--Ads--

ಮಳೆ ಕೊರತೆಯಿಂದ ಸೊರಗಿದ ಬೆಳೆ: ರೈತರ ನೋವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ

On: August 10, 2026 6:02 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಳೆ ಕೊರತೆಯಿಂದ ಸೊರಗಿದ ಬೆಳೆ: ರೈತರ ನೋವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ

 

ಮಂಡ್ಯ, ಆಗಸ್ಟ್ 9.2026
ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಹಲಸಂದೆ, ಎಳ್ಳು ಸೇರಿದಂತೆ ಹಲವು ಬೆಳೆಗಳು ಸೊರಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ *ಎನ್. ಚಲುವರಾಯಸ್ವಾಮಿ* ಅವರು ಇಂದು ಮಂಡ್ಯ, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲ್ಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ಕೆ.ಆರ್.ಪೇಟೆ: ಸಿಂಧಘಟ್ಟ, ತೆಂಡೆಕೆರೆ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ
ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಮತ್ತು ತೆಂಡೆಕೆರೆ ಗ್ರಾಮಗಳ ಹೊಲಗಳಿಗೆ ತೆರಳಿದ ಸಚಿವರು, ಮಳೆ ಕೊರತೆಯಿಂದ ಸೊರಗಿರುವ ಹಲಸಂದೆ ಗಿಡಗಳನ್ನು ವೀಕ್ಷಿಸಿದರು. ಬೆಳೆಯ ಬೆಳವಣಿಗೆ, ತೇವಾಂಶದ ಕೊರತೆ ಮತ್ತು ಇಳುವರಿ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ರೈತರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೈತರ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಅರ್ಹ ರೈತರು ಬೆಳೆ ವಿಮೆಯಿಂದ ವಂಚಿತರಾಗಬಾರದು ಎಂದು ನಿರ್ದೇಶನ ನೀಡಿದರು.

ಮಳವಳ್ಳಿ: ಬಂಡೂರು ಗ್ರಾಮದಲ್ಲಿ ಬೆಳೆ ವೀಕ್ಷಣೆ
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮಕ್ಕೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರೊಂದಿಗೆ ಭೇಟಿ ನೀಡಿದ ಚಲುವರಾಯಸ್ವಾಮಿ ಅವರು, ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದ ಹಾನಿಗೊಳಗಾಗಿರುವ ಹಲಸಂದೆ ಮತ್ತು ಎಳ್ಳು ಬೆಳೆಗಳನ್ನು ಪರಿಶೀಲಿಸಿದರು. ಬೆಳೆ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರದ ನಿಯಮಾನುಸಾರ ರೈತರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಗಸ್ಟ್ ಅಂತಿಮ ವಾರದೊಳಗೆ ಮಳೆಯಾದರೆ ಬಿತ್ತನೆಗೆ ಅವಕಾಶ
ಪೂರ್ವ ಮುಂಗಾರಿನಲ್ಲಿ ಕೆಲ ರೈತರು ಬಿತ್ತನೆ ಮಾಡಿದ್ದರೂ, ನಂತರ ಮಳೆ ಇಲ್ಲದ ಕಾರಣ ಬಹುತೇಕರು ಬಿತ್ತನೆ ಮಾಡಿಲ್ಲ. ಆಗಸ್ಟ್ ಅಂತಿಮ ವಾರದೊಳಗೆ ಉತ್ತಮ ಮಳೆಯಾದರೆ ರೈತರಿಗೆ ಬಿತ್ತನೆಗೆ ಅವಕಾಶವಿದೆ. ಮಳೆಯ ಪ್ರಮಾಣವನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ರೈತರಿಗೆ ಅಲ್ಪಾವಧಿ ಮತ್ತು ಪರ್ಯಾಯ ಬೆಳೆ ಬೆಳೆಯಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಕಡಿಮೆ ಮಳೆಗೆ ಸೂಕ್ತವಾದ ಬೆಳೆಗಳು, ಬಿತ್ತನೆ ಸಮಯ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ಕೃಷಿ ವಿಜ್ಞಾನಿಗಳನ್ನು ನಿಯೋಜಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ರೈತ ಆತ್ಮಹತ್ಯೆ ಕುಟುಂಬಕ್ಕೆ ಸಾಂತ್ವನ – 5 ಲಕ್ಷ ಪರಿಹಾರ

ಮಂಡ್ಯ ತಾಲ್ಲೂಕಿನ ಬಿ.ಹಟ್ನ ಮತ್ತು ಪಾಂಡವಪುರ ತಾಲೂಕಿನ ಎಂ ಬೆಟ್ಟಹಳ್ಳಿಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಕುಟುಂಬದ ಪರಿಸ್ಥಿತಿ ಕುರಿತು ಮಾಹಿತಿ ಪಡೆದು, ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಜೊತೆಯಲ್ಲಿದೆ ಎಂದು ಧೈರ್ಯ ತುಂಬಿದರು. ಸರ್ಕಾರದ ನಿಯಮಾನುಸಾರ 5 ಲಕ್ಷ ರೂ. ಪರಿಹಾರ ಚೆಕ್ ಅನ್ನು ಮೃತ ರೈತರ ಪುತ್ರ ಸ್ವಾಮಿ ಅವರಿಗೆ ಮತ್ತು ಬೆಟ್ಟಹಳ್ಳಿ ರೈತ ಕುಟುಂಬಕ್ಕೆ ವಿತರಿಸಿದರು.

ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳದೆ, ಸಂಕಷ್ಟದ ವೇಳೆ ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ನಾಗಮಂಗಲಕ್ಕೆ ಭೇಟಿ
ಜಿಲ್ಲೆಯಲ್ಲಿ ಕಬ್ಬು ಸೇರಿದಂತೆ ಕೆಲವು ಬೆಳೆಗಳು ಒಣಗುತ್ತಿವೆ. ಮಂಡ್ಯ ಸುತ್ತಮುತ್ತ ಪರಿಶೀಲನೆ ನಡೆಸಿದ್ದು, ನಾಳೆ ನಾಗಮಂಗಲ ತಾಲ್ಲೂಕಿಗೂ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ. ಸಿಇಒ ಕೆ.ಆರ್. ನಂದಿನಿ ಸೇರಿದಂತೆ ಕೃಷಿ ಇಲಾಖೆಯ ಜೆಡಿ ಜಯಸ್ವಾಮಿ,ಎಸಿ ಶ್ರೀನಿವಾಸ್,ಕೃಷಿ ಅಧಿಕಾರಿಗಳಾದ ಮಾಲತಿ, ಪ್ರತಿಭಾ, ಗಿರೀಶ್ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now