--Ads--

ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವ

On: July 14, 2026 11:17 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿರುವ ಬಲಿಜ ಪೇಟೆಯಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಜ್ಯೋತಿಷ್ಯರಾದಶ್ರೀ ಎಚ್ ಎನ್ ಲೋಕನಾಥಚಾರ್ಯ ಅವರು ಶ್ರೀ ರಾಮಾನುಜಾಚಾರ್ಯರ ಮಹಿಮೆ ಬಗ್ಗೆ ಮಾತನಾಡುತ್ತಾ
ಭಗವದ್ ರಾಮಾನುಜರು ಕ್ರಿ.ಶ. 1017ರಲ್ಲಿ ತಮಿಳುನಾಡಿನ ಶ್ರೀಪೆರುಂಬೂದೂರ್ ಕ್ಷೇತ್ರದಲ್ಲಿ ಶ್ರೀ ಆಸುರಿ ಕೇಶವ ಸೋಮಯಾಜಿ ಮತ್ತು ಶ್ರೀಮತಿ ಕಾಂತಿಮತಿಯವರ ಸುಪುತ್ರರಾಗಿ ಅವತರಿಸಿದರು.

ಲೋಕದ ಜನರೆಲ್ಲ ಉಜ್ಜೀವನಗೊಳ್ಳಲೆಂಬ ಮಹತ್ತರವಾದ ಉದ್ದೇಶದಿಂದ ಭಕ್ತಿ–ಪ್ರಪತ್ತಿಗಳ ಮಹತ್ವವನ್ನು ಪ್ರಪಂಚದಲ್ಲಿ ಸಾರಿದ ಮಾಹಾಪುರುಷರಿವರು. ಅವರ ಅವತಾರದ ಶುಭದಿನದಂದು ಆ ಅವತಾರಪುರುಷರ ಪವಿತ್ರವಾದ ಸ್ಮರಣೆ ನಮ್ಮೆಲ್ಲರ ಕರ್ತವ್ಯ.ಭಗವದ್ ರಾಮಾನುಜರದು ಪವಿತ್ರವಾದ ಜೀವನ. ವೈದಿಕ ಸದಾಚಾರನಿಷ್ಠರ ವಂಶದಲ್ಲಿ ಜನಿಸಿದ್ದರಿಂದ ಚಿಕ್ಕಂದಿನಿಂದಲೇ ಭಗವದ್ಭಕ್ತಿ ಅವರಲ್ಲಿ ಬೇರೂರಿತ್ತು. ಶಾಸ್ತ್ರಾಧ್ಯಯನವನ್ನೆಲ್ಲ ಮುಗಿಸಿ ಅವರು ಯಾದವಪ್ರಕಾಶರಲ್ಲಿ ಅದ್ವೈತ ವೇದಾಂತವನ್ನು ಅಧ್ಯಯನ ಮಾಡುತ್ತಿದ್ದರು.

ಆಗ ಅನೇಕ ಸಮಯಗಳಲ್ಲಿ ಆಚಾರ್ಯರ ವಿವರಣೆಗಳು ಅವರಿಗೆ ಸರಿಯೆಂದು ತೋರುತ್ತಿರಲಿಲ್ಲ. ಪರಮಾತ್ಮನನ್ನು ಸಕಲ ಕಲ್ಯಾಣಗುಣಾಕರನೆಂದೂ ಕರುಣಾಮೂರ್ತಿಯೆಂದೂ ತಿಳಿದಿದ್ದ ಅವರಿಗೆ ಆಚಾರ್ಯರ ನಿರ್ಗುಣಪರವಾದ ವಾಕ್ಯಾರ್ಥಗಳು ಮನಸ್ಸಿಗೆ ಬಹಳ ನೋವನ್ನು ಉಂಟುಮಾಡುತ್ತಿತ್ತು.

