ವಿಜಯ ದರ್ಪಣ ನ್ಯೂಸ್….
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಂದ ರಿಯಾಲಿಟಿ ಚೆಕ್ | ಅಧಿಕಾರಿಗಳು ಫುಲ್ ಶಾಕ್
ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಡಿಸಿ ಕ್ಲಾಸ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜು.13:
ಸೋಮವಾರ ಎಂದಿನಂತೆ ಅಧಿಕಾರಿಗಳು ಕಚೇರಿಗಳಿಗೆ ಬರತೊಡಗಿದ್ದರು, ಅಷ್ಟರಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಜಿಲ್ಲಾಡಳಿತ ಭವನದಲ್ಲಿನ ಹಲವು ಇಲಾಖೆಗಳ ಕಚೇರಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳ ಹಾಜರಾತಿಯ ರಿಯಾಲಿಟಿ ಚೆಕ್ ನಡೆಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳಿಗೆ ಡಿಸಿ ಭೇಟಿ ನೀಡಿದ್ದರು.

ಇತ್ತೀಚೆಗೆ ಸರ್ಕಾರವು ಎಲ್ಲಾ ಸರ್ಕಾರಿ ನೌಕರರಿಗೆ ಆನ್ಲೈನ್ ಮೂಲಕ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಆಪ್ ಬಿಡುಗಡೆಗೊಳಿಸಿದೆ. ಈ ಆಪ್ ನಲ್ಲಿ ಬೆಳಗ್ಗೆ 10:00 ಗಂಟೆಗೆ ಅಧಿಕಾರಿಗಳು ಲಾಗಿನ್ ಆಗಬೇಕು, ಸಂಜೆ 5.30 ಗಂಟೆಗೆ ಲಾಗ್ ಔಟ್ ಆಗಬೇಕು ಎಂದು ತಿಳಿಸಲಾಗಿದೆ.
ಅಧಿಕಾರಿಗಳ ಕರ್ತವ್ಯದ ಬಗೆಗಿನ ರಿಯಾಲಿಟಿ ಚೆಕ್ ಮಾಡಲು ಡಿಸಿ ಅವರು ಬೆಳಗ್ಗೆ 10.30 ರಿಂದ 11.00 ರ ಸಮಯದಲ್ಲಿ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆಯೇ?, ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ?, ಸಮಯಕ್ಕೆ ಸರಿಯಾಗಿ ಯಾಕೆ ಇನ್ನೂ ಬಂದಿಲ್ಲ? ಅಥವಾ ಅಧಿಕಾರಿಗಳು ಕ್ಷೇತ್ರ ಭೇಟಿ(ಫೀಲ್ಡ್ ವರ್ಕ್) ಹೋಗಿದ್ದರೇ ಅದರ ಬಗ್ಗೆ ಕರ್ತವ್ಯ ಆಪ್ ನಲ್ಲಿ ದಾಖಲಿಸಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಅಧಿಕಾರಿ, ಸಿಬ್ಬಂದಿ ಬಳಿ ಕೇಳಿದ್ದಾರೆ.
ಹಲವು ಕಚೇರಿಗಳಲ್ಲಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕರ್ತವ್ಯ ಆಪ್ ನಲ್ಲಿ ಕಡ್ಡಾಯವಾಗಿ ಎಲ್ಲರೂ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸಬೇಕು ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸೂಚನೆ ಕೂಡ ನೀಡಿದ್ದಾರೆ.
ಸಿಬ್ಬಂದಿಗಳು ಶಾಕ್
ಎಂದಿನಂತೆ ಕಚೇರಿ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಬರುತ್ತಿದ್ದರು, ಡಿಸಿ ನಮ್ಮ ಕಚೇರಿಗಳಿಗೆ ಭೇಟಿ ನೀಡುತ್ತಾರೆಂದು, ಯಾರು ಕೂಡ ಊಹೆ ಮಾಡಿರಲಿಲ್ಲ, ಅವರನ್ನು ತಮ್ಮ ತಮ್ಮ ಇಲಾಖೆಗಳಲ್ಲಿ ನೋಡಿ ಗಾಬರಿಗೊಂಡಿರುವುದಂತು ಸುಳ್ಳಲ್ಲ.

ಜಿಲ್ಲಾಧಿಕಾರಿಗಳು ಇದೇ ರೀತಿ ಆಗಿಂದಾಗ್ಗೆ ರಿಯಾಲಿಟಿ ಚೆಕ್ ಮಾಡುವುದರಿಂದ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗಳಿಗೆ ಬಂದು ಜನರ ಸಮಸ್ಯೆ ಆಲಿಸಲು ಸಹಕಾರಿ ಆಗಲಿದೆ ಎಂಬುದು ಸಾರ್ವಜನಿಕರ ಆಶಯ.











