾಹೇಬರು. ನಿನ್ನ ಹಣೆಬರಹದಲ್ಲಿ ನೀನು ನಂಬಿಕೆ ಇಡಬೇಡ. ನಿನ್ನ ಶಕ್ತಿ ನಿನ್ನ ಕಾರ್ಯ ಮೇಲೆ ನಂಬಿಕೆ ಇಡಬೇಕು. ನಿನ್ನ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಹೇಳಿದ್ದಾರೆ” ಎಂದರು.
*ಜಿಲ್ಲೆಗೆ ಎತ್ತಿನಹೊಳೆ ಹರಿಸಿಯೇ ಹರಿಸುತ್ತೇವೆ*
“ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಎರಡು ಸಾವಿರ ಅಡಿ ಕೆಳಗೆ ಹೋಗಿದೆ. ನಮ್ಮ ಸರ್ಕಾರ ಎತ್ತಿನಹೊಳೆಯಿಂದ, ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದೇ ತರುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನ ಈಗಾಗಲೇ ಹೊರಗೆ ತರುವಂತಹ ಶಕ್ತಿ ಭಗವಂತ ನನಗೆ ನೀಡಿದ್ದಾನೆ” ಎಂದರು.
“ಈ ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಿ ಈ ರೈತರ ಬದುಕನ್ನು ಹಸನು ಮಾಡುವ ಕೆಲಸವನ್ನ ನಾನು ಮಾಡಲಿದ್ದೇನೆ. ಹೊಸಕೋಟೆ ಕೆರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆ ಸುತ್ತಮುತ್ತ ಇರುವಂತಹ ನಮ್ಮ ಕೆರೆಗಳಿಗೆ ಹೊಸ ರೂಪ ಕೊಡುವ ಕೆಲಸಕ್ಕೆ ಮಾರ್ಗದರ್ಶನ ಕೊಟ್ಟಿದ್ದೇನೆ” ಎಂದರು.
ಈ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ಮುನಿಯಪ್ಪನವರ ನೇತೃತ್ವದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ದೇಹದಲ್ಲಿ ಕೊನೆ ಹನಿ ರಕ್ತ ಇರುವ ತನಕ ಸಂವಿಧಾನವನ್ನ ರಕ್ಷಣೆಯನ್ನ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದ್ದಾರೆ” ಎಂದರು.
ಅಭಿವೃದ್ಧಿಗೆ ಭೂಮಿ ನೀಡಿದವರ ಕೊಡುಗೆ ಸ್ಮರಣೆಗೆ ವಿಶೇಷ ಕಾರ್ಯಕ್ರಮ
“ಕೆಂಪೇಗೌಡರ ಜಯಂತಿ ಅಂಗವಾಗಿ ಎಸ್ ಎಂ ಕೃಷ್ಣ ರಸ್ತೆಗೆ ಭೂಮಿ ನೀಡಿದ ರೈತರ ಹೆಸರಿರುವ ಗೋಡೆ ನಿರ್ಮಿಸಿ ಗೌರವ ನೀಡಲಾಗಿದೆ. ಮುಂದಿನ ದಿನದಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಈ ಭಾಗದ ಜನರು ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡುವಿರೋ ನಿಮ್ಮ ಹೆಸರುಗಳನ್ನು ಶಾಶ್ವತವಾಗಿ ಉಳಿಕೊಳ್ಳಲು ವಿಶೇಷವಾದಂತಹ ಕಾರ್ಯಕ್ರಮವನ್ನು ನಾನು ರೂಪಿಸುತ್ತೇನೆ” ಎಂದರು.
“ದೇವನಹಳ್ಳಿಗೆ ಮೆಟ್ರೋ ಬರಬೇಕು, ಹೊಸಕೋಟೆಗೆ ಮೆಟ್ರೋ ತಲುಪಬೇಕು. ಇದರ ಬಗ್ಗೆ ಕೂಡ ಈಗಾಗಲೇ ಡಿಪಿಆರ್ ತಯಾರಾಗುತ್ತಿದೆ” ಎಂದರು
ರಾಜಘಟ್ಟ ಬೌದ್ದ ಕುರುಹುಗಳ ಅಧ್ಯಯನ, ರಕ್ಷಣೆಗೆ ತಂಡ

“ಇಲ್ಲಿನ ಬುದ್ಧನ ಇತಿಹಾಸದ ಬಗ್ಗೆ ರಾಜಘಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎಂದು ಮನವಿ ಕೊಟ್ಟಿದ್ದಾರೆ. ಇದರ ವಿಚಾರವಾಗಿ ಅಧ್ಯಯನ ಸಮಿತಿ ರಚಿಸಲು ಚಿಂತಿಸಲಾಗುವುದು. ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಅಮೂಲ್ಯವಾದಂತಹ ಸಾವಿರಾರು ವರ್ಷಗಳ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇದರ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡಗಳನ್ನು ರಚಿಸಿ ಈ ಭಾಗದಲ್ಲಿನ ಬೌದ್ದ ಸಂಸ್ಕೃತಿ, ಆ ಪರಂಪರೆಯನ್ನು ಉಳಿಸುವಂತಹ ಕೆಲಸ ಮಾಡುತ್ತೇವೆ” ಎಂದರು.
“ನಾನು ಮುಖ್ಯಮಂತ್ರಿ ಆದ ತಕ್ಷಣ ಒಂದು ಹೊಸ ಇಲಾಖೆ ಮಾಡಲು ಹೊರಟಿದ್ದೇನೆ. ಹೋರಾಟ ಮಾಡುವವರಿಗೆ, ನೊಂದ ಜನರಿಗೆ ಧ್ವನಿಯನ್ನು ತುಂಬಲು, ಅವರ ವಿಚಾರ ತಿಳಿಯಲು ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಮುಂದಾಗಿದ್ದೇವೆ” ಎಂದರು.
“ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಆಸ್ತಿ ರಕ್ಷಣೆ ಗ್ಯಾರಂಟಿ ನೀಡಿದ್ದೇವೆ. ಭೂ ದಾಖಲೆ ಗ್ಯಾರಂಟಿ ನೀಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಇಂತಹ ತೀರ್ಮಾನವನ್ನು ಮಾಡಲಿಕ್ಕೆ ಸಾಧ್ಯವೇ ಆಗಲಿಲ್ಲ. ಅವರಿಗೆ ಬಡವರ ಬಗ್ಗೆ, ಅವರ ಬದುಕಿನ ಬಗ್ಗೆ ಕಾಳಜಿ ಇರಲಿಲ್ಲ.
“ಮುಖ್ಯಮಂತ್ರಿ ಆದ ಮೇಲೆ ಇದು ನನ್ನ ಎರಡನೇ ಸರ್ಕಾರಿ ಕಾರ್ಯಕ್ರಮ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಸೇರಿ ತುಂಗಭದ್ರಾ ಅಣೆಕಟ್ಟುವಿನ ಹೊಸ 33 ಗೇಟ್ ಗಳನ್ನು ಉದ್ಘಾಟನೆ ಮಾಡಿದೆವು. ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರೂ ಇದ್ದರು. ಆಗ ಐತಿಹಾಸಿಕ ನಿರ್ಣಯಗಳನ್ನೂ ಮಾಡಲಾಯಿತು. ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಜೋಡಣೆ ನೀರಿನ ಹಂಚಿಕೆ ಬಗ್ಗೆ ಚರ್ಚೆ ಮಾಡಲಾಯಿತು. ತುಂಗಭದ್ರಾ ನದಿಯ ನಮ್ಮ ಪಾಲಿನ 33 ಟಿಎಂಸಿ ನೀರನ್ನು ಬಳಸುವ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದರು.
ನಾವೆಲ್ಲರೂ ನಾಯಕರಾಗಿ ಅಧಿಕಾರ ನಡೆಸುತ್ತಿದ್ದೇವೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಸಾಧ್ಯವಾಗಿದೆ.
ರಾಜ್ಯದಲ್ಲಿ ಪ್ರತಿ ಸಂದರ್ಭದಲ್ಲಿ ಸಂವಿಧಾನ ರಕ್ಷಣೆ ಮಾಡುವವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. 3 ವರ್ಷ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ಉತ್ತಮ ಆಡಳಿತ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲದು, ಮತ್ತೆ 2028-29ರಲ್ಲಿ ರಾಜ್ಯ, ರಾಷ್ಟ್ರದಲ್ಲಿ ಸರಕಾರ ರಚನೆ ಆಗುವ ಆತ್ಮವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಶಾಲಾ ಮಕ್ಕಳಿಗೆ ಪರಿಚಯಿಸಲು
ಬೋಧಿಸಲಾಗುತ್ತಿದೆ.
ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಡಾ. ಬಾಬಾ ಸಾಹೇಬರು ಕುಟುಂಬಕ್ಕಾಗಿ ಬದುಕದೇ ಸಾಮಾಜಿಕ ಸಮಾನತೆಗಾಗಿ ಶಿಕ್ಷಣ, ಸಂಘಟನೆ, ಹೋರಾಟ ಮೂಲತತ್ವದಡಿ ಶ್ರಮಿಸಿದ ಮೇರು ವ್ಯಕ್ತಿ ಅವರಾಗಿದ್ದರು ಎಂದು ಹೇಳಿದರು.
ಪರಿಶಿಷ್ಟರ ಅಭಿವೃದ್ಧಿಗಾಗಿ ಡಾ. ಬಿ.ಆರ್ ಅಂಬೇಡ್ಕರ್ ಕೊಡುಗೆ ಅನನ್ಯ. ಆರ್ಥಿಕ, ಸಾಮಾಜಿಕ ನ್ಯಾಯದಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ನಿಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳಿಗೆ ಸ್ಪಂದಿಸುವ ಸರ್ಕಾರಕ್ಕೆ ಜನರು ಸಂಪೂರ್ಣ ಬೆಂಬಲ ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೌದ್ಧ ಜ್ಞಾನ ಮಂದಿರ, ರಾಜಘಟ್ಟವನ್ನು ಬೌದ್ಧ ಪರಂಪರೆ ತಾಣವಾಗಿ, ವಿಜಯಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ, ಕಾವೇರಿ ಕುಡಿಯುವ ನೀರಿನ ಯೋಜನೆಯ 6ನೇ ಹಂತದ ನೀರನ್ನು ಈ ಭಾಗಕ್ಕೆ ಪೂರೈಸುವುದು, ಜಿಲ್ಲೆಗೆ ಮೆಟ್ರೋ ರೈಲು ಸಂಪರ್ಕ, ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆಯಲು ದೇವನಹಳ್ಳಿಯಲ್ಲಿ 10 ಎಕರೆ ಜಮೀನು ಮಂಜೂರು ಮಾಡುವುದು ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಶಾಸಕರೊಂದಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್, ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ಎಂಎಲ್ಸಿ ರವಿ, ನೆಲಮಂಗಲ ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಒ ಡಾ ವಾಸಂತಿ ಅಮರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.