ಒಂದು ಸಂದರ್ಭದಲ್ಲಿ ಛಾಂದೋಗ್ಯ ಉಪನಿಷತ್ತಿನ ವಾಕ್ಯಕ್ಕೆ ಆಚಾರ್ಯರು ಮಾಡಿದ ವಿವರಣೆಯಿಂದ ಅವರ ಕಣ್ಣಿಲಲ್ಲಿ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. ಆಚಾರ್ಯರು ಏಕೆಂದು ಕೇಳಲಾಗಿ ರಾಮಾನುಜರು ತಮ್ಮ ಅಭಿಪ್ರಾಯವನ್ನು ತಿಳಿಸಲು ಆಚಾರ್ಯರು ಅವರಲ್ಲಿ ಬಹಳ ಕೋಪಗೊಂಡರು.

ಅಂದಿನಿಂದ ಅವರಲ್ಲಿ ಭಿನ್ನಾಭಿಪ್ರಾಯಗಳು ಅಧಿಕವಾಗಿ ರಾಮಾನುಜರು ಕಾಂಚೀಪುರಕ್ಕೆ ಬಂದು ಅಲ್ಲಿ ನೆಲೆಸಿದರು. ಅಲ್ಲಿ ಅವರು ವರದರಾಜನಿಗೆ ತೀರ್ಥ ಕೈಂಕರ್ಯವನ್ನು ಮಾಡಿಕೊಂಡಿದ್ದರು. ಅಲ್ಲಿ ಅವರಿಗೆ ಪರಮಭಕ್ತರಾಗಿದ್ದ ಕಾಂಚೀಪೂರ್ಣರ ಸಂಬಂಧವೂ ದೊರಕಿತು. ಕಾಂಚೀಪೂರ್ಣರು ವರದರಾಜನೊಡನೆ ಮಾತಾಡುತ್ತಿದ್ದರೆಂದು ಐತಿಹ್ಯವಿದೆ. ಆಗಲೇ ಒಂದು ಸಮಯದಲ್ಲಿ, ಸುಪ್ರಸಿದ್ಧ ಆಚಾರ್ಯರಾಗಿದ್ದ ಯಾಮುನಾಚಾರ್ಯರು ರಾಮಾನುಜರನ್ನು ದೂರದಿಂದ ನೋಡಿ ಅವರ ತೇಜಸ್ಸಿನಿಂದ ಬಹಳ ಆಕರ್ಷಿತರಾಗಿ ಇವರೇ ಮುಂದೆ ನಮ್ಮ ಸಂಪ್ರದಾಯವನ್ನು ಮುಂದುವರಿಸಲು ತಕ್ಕ ಆಚಾರ್ಯರೆಂದು ಮನಸ್ಸಿನಲ್ಲಿ ನಿಷ್ಕರ್ಷಿಸಿದರು.

ಆದರೆ ದೈವವಶದಿಂದ ಅವರ ಜೀವಿತಕಾಲದಲ್ಲಿ ಯಾಮುನರ ಮತ್ತು ರಾಮನುಜರ ಭೇಟಿಯಾಗಲಿಲ್ಲ. ರಾಮಾನುಜರು ಯಾಮುನಾಚಾರ್ಯರನ್ನು ಭೇಟಿಯಾಗಲು ಹೋಗುವಷ್ಟರಲ್ಲಿ ಯಾಮುನರು ಪರಮಪದವನ್ನು ಸೇರಿದ್ದರು. ಆಗ ರಾಮಾನುಜರು ತಾವು ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನವನ್ನು ರಚಿಸುವುದಾಗಿಯೂ, ವ್ಯಾಸರ ಮತ್ತು ಪರಾಶರರ ಗ್ರಂಥಗಳನ್ನು ಪ್ರಚಾರಮಾಡುವುದಾಗಿಯೂ ಪ್ರತಿಜ್ಞೆ ಕೊಂಡರು.

