ವಿಜಯ ದರ್ಪಣ ನ್ಯೂಸ್…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಅವಧಿ ವಿಸ್ತರಣೆ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಿಲ್ಲೆಯಲ್ಲಿ ಶೇ.63 ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣ : ಜಿಲ್ಲಾಧಿಕಾರಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜು.16:
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ. 63% ಗಣತಿ ನಮೂನೆ ಡಿಜಿಟಲೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಎಸ್ಐಆರ್ ಪ್ರಗತಿ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು
ಜಿಲ್ಲೆಯ ಒಟ್ಟು 9,12,913 ಮತದಾರರ ಪೈಕಿ ಈವರೆಗೆ ಶೇ.99,82 ರಷ್ಟು ಗಣತಿ ನಮೂನೆ ವಿತರಿಸಲಾಗಿದೆ. ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 5,75,185 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಿ ಶೇ.63.01 ರಷ್ಟು ಪ್ರಗತಿ ಸಾಧಿಸಲಾಗಿದ್ದು ರಾಜ್ಯದಲ್ಲಿ ಜಿಲ್ಲೆ 6ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಗತಿಯಲ್ಲಿ ಒಟ್ಟು ಮತದಾರರ ಸಂಖ್ಯೆ 912913 ಇದ್ದು, ಹೊಸಕೋಟೆಯಲ್ಲಿ 66.23%, ದೇವನಹಳ್ಳಿಯಲ್ಲಿ 66.58%, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 58.93%, ನೆಲಮಂಗಲದಲ್ಲಿ 60.02% ಒಟ್ಟು ಜಿಲ್ಲೆಯಲ್ಲಿ 63.01% ಎನ್ಯುಮರೇಷನ್ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ.
*ಎಸ್ಐಆರ್ ಪ್ರಕ್ರಿಯೆ ಅವಧಿ ವಿಸ್ತರಣೆ*
ಕರ್ನಾಟಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಸಂಬಂಧ ಕೇಂದ್ರ ಚುನಾವಣಾ ಆಯೋಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 30 ರಂದು ಆರಂಭವಾದ ಬಿಎಲ್ಒಗಳ ಮನೆಮನೆ ಭೇಟಿ, ಎನ್ಯುಮರೇಷನ್ ಅರ್ಜಿ ವಿತರಣೆ ಹಾಗೂ ಸ್ವೀಕೃತಿ ಕಾರ್ಯವನ್ನು ಜುಲೈ 29 ರಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಆಗಸ್ಟ್ 8 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಈ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದಾಗಿದೆ.
ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಕೈಬಿಡುವಿಕೆಗೆ ಸಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತದ ಪ್ರಕ್ರಿಯೆಗಳು ಆಗಸ್ಟ್ 17 ರಿಂದ ಆರಂಭಗೊಂಡು ಅಕ್ಟೋಬರ್ 15 ರವರೆಗೆ ಮುಂದುವರೆಯಲಿವೆ. ಸಾರ್ವಜನಿಕ ದೂರುಗಳು ಮತ್ತು ಅರ್ಜಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಂತಿಮವಾಗಿ, ಎಲ್ಲ ತಿದ್ದುಪಡಿಗಳನ್ನು ಒಳಗೊಂಡ ಅಧಿಕೃತ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19ರಂದು ಪ್ರಕಟಿಸಲಾಗುವುದು. ಅರ್ಹ ನಾಗರೀಕರು ಈ ಪರಿಷ್ಕೃತ ವೇಳಾಪಟ್ಟಿಯ ಸದುಪಯೋಗ ಪಡೆದುಕೊಂಡು ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
*ಎಸ್‌ಐಆರ್ ವಿಶೇಷತೆ*
1. ಮತದಾರರ ಪಟ್ಟಿಯಲ್ಲಿ ಹೆಸರಿರುವ ಹಾಗೂ ಪ್ರಸ್ತುತ ಮನೆಮನೆ ಭೇಟಿ ವೇಳೆ ಸಿಕ್ಕ ಮಾಹಿತಿಯಂತೆ 4896 ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿದೆ.
