ವಿಜಯ ದರ್ಪಣ ನ್ಯೂಸ್….
ಗುರಪ್ಪನ ಮಠ ಸರ್ಕಾರಿ ಉರ್ದು–ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಸಮಿತಿ ಅಧ್ಯಕ್ಷರಾಗಿ ಪತ್ರಕರ್ತ ಅಬ್ದುಲ್ ಮುಯೀದ್ ಆಯ್ಕೆ

ವಿಜಯಪುರ: ಗುರಪ್ಪನ ಮಠ ಸರ್ಕಾರಿ ಉರ್ದು–ಇಂಗ್ಲಿಷ್ (ದ್ವಿಭಾಷಾ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC)ಯ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ಅಬ್ದುಲ್ ಮುಯೀದ್ ಮಾತನಾಡಿ ಎಸ್ಡಿಎಂಸಿಯ ಎಲ್ಲಾ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ಶಾಲೆಯ ಸರ್ವತೋಮುಖ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಲಭ್ಯಗಳ ಸುಧಾರಣೆ ಹಾಗೂ ಪೋಷಕರು ಮತ್ತು ಶಿಕ್ಷಕರ ನಡುವಿನ ಉತ್ತಮ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಹಾಗೇಯೇ ಎಲ್ಲರ ಸಹಕಾರದೊಂದಿಗೆ ನಮ್ಮ ಶಾಲೆಯನ್ನು ಆದರ್ಶ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಸಿಆರ್ಪಿ ಕೃಷ್ಣರಾಮ್ ಅವರು ಎಸ್ಡಿಎಂಸಿ ಸಮಿತಿಯ ಜವಾಬ್ದಾರಿಗಳು, ಕರ್ತವ್ಯಗಳು ಹಾಗೂ ಶಾಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು. ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಹಾಜರಾತಿ, ಮೂಲಭೂತ ಸೌಲಭ್ಯಗಳ ವೃದ್ಧಿ, ಶೈಕ್ಷಣಿಕ ಗುಣಮಟ್ಟ ಮತ್ತು ಪೋಷಕರು–ಶಿಕ್ಷಕರ ನಡುವಿನ ಸಮನ್ವಯವನ್ನು ಬಲಪಡಿಸುವಲ್ಲಿ ಎಸ್ಡಿಎಂಸಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅಬ್ದುಲ್ ಮುಯೀದ್ ಅವರನ್ನು ಅಧ್ಯಕ್ಷರಾಗಿ ಹಾಗೂ ಹಾಫಿಜಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು.
ಅದೇ ಸಂದರ್ಭದಲ್ಲಿ ಇಶ್ರತ್ ಬಾನು, ಅಲ್ಮಾಸ್ ಬೇಗಂ, ಅತೀಫಾ ಐಮನ್, ಕೌಸರ್, ರಫೀನಾ, ಸಮೀನಾ, ಅಮರ್ ಖಾನಂ, ಸಲ್ಮಾ ತಾಜ್, ಶೇಖ್ ಅಬ್ರಾರ್, ಬಾಬಾ ಜಾನ್, ಸಯ್ಯದ್ ಘಫೂರ್, ನಿಸಾರ್, ನಿಯಾಜ್, ನಿಜಾಮುದ್ದೀನ್, ಡಿ. ಬಾಬಾ ಜಾನ್ ಹಾಗೂ ಮುದಸ್ಸಿರ್ ಅವರನ್ನು ಎಸ್ಡಿಎಂಸಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಆಯ್ಕೆಯ ನಂತರ ಶಿಕ್ಷಕರು, ಪೋಷಕರು ಹಾಗೂ ಗಣ್ಯರು ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಹೊಸ ಸಮಿತಿಯು ಶಾಲೆಯ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಕಲ್ಯಾಣ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖ್ಯ ಶಿಕ್ಷಕಿ ಶಂಸಿಯಾ ಬೇಗಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಘೌಸ್ ಖಾನ್ ಮುಬಾರಕ್, ಅ ವೇಜ್-ಉರ್-ರಹ್ಮಾನ್, ಮೊಹಮ್ಮದ್ ಇಲಿಯಾಸ್, ಶಫಿಯುಲ್ಲಾ, ಮಾಜಿ ಎಸ್ ಡಿಎಂಸಿ ಅಧ್ಯಕ್ಷ ಜಹೀರುದ್ದೀನ್, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.