ನಂತರ ರಾಮಾನುಜರು ಮಹಾಪೂರ್ಣರಲ್ಲಿ ಅಧ್ಯಯನವನ್ನು ಮಾಡಿ ಕಾಂಚಿಯಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅಂದಿನಿಂದ ತಮ್ಮ ಜೀವನವನ್ನು ವೇದಾಂತದರ್ಶನದ ಸ್ಥಾಪನೆಗೂ ಎಲ್ಲ ಚೇತನರ ಉದ್ಧಾರಕ್ಕೂ ಮುಡಿಪಿಟ್ಟರು. ಶ್ರೀರಂಗಕ್ಕೆ ಬಂದು ಅಲ್ಲಿ ಆಚಾರ್ಯಪಟ್ಟವನ್ನು ಅಲಂಕರಿಸಿದರು.

ನಂತರ ‘ವೇದಾರ್ಥಸಂಗ್ರಹ’ವೆಂಬ ಮುಖ್ಯವಾದ ಶ್ರುತಿಗಳ ಅರ್ಥಪ್ರತಿಪಾದನೆ ಮಾಡುವ ಗ್ರಂಥವನ್ನೂ, ಬ್ರಹ್ಮಸೂತ್ರಗಳಿಗೆ ‘ಶ್ರೀಭಾಷ್ಯ’, ‘ವೇದಾಂತಸಾರ’, ವೇದಾಂತದೀಪವೆಂಬ ಮೂರು ಭಾಷ್ಯಗಳನ್ನೂ ರಚಿಸಿದರು. ಭಗವದ್ಗೀತೆಗೆ ಅದ್ಭುತವಾದ ಶ್ರೀಗೀತಾಭಾಷ್ಯವನ್ನು ರಚಿಸಿದರು.

ನಂತರ ಶರಣಾಗತಿಗದ್ಯ, ‘ಶ್ರೀರಂಗಗದ್ಯ’ ಮತ್ತು ‘ವೈಕುಂಠಗದ್ಯ’ವೆಂಬ ಮೂರು ಗದ್ಯಗಳನ್ನು ರಚಿಸಿದರು. ಪ್ರತಿದಿನವೂ ಒಬ್ಬ ಶ್ರೀವೈಷ್ಣವನು ಹೇಗೆ ಭಗವದಾರಾಧನೆಯನ್ನು ಮಾಡಬೇಕೆಂಬುದನ್ನು ತಿಳಿಸಲು ‘ನಿತ್ಯಗ್ರಂಥ’ವನ್ನು ರಚಿಸಿದರು.

ಹೀಗೆ ನವರತ್ನಗಳಂತೆ ಒಂಬತ್ತು ಗ್ರಂಥಗಳನ್ನು ರಚಿಸಿ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಪರಿಪೂರ್ಣವಾದ ಆಕಾರವನ್ನು ನೀಡಿ ದರ್ಶನಸ್ಥಾಪಕಾಚಾರ್ಯರೆಂದು ಪ್ರಸಿದ್ಧರಾದರು.

ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಆರ್ ಮುನಿರಾಜು ಮತ್ತು ಟಿ ನಾಗರಾಜ್ ಕುಟುಂಬದವರು ನೆರವೇರಿಸಿದರು

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ದಾಸರ ಪದಗಳ ಗಾಯನ

ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜುಲೈ 16, ಗುರುವಾರ ಸಂಜೆ 5-15ಕ್ಕೆ ಶ್ರೀ ಮಾಧವ ಎಂ. ನಾಡಿಗೇರ್ ಇವರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾದ್ಯ ಸಹಕಾರ : ಶ್ರೀ ರಾಮು ಕೊಡೇಕಲ್ (ಹಾರ್ಮೋನಿಯಂ) ಮತ್ತು ಶ್ರೀ ಭೀಮಾಶಂಕರ ಹೇಮನೂರು (ತಬಲಾ). ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 45ನೇ ಅಡ್ಡರಸ್ತೆ, ಜಯನಗರ 5ನೇ ಬ್ಲಾಕ್, ಬೆಂಗಳೂರು-560041

.

.

WhatsApp

Join Now

Telegram

Join Now

Instagram

Join Now