2. ಈವರೆಗಿನ ಮನೆ ಭೇಟಿ ಸಂದರ್ಭದಲ್ಲಿ 2364 ಮತದಾರರು ಶಾಶ್ವತವಾಗಿ ಸ್ಥಳಾಂತರವಾಗಿರುವುದು ಕಂಡುಬಂದಿದೆ.
3. ಬಿಎಲ್ಒಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ 262 ಪತ್ತೆ ಹಚ್ಚಲಾಗಿದ/ ಗೈರಾದ ಮತದಾರರು ಇದ್ದಾರೆ.
4. ಬಿಎಲ್‌ಒಗಳು ಮನೆಗೆ ಭೇಟಿಕೊಟ್ಟ ಸಂದರ್ಭದಲ್ಲಿ 76 ಮತದಾರರು ಬೇರೆಡೆ ನೋಂದಣಿ ಆಗಿರುವುದು ಕಂಡು ಬಂದಿದೆ.
5. ಆನ್ಲೈನ್ ಮೂಲಕ 1355 ಮತದಾರರು ನೋಂದಣಿ ಆಗಿದ್ದಾರೆ.
*ಎಸ್‌ಐಆರ್ ಬಗ್ಗೆ ವ್ಯಾಪಕ ಪ್ರಚಾರ: ಸಿಇಒ*
ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಮತದಾರರಿಗೆ ಸಹಾಯವಾಗಲು ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ,ಪುರಸಭೆಗಳಲ್ಲಿ 117 ಬಿ.ಎಲ್.ಓ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ 1141 ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗೆ ಒಂದರ 1141 ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಶಾಲಾ, ಕಾಲೇಜುಗಳಲ್ಲಿನ 441 ಮತದಾರರ ಸಾಕ್ಷರತಾ ಸಂಘಗಳನ್ನು ಸಕ್ರಿಯಗೊಳಿಸಿ ಎಸ್‌ಐಆರ್ ಸಂಬಂಧಿಸಿದಂತೆ ಸುಮಾರು 200 ಕ್ಕೂ ಅಧಿಕ ಸ್ವೀಪ್ ಚಟುವಟಿಕೆಗಳ ಮೂಲಕ 20,000 ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಮನೆಗೆ ಹಂಚಲು 4000 ಕ್ಕೂ ಅಧಿಕ ಕರಪತ್ರಗಳನ್ನು ವಿತರಿಸಲಾಗಿದೆ. ಜಿಲ್ಲೆಯ 18 ವಿ.ಐ.ಪಿಗಳಿಗೆ ಗಣತಿ ನಮೂನೆ ವಿತರಿಸಲಾಗಿದೆ. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ದುರ್ಬಲ ವರ್ಗದ ಮತದಾರರು ಕೈಬಿಡದಂತೆ ಇವರಿಗೂ ಸಹ ಗಣತಿ ನಮೂನೆಗಳನ್ನು ಹಂಚಲು ಮತ್ತು ಭರ್ತಿ ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ. ಸ್ವೀಪ್ ಅಡಿ ವಿವಿಧ ಸೈಕಲ್ ಜಾಥಾ, ಬೈಕ್ ಜಾಥಾ, ಪಂಜಿನ ಮೆರವಣಿಗೆ ಮುಂತಾದ ಸುಮಾರು 50 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ,ಪುರಸಭೆಗಳ ಸ್ವಚ್ಚತಾ ವಾಹನಗಳ ಮೂಲಕ ಪ್ರತಿದಿನ ಎಸ್ಐಆರ್ ಕುರಿತು ವ್ಯಾಪಕ ಆಡಿಯೋ ಪ್ರಚಾರ ಕೈಗೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಹೊಸಕೋಟೆ ಮತದಾರರ ನೋಂದಣಾಧಿಕಾರಿ ಶಿವಕುಮಾರ್, ದೇವನಹಳ್ಳಿ ತಾಲ್ಲೂಕು ಮತದಾರರ ನೋಂದಣಾಧಿಕಾರಿ ರಮೇಶ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಅಶೋಕ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.










