ವಿಜಯ ದರ್ಪಣ ನ್ಯೂಸ್….
ಶ್ರದ್ದಾಭಕ್ತಿಯಿಂದ ನಡೆದ ಶ್ರೀ ಮಾರಮ್ಮ ದೇವಿಯ 48ನೇ ದಿನದ ಪೂಜೆ

ನೆಲಮಂಗಲ: ತಾಲೂಕಿನ ಸೋಲೂರು ಹೋಬಳಿಯ ಮೋಟಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಪಾಳ್ಯ ಗ್ರಾಮದ ಗ್ರಾಮದೇವತೆ ಶ್ರೀ ಮಾರಮ್ಮ ದೇವಿಯ 48ನೇ ದಿನದ ವಿಶೇಷ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿ, ಸಂಭ್ರಮ ಹಾಗೂ ಧಾರ್ಮಿಕ ವಾತಾವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದಲೇ ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಯ ವಿಧಿವಿಧಾನಗಳು ನೆರವೇರಿದವು. ಗ್ರಾಮದ ಮಹಿಳೆಯರು, ಹಿರಿಯರು ಹಾಗೂ ಯುವಕರು ಸೇರಿದಂತೆ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಾರಮ್ಮ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ನಿವೃತ್ತ ಶಿಕ್ಷಕರು, ಶಿಕ್ಷಕರು, ಪ್ರಗತಿಪರ ರೈತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ಶಾಂತಿ, ಸುಖ, ಸಮೃದ್ಧಿ ಹಾಗೂ ಸೌಹಾರ್ದತೆ ನೆಲೆಸಲೆಂದು ಭಕರಣ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಕನಪಾಳ್ಯ ಗ್ರಾಮದ ಮುಖಂಡ ಹಾಗೂ ಸಾವಯವ ಕೃಷಿಕ ಎನ್. ಕೇಶವಮೂರ್ತಿ ಅವರು, ಗ್ರಾಮೀಣ ಭಾಗದಲ್ಲಿ ದೇವತಾ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗಳಾಗಿರದೆ, ಗ್ರಾಮಸ್ಥರನ್ನು ಒಂದೆಡೆ ಸೇರಿಸುವ ಹಾಗೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬೆಸೆಯುವ ಮಹತ್ವದ ವೇದಿಕೆಗಳಾಗಿವೆ ಎಂದು ತಿಳಿಸಿದರು.
ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿ ನೆಲೆಸಲು ಇಂತಹ ದೇವತಾ ಕಾರ್ಯಕ್ರಮಗಳನ್ನು ಭಕ್ತರು ನಿರಂತರವಾಗಿ ನಡೆಸುವುದು ಅಗತ್ಯವಾಗಿದೆ. ಗ್ರಾಮದ ಜನರೆಲ್ಲರೂ ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಪೂರ್ವಿಕರಿಂದ ನಡೆದುಕೊಂಡು ಬಂದಿರುವ ಸಂಪ್ರ ದಾಯ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನರು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರು ಹಾಗೂ ನಿವೃತ್ತ ಶಿಕ್ಷಕರಾದ ಪಿಚನ್ನೇಗೌಡ, ಎನ್. ನಂಜುಂಡಯ್ಯ, ಟಿ. ಗಂಗಮರಾಯನವರು, ಶಿಕ್ಷಕರಾದ ಲಕ್ಷ್ಮಣಯ್ಯ, ಮಹದೇವಯ್ಯ, ಗಂಗಾಧರ್, ರೇಣುಕಯ್ಯ ಹಾಗೂ ಎನ್. ಕೇಶವಮೂರ್ತಿ, ಪ್ರಗತಿಪರ ರೈತರಾದ ಶಿವಣ್ಣ, ಎನ್.ನಂಜುಂಡಯ್ಯ, ನಂದೀಶ, ರಮೇಶ್, ಪ್ರದೀಪ್, ಗಿರೀಶ್, ಶಂಕರ, ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಆರ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







